ಮಂಗಳೂರು-ಬೆಂಗಳೂರು ರೈಲು ಸಂಪರ್ಕಕ್ಕೆ ಮತ್ತಷ್ಟು ಬಲ: ದ್ವಿಪಥ ಕಾಮಗಾರಿಗೆ ರೈಲ್ವೆ ಸಚಿವ ಸೂಚನೆ, ಸಂಸದರು ಹೇಳಿದ್ದೇನು?

Kannadaprabha News   | Kannada Prabha
Published : Nov 19, 2026, 07:33 AM IST
Mangaluru-Bengaluru railway line doubling prioritized as a national project

ಸಾರಾಂಶ

Mangalore Bangalore railway doubling project ಮಂಗಳೂರು-ಬೆಂಗಳೂರು ರೈಲು ಮಾರ್ಗದ ದ್ವಿಪಥ ಕಾಮಗಾರಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಆದ್ಯತೆ ನೀಡಿದೆ. ಇದರಿಂದ ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರಕ್ಕೆ ದೊಡ್ಡ ಉತ್ತೇಜನ ಸಿಗಲಿದ್ದು, ಕೇವಲ 4 ಗಂಟೆಗಳಲ್ಲಿ ಪ್ರಯಾಣ ಸಾಧ್ಯ.

ಮಂಗಳೂರು (ನ.19): ಮಂಗಳೂರು-ಬೆಂಗಳೂರು ರೈಲು ಮಾರ್ಗದ ದ್ವಿಪಥ (ಡಬ್ಲಿಂಗ್) ಕಾಮಗಾರಿಗೆ ‘ರಾಷ್ಟ್ರೀಯ ಯೋಜನೆ’(ನ್ಯಾಷನಲ್‌ ಪ್ರಾಜೆಕ್ಟ್‌)ಯಾಗಿ ಆದ್ಯತೆ ನೀಡಿ, ಕಾರ್ಯಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಮೇರೆಗೆ ಈ ವಿಚಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲೇ ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವರು ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದಾರೆ.

ಮಂಗಳೂರು–ಬೆಂಗಳೂರು ನಡುವೆ ಹೆಚ್ಚುವರಿ ರೈಲುಗಳ ಕಾರ್ಯಾಚರಣೆ

ಮಂಗಳೂರು–ಬೆಂಗಳೂರು ನಡುವೆ ಪ್ರಸ್ತುತ ಏಕ-ಹಳಿ ವ್ಯವಸ್ಥೆಯಿಂದಾಗಿ ರೈಲುಗಳ ಸಂಚಾರ ಸಾಮರ್ಥ್ಯ, ಹೆಚ್ಚುವರಿ ರೈಲುಗಳ ಕಾರ್ಯಾಚರಣೆ, ಸಮಯ ನಿರ್ವಹಣೆ ಹಾಗೂ ಸರಕು ಸಾಗಣೆಯಲ್ಲಿ ಹಲವು ಮಿತಿಗಳಿವೆ. ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಪ್ರದೇಶದ ಕಠಿಣ ಭೌಗೋಳಿಕ ಪರಿಸ್ಥಿತಿ ಡಬ್ಲಿಂಗ್ ಕಾಮಗಾರಿಗೆ ದೊಡ್ಡ ಸವಾಲಾಗಿದೆ.

ಜನವರಿಗೆ ಎರಡನೇ ಹಳಿ ಡಿಪಿಆರ್‌ ಸಿದ್ಧ:

ಈ ಹಿನ್ನೆಲೆಯಲ್ಲಿ ಎರಡನೇ ಹಳಿಗೆ ಸೂಕ್ತವಾದ ಹೊಸ ವಿನ್ಯಾಸ ರೂಪಿಸುವ ಅಗತ್ಯವಿದೆ. ಈ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ ಪೂರ್ಣಗೊಂಡಿದ್ದು, ವಿವರವಾದ ಯೋಜನಾ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಘಾಟ್ ಪ್ರದೇಶದ ಇಳಿಜಾರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡು ಹೆಚ್ಚು ಅನುಕೂಲಕರವಾದ ಗ್ರೇಡಿಯಂಟ್‌ನೊಂದಿಗೆ ಎರಡನೇ ಹಳಿ ನಿರ್ಮಿಸುವ ಯೋಜನೆಯನ್ನೂ ರೈಲ್ವೆ ಇಲಾಖೆ ಪರಿಗಣಿಸಿದೆ. ಜನವರಿ ಅಂತ್ಯದ ವೇಳೆಗೆ ಡಿಪಿಆರ್‌ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಡಬ್ಬಿಂಗ್ ಯೋಜನೆ ಪೂರ್ಣಗೊಂಡರೆ ಏನು ಪ್ರಯೋಜನ

ಡಬ್ಲಿಂಗ್ ಯೋಜನೆ ಪೂರ್ಣಗೊಂಡಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಅವಕಾಶ ಸಿಗಲಿದೆ. ಪ್ರಯಾಣಿಕರ ಸಂಚಾರದ ಜೊತೆಗೆ ನವ ಮಂಗಳೂರು ಬಂದರಿನಿಂದ ರಾಜ್ಯದ ಒಳನಾಡು ಹಾಗೂ ರಾಜಧಾನಿ ಭಾಗಗಳಿಗೆ ಸರಕು ಸಾಗಣೆಯೂ ಹೆಚ್ಚು ಸುಗಮವಾಗಲಿದೆ.

ಡಬ್ಬಿಂಗ್ ಕಾಮಗಾರಿ 3 ಹಂತಗಳಲ್ಲಿ ಅನುಷ್ಠಾನ:

ಈ ಡಬ್ಲಿಂಗ್‌ ಕಾಮಗಾರಿಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ.

ಮಂಗಳೂರು-ಸುಬ್ರಹ್ಮಣ್ಯ ಮಾರ್ಗ, ಸುಬ್ರಹ್ಮಣ್ಯ ಮಾರ್ಗ-ಹಾಸನ ಹಾಗೂ ಹಾಸನ-ಬೆಂಗಳೂರು ಈ ಮೂರು ಹಂತದಲ್ಲಿ ಕಾರ್ಯಗತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾದಲ್ಲಿ ಕಾಮಗಾರಿಯನ್ನು ಸುಲಭ ಮತ್ತು ತ್ವರಿತವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ. ಮಾತ್ರವಲ್ಲ ಘಾಟ್‌ ಪ್ರದೇಶದಲ್ಲಿ ಸಾಧ್ಯವಾದಷ್ಟು ನೇರವಾಗಿ ಟನೆಲ್‌ ಮೂಲಕ ರೈಲು ಹಳಿ ರಚನೆಯ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಇದು ಸಾಧ್ಯವಾದಲ್ಲಿ ಮಂಗಳೂರು-ಬೆಂಗಳೂರು ನಡುವೆ 100 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಿದರೆ ಕೇವಲ 4 ಗಂಟೆ ಅವಧಿಯಲ್ಲಿ ಗಮ್ಯ ಸ್ಥಾನ ತಲುಪಲು ಸಾಧ್ಯವಾಗಲಿದೆ.

ಮಂಗಳೂರು-ಬೆಂಗಳೂರು ರೈಲು ಸಂಪರ್ಕವನ್ನು ಬಲಪಡಿಸುವುದು ಕೇವಲ ಪ್ರಯಾಣಿಕರ ಅನುಕೂಲದ ಪ್ರಶ್ನೆಯಲ್ಲ, ಕರಾವಳಿಯ ಬಂದರು, ಕೈಗಾರಿಕೆ, ವ್ಯಾಪಾರ ಮತ್ತು ಸಮಗ್ರ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ.

-ಕ್ಯಾ. ಬ್ರಿಜೇಶ್ ಚೌಟ, ಸಂಸದ. ದ.ಕ.

PREV
Read more Articles on
click me!

Recommended Stories

ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಸಮೀಪ 1000 ಎಕ್ರೆಲಿ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪನೆ!
ಏರ್‌ಪೋರ್ಟ್‌ಗೆ ಗೆದ್ದಲಹಳ್ಳಿಯಿಂದ ಹೊಸ ಮೇಲ್ಸೇತುವೆ; ಬೆಂಗಳೂರು ವ್ಯಾಪ್ತಿಗೆ 111 ಹಳ್ಳಿ