
ಮಂಗಳೂರು (ಏ.16): ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ನಗರಸಭೆಯ ಸಂಪೂರ್ಣ ವ್ಯಾಪ್ತಿ ಹಾಗೂ ಸೋಮೇಶ್ವರ ಪುರಸಭೆಯ ಹಲವು ಪ್ರದೇಶಗಳಲ್ಲಿ 186.45 ಕೋಟಿ ರು. ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಮೆಸ್ಕಾಂ ಭವನದಲ್ಲಿ ಈ ಕುರಿತು ಅಧಿಕಾರಿಗಳೊಂದಿಗೆ ಮಹತ್ವದ ಸಮನ್ವಯ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪೆರಿಬೈಲ್, ಕುಂಪಲ, ಮೂರುಕಟ್ಟೆ, ಕೊಲ್ಯ, ಬಗಂಬಿಲ, ಉಚ್ಚಿಲದಲ್ಲಿ ಭೂಗತ ಕೇಬಲ್ ಅಳವಡಿಸಲು ನಿರ್ಧರಿಸಲಾಗಿದೆ ಎಂದರು.
ಮಂಗಳೂರು ನಗರದಲ್ಲೂ ಕೇಬಲ್: ಉಳ್ಳಾಲ ಮಾತ್ರವಲ್ಲದೆ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕುದ್ರೋಳಿ- ಬಿಜೈ- ಕೆಎಸ್ಸಾರ್ಟಿಸಿ- ಉರ್ವ ಸ್ಟೋರ್ ಭಾಗದಲ್ಲಿ 67 ಕೋಟಿ ರು. ವೆಚ್ಚದಲ್ಲಿ ಹಾಗೂ ವಿಮಾನ ನಿಲ್ದಾಣಕ್ಕೆ ಸಾಗುವ ಲೈನ್‌ನಲ್ಲಿ 51 ಕೋಟಿ ರು. ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಇದೇ ಸಂದರ್ಭ ಖಾದರ್ ಹೇಳಿದರು.
ಉಳ್ಳಾಲದಲ್ಲಿ 144.16 ಕಿ.ಮೀ. ಎಚ್‌ಟಿ ಲೈನ್, 223.48 ಕಿ.ಮೀ ಎಲ್‌ಟಿ ಲೈನ್, ಮಣ್ಣಗುಡ್ಡೆ ಉಪವಿಭಾಗದಲ್ಲಿ 62.83 ಕಿಮೀ ಎಚ್‌ಟಿ ಲೈನ್, 45.70 ಕಿ.ಮೀ ಎಲ್‌ಟಿ ಲೈನ್, ಕಾವೂರು ಉಪವಿಭಾಗದಲ್ಲಿ 47.40 ಕಿಮೀ ಎಚ್‌ಟಿ ಲೈನ್, 48.75 ಕಿಮೀ ಎಲ್‌ಟಿ ಲೈನ್ ಭೂಗತ ಕೇಬಲ್ ಆಗಿ ಪರಿವರ್ತನೆಗೊಳ್ಳಲಿದೆ. ಉಳ್ಳಾಲದ ಪ್ರವಾಹ ಪೀಡಿತ ಪ್ರದೇಶದ 12 ಕಿ.ಮೀ ವ್ಯಾಪ್ತಿಯಲ್ಲಿ ಎಬಿ ಕೇಬಲ್ ಅಳವಡಿಸಲಾಗುವುದು ಎಂದು ತಿಳಿಸಿದರು.
24 ತಿಂಗಳಲ್ಲಿ ಕಾಮಗಾರಿ ಸಂಪೂರ್ಣ: ಇವೆಲ್ಲ ಕಾಮಗಾರಿ ಪೂರ್ಣವಾಗಲು 24 ತಿಂಗಳ ಅವಧಿ ನಿಗದಿಪಡಿಸಲಾಗಿದೆ. ಭೂಗತ ಕೇಬಲ್ ಅಳವಡಿಸಲು ದುಪ್ಪಟ್ಟು ಖರ್ಚು ತಗುಲಿದರೂ, ಇದರಿಂದ ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ, ಅವಘಡಗಳು ಉಂಟಾಗುವುದು ತಪ್ಪಲಿದೆ. ನಗರಗಳ ಸೌಂದರ್ಯ ವೃದ್ಧಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಲಿದೆ. ಹಾಗಾಗಿ ಕಾಮಗಾರಿ ವೇಳೆ ಕೊಂಚ ತೊಂದರೆ ಉಂಟಾದರೂ ಸಾರ್ವಜನಿಕರು ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಮಾತನಾಡಿ, ಮೆಸ್ಕಾಂ ವ್ಯಾಪ್ತಿಯಲ್ಲಿ ಈಗಾಗಲೇ ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ನಗರ ವ್ಯಾಪ್ತಿಯ ಕೆಲವೆಡೆ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಈವರೆಗೆ 1,055 ಕಿ.ಮೀ. ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸಲಾಗಿದೆ. ನೆಲದಡಿ 1.50 ಮೀಟರ್ ಆಳ ಮತ್ತು ಅರ್ಧ ಮೀಟರ್ ಅಗಲದಲ್ಲಿ ಈ ಕೇಬಲ್ ಅಳವಡಿಸಲಾಗುವುದು ಎಂದು ತಿಳಿಸಿದರು. ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಇದ್ದರು.
ಅವಿಭಜಿತ ದ.ಕ., ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಯೋಜನೆ ರೂಪಿಸಲು ಎನ್‌ಐಟಿಕೆ ತಜ್ಞರು ವಿನ್ಯಾಸ ತಯಾರಿಸಿದ್ದರು. ಅದನ್ನು ಕಂದಾಯ ಇಲಾಖೆಯವರು ಪರಿಶೀಲನೆ ಮಾಡುತ್ತಿದ್ದಾರೆ. ಅಗತ್ಯ ಕಾಲಾವಕಾಶ ಪಡೆದು ವ್ಯವಸ್ಥಿತವಾದ ಶಾಶ್ವತ ಯೋಜನೆ ರೂಪಿಸಲು ಸೂಚಿಸಲಾಗಿದೆ. ಕಡಲ್ಕೊರೆತದ ಅಪಾಯದ ಸ್ಥಳಗಳಲ್ಲಿ ಈಗಾಗಲೇ ತಡೆಗೋಡೆ ರಚಿಸಲಾಗಿದ್ದು ಅಲ್ಲಿ ಈ ಬಾರಿ ಸಮಸ್ಯೆ ಉಂಟಾಗದು ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.