ಅ.1ರಿಂದ ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗದ ತೆಕ್ಕೆಗೆ: ಪ್ರಯಾಣಿಕರಿಗೆ ಏನು ಪರಿಣಾಮ?

Published : Sep 30, 2026, 08:46 PM IST
Mangaluru Railway

ಸಾರಾಂಶ

ಮಂಗಳೂರು ರೈಲು ಪ್ರದೇಶ ಅಕ್ಟೋಬರ್ 1ರಿಂದ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ದಕ್ಷಿಣ ಪಶ್ಚಿಮ ರೈಲ್ವೆಯ ಮೈಸೂರು ವಿಭಾಗದ ಅಧೀನಕ್ಕೆ ಬರಲಿದೆ. ಸೆಪ್ಟೆಂಬರ್ 30ರ ಮಧ್ಯರಾತ್ರಿಯಿಂದ ಮಂಗಳೂರು..

ಮಂಗಳೂರು (ಸೆ.30): ದಕ್ಷಿಣ ರೈಲ್ವೆಯ ಕೇರಳದ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿರುವ ಮಂಗಳೂರು ರೈಲು ಪ್ರದೇಶ ಅ.1ರಿಂದ ದಕ್ಷಿಣ ಪಶ್ಚಿಮ ರೈಲ್ವೆಯ (ನೈಋತ್ಯ) ಮೈಸೂರು ವಿಭಾಗದ ಅಧೀನಕ್ಕೆ ಬರಲಿದ್ದು, ಆಡಳಿತ ಮತ್ತು ಕಾರ್ಯಾಚರಣಾ ನಿಯಂತ್ರಣ ಹಸ್ತಾಂತರಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸೆ.30 ಮತ್ತು ಅ.1ರ ಮಧ್ಯರಾತ್ರಿಯಿಂದ ಮಂಗಳೂರು ಪ್ರದೇಶದ ರೈಲು ಕಾರ್ಯಾಚರಣೆಯ ನಿಯಂತ್ರಣ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ವರ್ಗಾವಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಪಾಲಕ್ಕಾಡ್ ಹಾಗೂ ಮೈಸೂರು ವಿಭಾಗದ ಅಧಿಕಾರಿಗಳು ನಿಯಮಿತ ಸಭೆಗಳನ್ನು ನಡೆಸುತ್ತಿದ್ದು, ಯಾವುದೇ ಅಡಚಣೆಯಿಲ್ಲದೆ ರೈಲು ಸೇವೆ ಮುಂದುವರಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ.

ಸೆ.30ರಂದು ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡ ಮಂಗಳೂರಿಗೆ ಆಗಮಿಸಿ ಆಡಳಿತಾತ್ಮಕ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದ್ದಾರೆ. ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಳ್ಳುವವರೆಗೆ ಅಧಿಕಾರಿಗಳ ತಂಡ ಮಂಗಳೂರಿನಲ್ಲಿ ಕೆಲವು ದಿನಗಳ ಕಾಲ ಮೊಕ್ಕಾಂ ಹೂಡಲಿದೆ.

ಹೊಸ ಕಂಟ್ರೋಲ್ ಬೋರ್ಡ್

ಮಂಗಳೂರು ಪ್ರದೇಶದ ರೈಲು ಸಂಚಾರ ನಿಯಂತ್ರಣಕ್ಕಾಗಿ ಮೈಸೂರು ವಿಭಾಗೀಯ ಕೇಂದ್ರ ಕಚೇರಿಯಲ್ಲಿ ಹೊಸ ಕಂಟ್ರೋಲ್ ಬೋರ್ಡ್ ಸಿದ್ಧಪಡಿಸಲಾಗುತ್ತಿದೆ. ಸೆ.28ರಿಂದಲೇ ಮೈಸೂರು ವಿಭಾಗದ ಕಂಟ್ರೋಲರ್‌ಗಳಿಗೆ ಈ ಬೋರ್ಡ್ ವೀಕ್ಷಣಾ ಜವಾಬ್ದಾರಿ ನೀಡಲಾಗಿದ್ದು, ಮಂಗಳೂರು ಭಾಗದ ಕಾರ್ಯಾಚರಣೆಯ ಕುರಿತು ಅರಿವು ಪಡೆಯುತ್ತಿದ್ದಾರೆ.

ಸೆ.30ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗದ ಕಂಟ್ರೋಲರ್‌ಗಳು ನೇರ ಕಾರ್ಯಾಚರಣಾ ನಿಯಂತ್ರಣ ವಹಿಸಿಕೊಳ್ಳಲಿದ್ದಾರೆ. ಅಗತ್ಯವಿದ್ದಲ್ಲಿ ಪಾಲಕ್ಕಾಡ್ ವಿಭಾಗದ ಕಂಟ್ರೋಲರ್‌ಗಳು ವೀಕ್ಷಣಾ ಜವಾಬ್ದಾರಿಗೆ ಮೈಸೂರು ವಿಭಾಗದ ಅಧಿಕಾರಿಗಳಿಗೆ ಸಹಕಾರ ನೀಡಲಿದ್ದಾರೆ.

ಪ್ರಸ್ತುತ ಪಾಲಕ್ಕಾಡ್ ವಿಭಾಗದಲ್ಲಿ ಪಾಲಕ್ಕಾಡ್-ಶೋರ್‌ನೂರು, ಶೋರ್‌ನೂರು-ಕಣ್ಣೂರು ಹಾಗೂ ಕಣ್ಣೂರು-ಮಂಗಳೂರು ಎಂಬ ಮೂರು ಕಂಟ್ರೋಲ್ ಬೋರ್ಡ್‌ಗಳಿವೆ. ಮೈಸೂರು ವಿಭಾಗದಲ್ಲಿ ಮೈಸೂರು-ಚಾಮರಾಜನಗರ-ಹಾಸನ-ಬಂಟ್ವಾಳ, ಬೀರೂರು-ಚಿಕ್ಕಜಾಜೂರು-ಹರಿಹರ ಹಾಗೂ ಕಡೂರ್‌-ಚಿಕ್ಕಮಗಳೂರು-ಶಿವಮೊಗ್ಗ ವಿಭಾಗಗಳ ನಿಯಂತ್ರಣ ವ್ಯವಸ್ಥೆ ಇದೆ.

ಮಂಗಳೂರು ಪ್ರದೇಶವನ್ನು ಒಳಗೊಂಡಂತೆ ಹೊಸ ಗಡಿ ನಿಗದಿಪಡಿಸಿ ಕಂಟ್ರೋಲ್ ಬೋರ್ಡ್ ರೂಪಿಸಲಾಗುತ್ತಿದೆ. ಮಂಗಳೂರು ಭಾಗದಿಂದ ಹಾಸನ ಜಿಲ್ಲೆಯ ಆಲೂರುವರೆಗೆ ಈ ನಿಯಂತ್ರಣ ವ್ಯಾಪ್ತಿ ವಿಸ್ತರಿಸಲಿದೆ. ಅ.1ರಿಂದ ಮೈಸೂರು ವಿಭಾಗದ ಬ್ಲಾಕ್ ಸ್ಟೇಷನ್‌ಗಳ ಸಂಖ್ಯೆ 92ರಿಂದ 99ಕ್ಕೆ ಏರಿಕೆಯಾಗಲಿದೆ.

ರೈಲುಗಳ ನಿರ್ವಹಣೆಯಲ್ಲಿ ಬದಲಾವಣೆ ಇಲ್ಲ

ಮಂಗಳೂರು ಕೋಚಿಂಗ್ ಡಿಪೋದಲ್ಲಿ ನಡೆಯುತ್ತಿರುವ ರೈಲುಗಳ ಪ್ರಾಥಮಿಕ ನಿರ್ವಹಣಾ ಕಾರ್ಯದಲ್ಲಿ ತಕ್ಷಣ ಯಾವುದೇ ಬದಲಾವಣೆ ಇರುವುದಿಲ್ಲ. ಕನಿಷ್ಠ ಮೊದಲ ಮೂರು ತಿಂಗಳ ಕಾಲ ಈಗಿರುವ ಕಾರ್ಯಾಚರಣೆ ಹಾಗೂ ಪ್ರಾಥಮಿಕ ನಿರ್ವಹಣಾ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಡಿಆರ್‌ಎಂ ಮುದಿತ್ ಮಿತ್ತಲ್ ತಿಳಿಸಿದ್ದಾರೆ.

ಪಡೀಲ್‌ ಬದಲು ಉಳ್ಳಾಲ ಗಡಿ

ಮಂಗಳೂರು ಪ್ರದೇಶ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವುದರೊಂದಿಗೆ ದಕ್ಷಿಣ ಪಶ್ಚಿಮ ರೈಲ್ವೆ-ದಕ್ಷಿಣ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಪಡೀಲ್‌ನಿಂದ ಉಳ್ಳಾಲಕ್ಕೆ ಬದಲಾಗಲಿದೆ. ಇದರಿಂದ ರೈಲುಗಳನ್ನು ಒಂದು ವಲಯದಿಂದ ಮತ್ತೊಂದು ವಲಯಕ್ಕೆ ಹಸ್ತಾಂತರಿಸುವ ವೇಳೆ ಉಂಟಾಗಬಹುದಾದ ವಿಳಂಬವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.

ಪ್ರಸ್ತುತ ಬೆಂಗಳೂರು ಕಡೆಯಿಂದ ಕಾರವಾರದತ್ತ ಸಂಚರಿಸುವ ರೈಲುಗಳು ಪಡೀಲ್‌ನಲ್ಲಿ ನೈಋತ್ಯ-ದಕ್ಷಿಣ ರೈಲ್ವೆ ಗಡಿ ಹಾಗೂ ತೋಕೂರಿನಲ್ಲಿ ದಕ್ಷಿಣ ರೈಲ್ವೆ-ಕೊಂಕಣ ರೈಲ್ವೆ ಗಡಿ ದಾಟಬೇಕಿದೆ. ಪ್ರತಿ ವಲಯದ ಗಡಿ ದಾಟುವ ಮುನ್ನ ಎರಡು ವಲಯಗಳ ನಡುವೆ ಮುಂಗಡ ಸಮನ್ವಯ ಮತ್ತು ನಿಯಂತ್ರಣ ಅಗತ್ಯವಿದೆ.

ಮಂಗಳೂರು ಪ್ರದೇಶ ಸಂಪೂರ್ಣವಾಗಿ ನೈಋತ್ಯ ರೈಲ್ವೆ ವ್ಯಾಪ್ತಿಗೆ ಬಂದ ಬಳಿಕ ಒಂದು ವಲಯದೊಂದಿಗೆ ಹೆಚ್ಚುವರಿ ಸಮನ್ವಯದ ಅಗತ್ಯ ಕಡಿಮೆಯಾಗಲಿದ್ದು, ರೈಲುಗಳ ಸಂಚಾರವನ್ನು ಹೆಚ್ಚು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಮಂತ್ರಾಲಯ ಸೀತಾಪಹರಣ ಕೇಸ್‌, ಬಾಡಿಯೇ ಸಿಗದ ಕೇಸ್‌ನಲ್ಲಿ ನ್ಯಾಯದಾನ ಮಾಡಿದ ಕೋರ್ಟ್‌
ರೈಲ್ವೆ ಸಚಿವಾಲಯದಿಂದ ಗುಡ್‌ನ್ಯೂಸ್: ಗೋವಾ-ಮಂಗಳೂರು ವಂದೇ ಭಾರತ್ ಬೆಂಗಳೂರುವರೆಗೆ ವಿಸ್ತರಣೆ