ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಮಾವು ಸಂಸ್ಕರಣಾ ಘಟಕ: ಸಚಿವ ಮುನಿರತ್ನ

By Govindaraj SFirst Published Apr 14, 2022, 7:03 PM IST
Highlights

ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಅಭಿವೃದ್ಧಿ ಮಂಡಳಿಗೆ ಅಗತ್ಯವಾದ ಅನುದಾನವನ್ನು ಒದಗಿಸುವುದು ಮತ್ತು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರಿಗೆ ಅನುಕೂಲವಾಗಲು ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.

ಬೆಂಗಳೂರು (ಏ.14): ಮಾವು ಅಭಿವೃದ್ಧಿ (Mango Development) ಮತ್ತು ಮಾರುಕಟ್ಟೆ ಅಭಿವೃದ್ಧಿ (Market development) ಮಂಡಳಿಗೆ ಅಗತ್ಯವಾದ ಅನುದಾನವನ್ನು ಒದಗಿಸುವುದು ಮತ್ತು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾವು ಬೆಳೆಗಾರರಿಗೆ ಅನುಕೂಲವಾಗಲು ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ತೋಟಗಾರಿಕೆ ಸಚಿವ ಮುನಿರತ್ನ (Munirathna) ಹೇಳಿದರು. 

ಕರ್ನಾಟಕ ಪಶು ವೈದ್ಯಕೀಯ ಪರಿಷತ್‌ ಸಭಾಂಗಣದಲ್ಲಿ ಬುಧವಾರ ನಡೆದ ಮಾವು ಖರೀದಿದಾರರು ಮತ್ತು ಮಾರಾಟಗಾರರ ಸಮಾವೇಶ ಉದ್ಘಾಟಿಸಿದ ಮಾತನಾಡಿದ ಅವರು, ಹಾನಗಲ್‌ನಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಘಟಕ ವೀಕ್ಷಣೆ ಮಾಡಿದ್ದು, ಕೋಲಾರ- ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗೆ ಅನುಕೂಲವಾಗುವಂತೆ ಘಟಕ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದರು. 

ರಫ್ತಿನಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಮಾವು ರಫ್ತಿನಲ್ಲಿ ಮಹಾರಾಷ್ಟ್ರ (Maharashtra) ಹಾಗೂ ಆಂಧ್ರ ಪ್ರದೇಶ (Andhra Pradesh) ಮುಂಚೂಣಿಯಲ್ಲಿದ್ದು, ಕರ್ನಾಟಕ (Karnataka) ಮೂರನೇ ಸ್ಥಾನದಲ್ಲಿದೆ. ಮಾವು ಉತ್ಪಾದನೆ ಸೇರಿದಂತೆ ಎಲ್ಲ ವಿಷಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವನ್ನು ರಫ್ತಿನಲ್ಲಿ ಪ್ರಥಮ ಸ್ಥಾನಕ್ಕೇರುವಂತೆ ಮಾಡಬೇಕಿದೆ ಎಂದು ತಿಳಿಸಿದರು.

Bengaluru ಲಾಲ್‌ಬಾಗ್‌ನಲ್ಲಿ ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ (Dr K Sudhakar) ಮಾತನಾಡಿ, ಮಾವು ಅಭಿವೃದ್ಧಿ ಮಂಡಳಿಗೆ ಸರ್ಕಾರದಿಂದ ನೀಡುತ್ತಿರುವ ಅನುದಾನ ಸಾಲದು. ಈ ಬಾರಿ 4 ಕೋಟಿ ರು. ಅನುದಾನ ಒದಗಿಸಬೇಕು. ಜಿಲ್ಲಾ ಮಟ್ಟದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಬೇಕು. ರೈತರೇ ಅದಕ್ಕೆ ಮಾಲಿಕರಾಗಿರಬೇಕು. ಖರೀದಿದಾರರ ಹಿಡಿತಕ್ಕೆ ಸಿಲುಕದಂತೆ ಕ್ರಮ ವಹಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ದೊರಕುವಂತೆ ಮಾಡಬೇಕು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಲೆ ನಿಗದಿಗೆ ವ್ಯವಸ್ಥೆ ಮಾಡಬೇಕು ಎಂದು ತೋಟಗಾರಿಕಾ ಸಚಿವರಿಗೆ ಮನವಿ ಮಾಡಿದರು.

ಸರ್ಕಾರ ಬೆಳೆಗಾರರಿಗೆ ನೆರವಾಗಲಿ: ಮಾವು ಮತ್ತು ಮಾರುಕಟ್ಟೆಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌ ಮಾತನಾಡಿ, ಕೊರೋನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಸಂಕಷ್ಟದಲ್ಲಿರುವ ಮಾವು ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕು ಎಂದರು. ಮಾವು ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಿ.ನಾಗರಾಜ್‌, ಮಾಜಿ ಶಾಸಕ ಎಂ.ರಾಜಣ್ಣ, ನಬಾರ್ಡ್‌ನ ಎಜಿಎಂ ಅನಿಲ್‌ಕುಮಾರ್‌ ರಾವತ್‌, ಕೆಪೆಕ್‌ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ಪರವೇಜ್‌ ಹ ಬಂತನಾಳ, ಅಪೆಡಾ ಉಪ ಪ್ರಧಾನ ವ್ಯವಸ್ಥಾಪಕ ಆರ್‌.ರವೀಂದ್ರ ಮತ್ತಿತರರಿದ್ದರು.

Karnataka Politics: ಬಿಜೆಪಿಯಲ್ಲಿ ನೆಮ್ಮದಿಯಾಗಿದ್ದೇವೆ, ಪಕ್ಷ ಬಿಡಲ್ಲ: ಮುನಿರತ್ನ

30ಕ್ಕೂ ಹೆಚ್ಚು ವ್ಯಾಪಾರಸ್ಥರು ಭಾಗಿ: ಸಮಾವೇಶಕ್ಕೆ ಸುಮಾರು 30ಕ್ಕೂ ಹೆಚ್ಚು ಉತ್ತರ ಭಾರತದ ವ್ಯಾಪಾರಿಗಳು ಆಗಮಿಸಿದ್ದರು. ಅಲ್ಲದೆ, 25ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪೆನಿಗಳು. 150ಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದರು. ಈ ವ್ಯಾಪಾರಿಗಳು ಗುರುವಾರ ಕೋಲಾರ ಮತ್ತು ರಾಮನಗರದ ಮಾವಿನ ತೋಟಗಳಿಗೆ ಭೇಟಿ ನೀಡಲಿದ್ದಾರೆ. ರೈತರಿಂದಲೇ ಖರೀದಿಗೆ ವೇದಿಕೆ ಸೃಷ್ಟಿಸಲಾಗುತ್ತಿದೆ ಎಂದು ಮಾವು ಅಭಿವೃದ್ಧಿ ಮಂಡಳಿ ಅಧಿಕಾರಿಗಳು ತಿಳಿಸಿದರು.

click me!