ವಿಶ್ವಖ್ಯಾತ ಉಸೇನ್‌ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ತುಳುನಾಡಿನ ಕಂಬಳವೀರ!

By Kannadaprabha News  |  First Published Feb 13, 2020, 7:45 AM IST

ಬೋಲ್ಟ್‌ಗಿಂತ ಸ್ಪೀಡಾಗಿ ಓಡಿದ ಕಂಬಳವೀರ!| ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿದ ಮೂಡುಬಿದಿರೆಯ ಶ್ರೀನಿವಾಸಗೌಡ| 13.62 ಸೆಕೆಂಡಲ್ಲಿ 142.5 ಮೀ. ದೂರಕ್ಕೆ ಓಟ| ಇದು ವಿಶ್ವಖ್ಯಾತ ಉಸೇನ್‌ ಬೋಲ್ಟ್‌ ದಾಖಲೆಗಿಂತ ವೇಗ


ಸುಭಾಶ್ಚಂದ್ರ ಎಸ್‌.ವಾಗ್ಳೆ

ಉಡುಪಿ[ಫೆ.13]: ಉಸೇನ್‌ ಬೋಲ್ಟ್‌ ಬಗ್ಗೆ ಎಲ್ಲರಿಗೂ ಗೊತ್ತು. ಆತನನ್ನು ಮೀರಿಸಬಲ್ಲ ಓಟಗಾರ ಜಗತ್ತಿನಲ್ಲಿ ಮತ್ತೊಬ್ಬನಿಲ್ಲ. ತನ್ನ ದಾಖಲೆಗಳನ್ನು ತಾನೇ ಮುರಿದು ಮುನ್ನುಗ್ಗುತ್ತಿದ್ದ ಆ ಛಲದಂಕಮಲ್ಲ 2009ರಲ್ಲಿ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್‌ ಅವಧಿಯಲ್ಲಿ ಕ್ರಮಿಸಿದ್ದು ಇಂದಿಗೂ ಮುರಿಯದ ವಿಶ್ವದಾಖಲೆಯಾಗಿಯೇ ಉಳಿದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ (28) ಅದಕ್ಕಿಂತಲೂ ವೇಗವಾಗಿ ಓಡಿ ಅಚ್ಚರಿ ಮೂಡಿಸಿದ್ದಾರೆ! ಅದೂ ಕೆಸರಿನಿಂದ ಕೂಡಿದ ಕಂಬಳದ ಗದ್ದೆಯಲ್ಲಿ ಕೋಣಗಳ ಜೊತೆಗೆ!

Tap to resize

Latest Videos

undefined

ಫೆ.1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್‌ ಕರೆ(ಕಂಬಳದ ಕೋಣಗಳ ಟ್ರ್ಯಾಕ್‌)ಯನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಮಾತ್ರವಲ್ಲದೆ ಇದೀಗ ಶ್ರೀನಿವಾಸ ಗೌಡ ಅವರನ್ನು ಉಸೇನ್‌ ಬೋಲ್ಟ್‌ ಜೊತೆ ಹೋಲಿಸಲಾಗುತ್ತಿದೆ.

ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿ ನೋಡಿದರೆ ಅದು 9.55 ಸೆಕೆಂಡ್‌ ಆಗುತ್ತದೆ. ಇಲ್ಲಾ ಬೋಲ್ಟ್‌ ವಿಶ್ವದಾಖಲೆ ಗಣನೆಗೆ ತೆಗೆದುಕೊಂಡಲ್ಲಿ ಅವರಿಗೆ 142.50 ಮೀ. ಕ್ರಮಿಸುವುದಕ್ಕೆ ಬೇಕಾಗಬಲ್ಲ ಸಮಯ 13.65 ಸೆಕೆಂಡ್‌. ಹೇಗೆ ತಾಳೆ ಹಾಕಿದರೂ ವಿಶ್ವನಾಥ್‌ ಗೌಡ ಅವರು ಉಸೇನ್‌ ಬೋಲ್ಟ್‌ಗಿಂತ 0.03 ಸೆಕೆಂಡ್‌ಗಳಷ್ಟುಮುಂದಿದ್ದಾರೆ.

ಇಬ್ಬರೊಳಗೆ ಹೋಲಿಕೆ ಅಸಾಧ್ಯ:

ಗಟ್ಟಿಮುಟ್ಟಾದ ವ್ಯವಸ್ಥಿತ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಓಡುವ ಉಸೇನ್‌ ಬೋಲ್ಟ್‌ಗೂ, ಕಾಲು ಹೂತು ಹೋಗುವ ಕಂಬಳದ ಕೆಸರುಗದ್ದೆಯಲ್ಲಿ ಓಡುವ ಶ್ರೀನಿವಾಸ ಗೌಡರ ಸಾಧನೆಗಳಿಗೆ ಹೋಲಿಕೆ ಸಾಧ್ಯವಿಲ್ಲ. ಕಂಬಳದ ಕರೆಯಲ್ಲಿ ಓಡುವುದು ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಓಡುವುದಕ್ಕಿಂತಲೂ ಕಷ್ಟಕರವಾದುದು. ಕರೆಯಲ್ಲಿ ಮೊಣಕಾಲ ಗಂಟಿನ ವರೆಗೆ ಕೆಸರು ತುಂಬಿರುತ್ತದೆ, ಅದೂ ಬರಿಗಾಲಿನಲ್ಲಿ ಓಡಬೇಕಾಗುತ್ತದೆ. ಒಂದು ಕೈಯಲ್ಲಿ ಮುಂದೆ ಓಡುವ ಕೋಣಗಳಿಗೆ ಕಟ್ಟಿದ ಹಗ್ಗ ಇದ್ದರೆ, ಇನ್ನೊಂದು ಕೈಯಲ್ಲಿ ಬಾರ್ಕೋಲು(ಬೆತ್ತ) ಇರುತ್ತದೆ. ಆದರೂ ಇಬ್ಬರ ಸಾಧನೆಯನ್ನು ತುಲನೆ ಮಾಡಿದರೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಓಡುವ ಶ್ರೀನಿವಾಸ ಗೌಡ ಅವರೇ ಬೋಲ್ಟಿಗಿಂತ ಕೂದಲೆಳೆಯ ಅಂತರದಲ್ಲಿ ಮುಂದಿದ್ದಾರೆ ಎನ್ನುವುದು ವಾಸ್ತವ.

ಬೆಂಗಳೂರು, ಶಿವಮೊಗ್ಗದಲ್ಲಿ ಕಂಬಳ ನಡೆಸಲು ಚಿಂತನೆ: ಡಿಸಿ​ಎಂ

ಯಾವ ತರಬೇತಿಯೂ ಇಲ್ಲ!:

ಅಷ್ಟಕ್ಕೂ ಕಂಬಳಕರೆಯ ಉಸೇನ್‌ ಬೋಲ್ಟ್‌ ಶ್ರೀನಿವಾಸ ಗೌಡ ಅವರು ಯಾವುದೇ ಅಕಾಡೆಮಿಕ್‌ ತರಬೇತಿ ಪಡೆದವರಲ್ಲ. ಮೂಲತಃ ಅಥ್ಲೀಟ್‌ ಕೂಡ ಅಲ್ಲ. ಒಂದು ದಿನವೂ ಜಿಮ್‌ಗೆ ಹೋದವರಲ್ಲ. ಪೌಷ್ಟಿಕ ಆಹಾರ ಸೇವನೆ, ಡಯಟ್‌ಗಳನ್ನು ಅನುಸರಿಸಿದವರೂ ಅಲ್ಲ. ಆದರೆ ಅವರ ಸಿಕ್ಸ್‌ ಪ್ಯಾಕ್‌ ಹುರಿದೇಹ ಮಾತ್ರ ಯಾವ ಅಥ್ಲೀಟ್‌ಗೂ ಕಮ್ಮಿ ಇಲ್ಲ. ಅವರೆಷ್ಟುಮುಗ್ಧರೆಂದರೆ ತಾನು ಕಂಬಳ ಕ್ರೀಡೆಯ ಉಸೇನ್‌ ಬೋಲ್ಟ್‌ ಆಗಿದ್ದೇನೆ ಎಂಬ ಪರಿವೆ ಕೂಡ ಅವರಿಗಿಲ್ಲ. ಇನ್ನು ಅದನ್ನು ಪ್ರಚಾರ ಮಾಡುವುದಾಗಲಿ, ಅದರಿಂದ ಪ್ರಚಾರ ಪಡೆಯವುದಾಗಿ ಅವರಿಗೆ ಗೊತ್ತೇ ಇಲ್ಲ. ಉಸೇನ್‌ ಬೋಲ್ಟ್‌ ವಿಶ್ವವಿಖ್ಯಾತಿಯ ಜೊತೆಗೆ ಇಂದು ನೂರಾರು ಕೋಟಿ ರು.ಗಳನ್ನು ಸಂಪಾದಿಸಿದ್ದರೆ, ಶ್ರೀನಿವಾಸ ಗೌಡ ಮಾತ್ರ ಕಂಬಳದ ಸೀಸನ್‌ ಮುಗಿಯತ್ತಲೇ, ಪ್ರಚಾರವೇ ಇಲ್ಲದೇ ಹೊಟ್ಟೆಪಾಡಿಗೆ ಕಟ್ಟಡಗಳ ಕೆಲಸಕ್ಕೆ ಹೋಗುತ್ತಾರೆ.

ಮೂಡುಬಿದಿರೆಯ ಮಿಯಾರು ಗ್ರಾಮದ ಅಶ್ವತ್ಥಪುರ ಎಂಬಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಶ್ರೀನಿವಾಸ ಗೌಡರು 10ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾರೆ. 18ನೇ ವರ್ಷಕ್ಕೇ ಕಂಬಳದ ಗದ್ದೆಗೆ ಧುಮುಕಿದ ಅವರು ಕಳೆದ 10 ವರ್ಷಗಳಿಂದ ನೂರಾರು ಪದಕಗಳನ್ನು ಕೋಣಗಳ ಮಾಲಕರನ್ನು ಗೆಲ್ಲಿಸಿ ಕೊಟ್ಟಿದ್ದಾರೆ.

ಕಂಬಳ ವೇಗ ಅಳೆಯಲು ಈಗ ಎಲೆಕ್ಟ್ರಾನಿಕ್‌ ವ್ಯವಸ್ಥೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 21 ಕಡೆಗಳಲ್ಲಿ ಕಂಬಳ ನಡೆಯುತ್ತದೆ. ಕಳೆದ ಮೂರು ವರ್ಷಗಳಿಂದ ಕಂಬಳ ಸಂಘಟಕರು ಸೇರಿಕೊಂಡು ಜಿಲ್ಲಾ ಕಂಬಳ ಸಮಿತಿಯನ್ನು ರೂಪಿಸಿಕೊಂಡು ಸ್ಪರ್ಧೆಯ ನಿಯಮಗಳನ್ನು ಏಕರೂಪಕ್ಕೆ ತಂದಿದ್ದಾರೆ. ಎಲ್ಲೆಡೆಯೂ ಸಮಿತಿಯಿಂದ ನೇಮಿಸ್ಪಟ್ಟತೀರ್ಪುಗಾರರೇ ಕಾರ್ಯನಿರ್ವಹಿಸುತ್ತಾರೆ. ಜೊತೆಗೆ ಸ್ಪರ್ಧೆಗಳಲ್ಲಿ ಫಲಿತಾಂಶವನ್ನು ನಿಖರವಾಗಿ ದಾಖಲಿಸಿಕೊಳ್ಳುವುದಕ್ಕೆ ಎಲೆಕ್ಟ್ರಾನಿಕ್‌ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಶ್ರೀನಿವಾಸ ಗೌಡರ ಈ ದಾಖಲೆಯ ಓಟವನ್ನು ಕೂಡ ಈ ತಂತ್ರಜ್ಞಾನದ ಮೂಲಕ ನಿಖರವಾಗಿ ದಾಖಲಿಸಿಕೊಳ್ಳಲಾಗಿದೆ. ಒಟ್ಟು ನೇಗಿಲು, ಹಗ್ಗ, ಅಡ್ಡ ಹಲಗೆ, ಕಣೆ ಹಲಗೆ ಎಂಬ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಕಂಬಳ ಸ್ಪರ್ಧೆ ನಡೆಯುತ್ತದೆ. ಇವುಗಳಲ್ಲಿ ನೇಗಿಲು ಮತ್ತು ಹಗ್ಗ ವಿಭಾಗಗಳಲ್ಲಿ ಮಾತ್ರ ಟೈಮಿಂಗ್‌ ಲೆಕ್ಕ ಹಾಕಲಾಗುತ್ತದೆ. ಈ ಎರಡು ವಿಭಾಗಗಳಲ್ಲೂ ಶ್ರೀನಿವಾಸಗೌಡರದು ಎತ್ತಿದ ಕೈ. ಸಾಮಾನ್ಯವಾಗಿ ಈ ವಿಭಾಗಗಳನ್ನು 15ರಿಂದ 16 ಸೆಕೆಂಡ್‌ಗಳಲ್ಲಿ ಮುಗಿಸುವ ಕಂಬಳವೀರರು ಜಿಲ್ಲೆಯಲ್ಲಿ ಬೇಕಾದಷ್ಟುಮಂದಿ ಇದ್ದಾರೆ. ಆದರೆ ಇಷ್ಟುಕಡಿಮೆ ಅವಧಿಯಲ್ಲಿ ಗುರಿ ತಲುಪಿರುವುದು ಇದೇ ಮೊದಲು.

ನಮ್ಮ ಸಾಧನೆಯಲ್ಲಿ ಕೋಣಗಳದ್ದೂ ಪಾತ್ರ

ಕಂಬಳ ಕ್ರೀಡೆಯಲ್ಲಿ ಹೆಸರು ಗಳಿಸಬೇಕು ಅಂತ ನಾನು ಕೋಣಗಳನ್ನು ಓಡಿಸುವುದಕ್ಕೆ ಶುರು ಮಾಡಿದ್ದು. ನನಗೆ ಕೋಣಗಳನ್ನು ಓಡಿಸುವುದು ಬಹಳ ಖುಷಿ ಕೊಡುತ್ತದೆ ಹೊರತು ಅದರಲ್ಲಿ ಬೇರೆ ಲಾಭ ಇಲ್ಲ. ನಮ್ಮ ಸಾಧನೆಯಲ್ಲಿ ಕೋಣಗಳದ್ದೂ ಪಾತ್ರ ಇದೆ, ಅವು ಚೆನ್ನಾಗಿ ಓಡಿದರೆ ಮಾತ್ರ ನಾವು ಕೂಡ ಅಷ್ಟೇ ಚೆನ್ನಾಗಿ ಓಡಿ ಸಾಧನೆ ಮಾಡುವುದಕ್ಕಾಗುತ್ತದೆ.

- ಶ್ರೀನಿವಾಸ ಗೌಡ, ಕಂಬಳ ದಾಖಲೆಯ ಸರದಾರ

ಕಂಬಳದ ವಿರುದ್ಧ ಮತ್ತೆ ಧ್ವನಿ ಎತ್ತಿದ ಪೆಟಾ..!

ತೀರಾ ಗ್ರಾಮೀಣ ಪ್ರದೇಶದಿಂದ ಬಂದ ಶ್ರೀನಿವಾಸ ಗೌಡರದ್ದು ಖಂಡಿಯವಾಗಿಯೂ ವಿಶ್ವಮಟ್ಟದ ಸಾಧನೆಯಾಗಿದ್ದು, ಅದನ್ನು ದಾಖಲೆ ಪುಸ್ತಕಗಳಲ್ಲಿ ಗುರುತಿಸಬೇಕಾಗಿದೆ.

- ವಿಜಯಕುಮಾರ್‌ ಕಂಗಿನಮನೆ, ಕಂಬಳ ತೀರ್ಪುಗಾರ

ದಾಖಲೆ

9.58 ಸೆಕೆಂಡ್‌: 2009ರಲ್ಲಿ ಜಮೈಕಾದ ಉಸೇನ್‌ ಬೋಲ್ಟ್‌ 100 ಮೀ. ಓಟ ಇಂದಿಗೂ ಮುರಿಯದ ದಾಖಲೆ

9.55 ಸೆಕೆಂಡ್‌: ಶ್ರೀನಿವಾಸಗೌಡರ 142.5 ಮೀ. ಓಟವನ್ನು 100 ಮೀ.ಗೆ ಇಳಿಸಿದರೆ ಅದಕ್ಕೆ ತಗುಲಿದ ಸಮಯ

ನೀವೂ ಶುಭ ಹಾರೈಸಿ

ದಕ್ಷಿಣ ಕನ್ನಡದ ಈ ಅಪರೂಪದ ಪ್ರತಿಭೆ ಶ್ರೀನಿವಾಸಗೌಡರಿಗೆ 9980218807 ನಂಬರ್‌ಗೆ ಕರೆ ಮಾಡಿ ಶುಭ ಕೋರಿ

click me!