ರಸ್ತೆಯಲ್ಲಿ ಓಡಾಡಲು ಸರ್ವ ಅರ್ಹತೆ ಹೊಂದಿದ್ದರೂ ಸಂಚಾರ ನಡೆಸಲು ಸಾಧ್ಯವಾಗದೆ ಕಾಯುತ್ತಿರುವ ಖಾಸಗಿ ಬಸ್ಸುಗಳು. ತಪಸ್ಸಿಗೆ ಕುಳಿತ ಋುಷಿಯ ದೇಹದ ಮೇಲೆ ಬಳ್ಳಿ ಬೆಳೆಯುವ ಪುರಾಣ ಕಥೆಗಳಂತೆ ಈ ಬಸ್ಸುಗಳ ಮೇಲೂ ಪೊದೆ ಬೆಳೆದು ಆವರಿಸಿದೆ, ಬೀದಿ ನಾಯಿಗಳ ಆವಾಸ ಸ್ಥಾನವಾಗಿವೆ!
ಮಂಗಳೂರು(ಜು.07): ಇವು ಪೊಲೀಸ್ ಸ್ಟೇಶನ್‌ಗಳ ಎದುರು ಮುಟ್ಟುಗೋಲು ಹಾಕಿದ ಬಸ್ಸುಗಳಲ್ಲ. ಗುಜರಿ ಅಂಗಡಿಗೆ ಹೋಗಬೇಕಾದವೂ ಅಲ್ಲ. ರಸ್ತೆಯಲ್ಲಿ ಓಡಾಡಲು ಸರ್ವ ಅರ್ಹತೆ ಹೊಂದಿದ್ದರೂ ಸಂಚಾರ ನಡೆಸಲು ಸಾಧ್ಯವಾಗದೆ ಕಾಯುತ್ತಿರುವ ಖಾಸಗಿ ಬಸ್ಸುಗಳು. ತಪಸ್ಸಿಗೆ ಕುಳಿತ ಋುಷಿಯ ದೇಹದ ಮೇಲೆ ಬಳ್ಳಿ ಬೆಳೆಯುವ ಪುರಾಣ ಕಥೆಗಳಂತೆ ಈ ಬಸ್ಸುಗಳ ಮೇಲೂ ಪೊದೆ ಬೆಳೆದು ಆವರಿಸಿದೆ, ಬೀದಿ ನಾಯಿಗಳ ಆವಾಸ ಸ್ಥಾನವಾಗಿವೆ!
ಖಾಸಗಿ ಬಸ್ಸುಗಳು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಮಂಗಳೂರಿನ ಬಸ್ಸುಗಳ ಕೊರೋನಾ ಲಾಕ್‌ಡೌನ್ ಸಂಕಷ್ಟಇದು. ಲಾಕ್‌ಡೌನ್ ತೆರವಾದರೂ ಪ್ರಯಾಣಿಕರ ಸಂಖ್ಯೆ ತೀವ್ರ ಕುಸಿತ ಕಂಡಿದ್ದರಿಂದ ಶೇ.35ರಷ್ಟುಮಾತ್ರ ಬಸ್ಸುಗಳು ಮಾತ್ರ ಜಿಲ್ಲೆಯಲ್ಲಿ ಓಡಾಟ ನಡೆಸುತ್ತಿವೆ. ಉಳಿದವು ಕಳೆದ ಮೂರೂವರೆ ತಿಂಗಳಿನಿಂದ (ಲಾಕ್‌ಡೌನ್ ಆರಂಭವಾದಾಗಿನಿಂದ) ಹಾಗೆಯೇ ನಿಂತಲ್ಲೇ ನಿಂತಿವೆ. ಈ ನಡುವೆ ಮಳೆಗಾಲ ಆರಂಭವಾಗಿದ್ದರಿಂದ ಬಸ್ಸುಗಳ ಸುತ್ತಲಿನ ಪೊದೆಗಳು ಬಸ್ಸನ್ನೂ ಮೀರಿಸಿ ಬೆಳೆದಿವೆ. ಈ ಮೂಲಕ ಜಿಲ್ಲೆಯ ಸಂಚಾರ ವ್ಯವಸ್ಥೆಯ ಕುಸಿತಕ್ಕೆ ಕನ್ನಡಿ ಹಿಡಿದಿದೆ.
ಮಾಲೀಕರಿಗೆ ನಷ್ಟ:
ಜೂ.1ರಿಂದ ಮಂಗಳೂರಿನಲ್ಲಿ ಸಿಟಿ ಬಸ್ಸುಗಳು ಸಂಚಾರ ಆರಂಭಿಸಿದ್ದವು. ಕೊರೋನಾ ಆತಂಕದ ಕಾರಣದಿಂದ ಹೆಚ್ಚಿನವರು ಬಸ್ಸುಗಳಲ್ಲಿ ಓಡಾಟ ನಡೆಸಲು ಹಿಂದೇಟು ಹಾಕಿದ್ದರಿಂದ ಬಸ್ ಮಾಲೀಕರಿಗೆ ಬಸ್ ಓಡಿಸುವುದು ನಷ್ಟಕ್ಕೆ ಕಾರಣವಾಗುತ್ತಿದೆ. ಹಾಗಾಗಿ ಮಂಗಳೂರಿನ ಒಟ್ಟು 325 ಸಿಟಿ ಬಸ್ಸುಗಳಲ್ಲಿ ಕೇವಲ 120 ಬಸ್ಸುಗಳು ಮಾತ್ರ ಈಗ ಸಂಚರಿಸುತ್ತಿವೆ. ಉಳಿದ ಬಸ್ಸುಗಳನ್ನು ಆಯಾ ಮಾಲೀಕರು ತಮ್ಮ ಜಾಗಗಳಲ್ಲಿ ನಿಲ್ಲಿಸಿದ್ದಾರೆ. ಅಲ್ಲೇ ಅವು ತುಕ್ಕು ಹಿಡಿಯುತ್ತಿವೆ. ಕೆಲವೊಂದು ಪ್ರದೇಶಗಳಲ್ಲಿ ಹೀಗೆ ನಿಲ್ಲಿಸಿದ ಬಸ್ಸುಗಳಲ್ಲಿ ಬೀದಿ ನಾಯಿಗಳು ವಾಸಿಸುತ್ತಿದ್ದರೆ, ಇನ್ನು ಕೆಲವೆಡೆ ನಿಲ್ಲಿಸಿದ ಬಸ್ಸಿನ ಕಂಬಿಗೆ ದನ ಕಟ್ಟುವುದೂ ನಡೆಯುತ್ತಿದೆ. ಈ ಫೋಟೋಗಳೂ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಾಜಿ ಕೇಂದ್ರ ಸಚಿವರಿಗೂ ತಗುಲಿದ ಕೊರೋನಾ: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು
ಈ ಕುರಿತು ಮಾತನಾಡಿದ ಮಂಗಳೂರು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಈಗ ಬಸ್ಸು ರಸ್ತೆಗಿಳಿಸಬೇಕಾದರೆ 50-60 ಸಾವಿರ ರು. ತೆರಿಗೆ ಸೇರಿ ಒಂದು ಲಕ್ಷ ರು.ನಷ್ಟುವೆಚ್ಚ ತಗಲುತ್ತದೆ. ಬಸ್ಸು ಓಡಿಸದೆ ಇದ್ದರೆ ಎಂಜಿನ್ ಮತ್ತಿತರ ಭಾಗಗಳು ತುಕ್ಕು ಹಿಡಿದು ಹಾಳಾಗುವ ಅಪಾಯವಿದೆ. ಇಂತಹ ಪರಿಸ್ಥಿತಿಯಲ್ಲಿ ಬಸ್ಸು ಮಾಲೀಕರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.