ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೊತೆ ಪ್ರಶಸ್ತಿಗೆ ಭಾಜನರಾಗಿದ್ದ ಮಾಜಿ ಸಂಸದ ರಾಮುಲು| ಗಂಗಾವತಿಗೆ 1972ರಲ್ಲಿ ಎಚ್.ಜಿ. ರಾಮುಲು ಪುತ್ರಿ ವಿವಾಹಕ್ಕೆ ಆಗಮಿಸಿದ್ದ ಎಸ್‌ಪಿಬಿ|
ರಾಮಮೂರ್ತಿ ನವಲಿ
ಗಂಗಾವತಿ(ಸೆ.26): ರಾಷ್ಟ್ರ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ ಪಡೆದಿದ್ದ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪಡೆದಿರುವುದು ಈ ಭಾಗದ ಅಭಿಮಾನಿಗಳ ನೆನಪಿನಂಗಳದಲ್ಲಿ ಉಳಿದಿದೆ.
ಆಗಸ್ಟ್ 18, 2008ರಲ್ಲಿ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಜರುಗಿದ ಶ್ರೀ ರಾಘವೇಂದ್ರಸ್ವಾಮಿಗಳ ಆರಾಧನೋತ್ಸವ ಸಂದರ್ಭದಲ್ಲಿ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕೊಪ್ಪಳದ ಸಂಸದರಾಗಿದ್ದ ಎಚ್.ಜಿ. ರಾಮುಲು ಅವರಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಅಂದಿನ ಸಂದರ್ಭದಲ್ಲಿ ಮಠಾಧೀಶರಾಗಿದ್ದ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು ಪ್ರದಾನ ಮಾಡಿದ್ದರು.
ಮಂತ್ರಾಲಯದಲ್ಲಿ ಎಸ್‌ಪಿಬಿ ಪ್ರಶಸ್ತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಈ ಭಾಗದ ಸಂಗೀತಾಭಿಮಾನಿಗಳ ದಂಡೇ ಹರಿದುಬಂದಿತ್ತು. ಕಲಬುರ್ಗಿ, ಯಾದಗಿರಿ, ಕೊಪ್ಪಳ, ಗಂಗಾವತಿ, ಸಿಂಧನೂರು, ರಾಯಚೂರು ಸೇರಿದಂತೆ ಆಂಧ್ರದ ವಿವಿಧ ಜಿಲ್ಲೆಗಳ ಸಂಗೀತಾಸಕ್ತರು ಕಾರ್ಯಕ್ರಮ ವೀಕ್ಷಿಸಲು ಬಂದಿದ್ದರು. ಇದೇ ಸಂದರ್ಭದಲ್ಲಿ ಗಂಗಾವತಿಯ ಮಾಜಿ ಸಂಸದ ಎಚ್.ಜಿ. ರಾಮುಲು ಅವರೂ ರಾಘವೇಂದ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿಯ ಜೊತೆಗೆ 1 ಲಕ್ಷ ನಗದು ಪಡೆದಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಅದನ್ನು ಮಂತ್ರಾಲಯ ಮಠದ ಸಂಸ್ಕೃತ ವಿದ್ಯಾ ಪೀಠಕ್ಕೆ ಸಮರ್ಪಿಸಿದ್ದರು.
ಮೊಹಮ್ಮದ್ ರಫಿ ಕೋಟ್ ಧರಿಸಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ರು ಎಸ್‌ಪಿಬಿ
ಗಂಗಾವತಿ ನಗರದಲ್ಲಿ ಕಳೆದ 10 ವರ್ಷಗಳ ಹಿಂದೆ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಣ್ಯಂ ಅವರ ಕಾರ್ಯಕ್ರಮ ಆಯೋಜಿಸಲು ಅಭಿಮಾನಿಗಳು ನಿರ್ಧರಿಸಿದ್ದರು. ಆದರೆ. ಈ ಯತ್ನ ವಿಫಲವಾಯಿತು. ಅವರ ಕಾರ್ಯಕ್ರಮ ಆಯೋಜನೆ ಸಾಧ್ಯವಾಗದಿರುವ ಕೊರಗು ಸಂಗೀತಾಭಿಮಾನಿಗಳಲ್ಲಿ ಕಾಡುತ್ತಿದೆ. ವಾಣಿಜ್ಯ ಕೇಂದ್ರ ಎನಿಸಿಕೊಂಡ ಗಂಗಾವತಿ ನಗರದಲ್ಲಿ ಹೆಸರಾಂತ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಆಯೋಜಿಸಿದ ಉದಾಹರಣೆಗಳಿವೆ. ಡಾ. ರಾಜಕುಮಾರ, ವಿಷ್ಣುವರ್ಧನ್, ಶ್ರೀನಾಥ, ಹಂಸಲೇಖ, ರಾಜೇಶ ಕೃಷ್ಣನ್, ವಿಜಯಪ್ರಕಾಶ, ಸುದೀಪ್, ಖ್ಯಾತ ತಬಲವಾದಕ ರಘುನಾಥ ನಾಕೋಡ್, ಶಂಕರನಾಗ್, ಅನಂತನಾಗ್ ಸೇರಿದಂತೆ ಖ್ಯಾತ ನಟರು, ಸಂಗೀತಗಾರರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಅಭಿಮಾನಿಗಳಿಗೆ ಆತ್ಮೀಯರಾಗಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕಾರ್ಯಕ್ರಮ ನಡೆಸದೆ ಇರುವ ಕೊರುಗು ಅಭಿಮಾನಿಗಳಲ್ಲಿ ಸದಾ ಉಳಿಯಲಿದೆ.
ರಾಮುಲು ಪುತ್ರಿಯ ವಿವಾಹಕ್ಕೆ ಭಾಗಿ
ಗಂಗಾವತಿ ಮಾಜಿ ಸಂಸದ ಎಚ್.ಜಿ. ರಾಮುಲು ಅವರ ಪುತ್ರಿ ವನಜಾಕ್ಷಿ ಅವರ ಮದುವೆಯ ಸಮಾರಂಭದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆಗಮಿಸಿದ್ದರು. 1972ರಲ್ಲಿ ಸರೋಜನಗರದಲ್ಲಿರುವ ನಿವಾಸದಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ಸಂಜೆ 2 ಗಂಟೆಗಳ ಕಾಲ ಸಂಗೀತ ರಸದೌತಣ ನೀಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಚಳಿ ಜ್ವರ ಕಾಣಿಸಿಕೊಂಡಿದ್ದರಿಂದ ಸಂಗೀತ ಕಾರ್ಯಕ್ರಮ ಮೊಟಕುಗೊಳಿಸಿ ಬೆಂಗಳೂರಿಗೆ ತೆರಳಿದ್ದರು. ಈಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ನೆನೆಪು ಮಾತ್ರ.
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ದೇಶದ ಸಂಪತ್ತಾಗಿದ್ದರು. 40 ಸಾವಿರ ಹಾಡುಗಳನ್ನು ಹಾಡಿ 10ಕ್ಕೂ ಹೆಚ್ಚು ಭಾಷೆಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿ ಅಭಿಮಾನಿಗಳ ಹೃದಯದಲ್ಲಿ ಉಳಿದಿದ್ದರು. ಅವರು ಕಳೆದ 50 ವರ್ಷಗಳ ಹಿಂದೆ ನನ್ನ ಪುತ್ರಿಯ ವಿವಾಹಕ್ಕೆ ಗಂಗಾವತಿಗೆ ಆಗಮಿಸಿ ಸಂಗೀತ ರಸದೌತಣ ನೀಡಿದ್ದರು. ಅಲ್ಲದೆ ಮಂತ್ರಾಲಯದಲ್ಲಿ ಅವರ ಜೊತೆಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಅಂತಹ ಗಾಯಕರನ್ನು ನಾವು ಕಳೆದು ಕೊಂಡಿರುವುದಕ್ಕೆ ನೋವುಂಟಾಗಿದೆ ಎಂದು ಮಾಜಿ ಸಂಸದ ಎಚ್.ಜಿ.ರಾಮುಲು ಅವರು ತಿಳಿಸಿದ್ದಾರೆ.