ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಹುದ್ದೆಗಾಗಿ ಭಾರೀ ಲಾಬಿ ನಡೆಯುತ್ತಿದೆ. ಈಗಾಗಲೇ ಅಧ್ಯಕ್ಷ ಆಯ್ಕೆಗೆ ಕಸರತ್ತು ನಡೆಯುತ್ತಿದ್ದು, ಹಲವು ಆಕಾಂಕ್ಷಿಗಳಾಗಿದ್ದಾರೆ.
ಚಿಕ್ಕಮಗಳೂರು [ಸೆ.04] : ಆರು ವರ್ಷದ ಬಳಿಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯುತ್ತಿದ್ದು, ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲು ವಿಧಾನಪರಿಷತ್ತು ಸದಸ್ಯ ಗೋಪಾಲಸ್ವಾಮಿ ಅವರನ್ನು ಕೆಪಿಸಿಸಿ ವೀಕ್ಷಕರನ್ನಾಗಿ ನೇಮಕ ಮಾಡಿದೆ. ಅವರು, ಸೆ.5ರಂದು ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಾರೆ.
ವೀಕ್ಷಕರು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಹಾಗೂ ಮುಖಂಡರ ಅಭಿಪ್ರಾಯವನ್ನು ಚಿಕ್ಕಮಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವೈಯಕ್ತಿಕವಾಗಿ ಪಡೆಯಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಕಡೂರು, 11 ಗಂಟೆಗೆ ತರೀಕೆರೆ, ಮಧ್ಯಾಹ್ನ 12 ಗಂಟೆಗೆ ಶೃಂಗೇರಿ, 2 ಗಂಟೆಗೆ ಮೂಡಿಗೆರೆ, 3 ಗಂಟೆಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ತಿಳಿಸಿದ್ದಾರೆ.
6 ವರ್ಷ ಅಧ್ಯಕ್ಷರಾಗಿ ಸೇವೆ: ಡಾ. ಡಿ.ಎಲ್. ವಿಜಯಕುಮಾರ್ 6 ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ಪಕ್ಷ ಬದಲಾವಣೆ ಮಾಡಿತ್ತು. ಆದರೆ, ವಿಜಯಕುಮಾರ್ ಅವರನ್ನು ಇದೇ ಸ್ಥಾನದಲ್ಲಿ ಮುಂದುವರಿಸಿಕೊಂಡು ಹೋಗಲಾಗಿತ್ತು. ಮುಂದಿನ ಅವಧಿಗೆ ಬೇರೆಯವರಿಗೆ ಅವಕಾಶ ನೀಡಬೇಕೆಂದು ಅವರು ಕೋರಿಕೊಂಡ ಮೇರೆಗೆ ಕೆಪಿಸಿಸಿ, ಜಿಲ್ಲೆಯ ಹೊಸ ಅಧ್ಯಕ್ಷರ ಆಯ್ಕೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಗೋಪಾಲಸ್ವಾಮಿ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ಪಕ್ಷ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲು ಕಳುಹಿಸಿಕೊಡುತ್ತಿದೆ.
ಆಕಾಂಕ್ಷಿಗಳು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ಬೇರೆ ಜಿಲ್ಲೆಗಳಲ್ಲಿ ಭಾರಿ ಡಿಮ್ಯಾಂಡ್ ಇದ್ದು, ಹಲವು ಮಂದಿ ರಾಜ್ಯ ನಾಯಕರ ಮಟ್ಟದಲ್ಲಿ ಲಾಭಿ ನಡೆಸುತ್ತಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾತ್ರ ಲಾಭಿ ನಡೆಸಿ, ಅಧ್ಯಕ್ಷ ಸ್ಥಾನ ಪಡೆಯಬೇಕೆಂಬ ಹಂಬಲ ಯಾರಿಗೂ ಇಲ್ಲವಾಗಿದೆ. ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಎಂಬ ಮನಸ್ಥಿತಿಯಲ್ಲಿದ್ದಾರೆ.
ಸದ್ಯ ಜಿಲ್ಲಾ ಕಾಂಗ್ರೆಸ್ ಆಕ್ಷಾಂಕ್ಷಿಗಳಲ್ಲಿ ರೇಸ್‌ನಲ್ಲಿ ವಿಧಾನಪರಿಷತ್ತು ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಎನ್.ಆರ್. ಪುರದ ಡಾ. ಅಂಶುಮಂತ್, ಕಳಸ ಪ್ರಭಾಕರ್, ಬೀರೂರು ವಿನಾಯಕ, ಎಚ್.ಎನ್. ಮಹೇಶ್, ಶಿವಾನಂದಸ್ವಾಮಿ ಹೆಸರುಗಳು ಕೇಳಿಬರುತ್ತಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೋರ್ ಕಮಿಟಿ: ಗೋಪಾಲಸ್ವಾಮಿ ಅವರು ಅಭಿಪ್ರಾಯ ಸಂಗ್ರಹಿಸಿ ಕೆಪಿಸಿಸಿಗೆ ಒಪ್ಪಿಸಲಿದ್ದಾರೆ. ಅಲ್ಲಿರುವ ಕೋರ್ ಕಮಿಟಿಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ಕೋರ್ ಕಮಿಟಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಇದ್ದಾರೆ. ಜಿಲ್ಲೆಯಲ್ಲಿ ಸೊರಗಿರುವ ಕಾಂಗ್ರೆಸ್ ಪಕ್ಷಕ್ಕೆ ಯಾರು ಸಾರಥಿಯಾಗುತ್ತಾರೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.