ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಅಭಾವದ ಆತಂಕ, ಬರಿದಾಗುತ್ತಿದೆ ಜೀವಜಲ!

Published : Apr 18, 2026, 02:08 PM IST
KRS Dam

ಸಾರಾಂಶ

ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 99 ಅಡಿಗೆ ಕುಸಿದಿದ್ದು, ಮಂಡ್ಯ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಆತಂಕ ಎದುರಾಗಿದೆ. ಒಳಹರಿವು ತೀವ್ರವಾಗಿ ಕಡಿಮೆಯಾಗಿದ್ದು, ಮುಂಗಾರು ಮಳೆ ವಿಳಂಬವಾದರೆ ಕಾವೇರಿ ಕಣಿವೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆಯಿದೆ.

ಮಂಡ್ಯ: ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 99 ಅಡಿಗೆ ಇಳಿದಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ಸಂಬಂಧಿಸಿ ಈಗ ನೀರಿನ ಅಭಾವ ಎದುರಾಗುವ ಭೀತಿ ಎದುರಾಗಿದೆ.

ಕೆಆರ್ ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ಅದು ಗಂಭೀರವಾಗಿ ಕುಸಿದಿರುವುದು ಗಮನಾರ್ಹವಾಗಿದೆ. ಜಲಾಶಯದಲ್ಲಿ ಒಟ್ಟು 22 ಟಿಎಂಸಿ ನೀರು ಶೇಖರಣೆ ಇದ್ದರೂ, ಅದರಲ್ಲಿ 7 ಟಿಎಂಸಿ ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವ ನೀರು ಕೇವಲ 15 ಟಿಎಂಸಿ ಮಾತ್ರವಾಗಿದೆ. ಈ ಪರಿಸ್ಥಿತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆ ಅಗತ್ಯವಾಗಿದ್ದು, ಕೃಷಿ ಕಾರ್ಯಗಳಿಗೆ ನಿಯಂತ್ರಿತವಾಗಿ ನೀರು ಒದಗಿಸುವುದು ಅನಿವಾರ್ಯವಾಗಿದೆ. ಜೊತೆಗೆ ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.

ಒಳ ಹರಿವು ಕೇವಲ 66 ಕ್ಯೂಸೆಕ್ ಇದ್ದು, ಹೊರ ಹರಿವು 4388 ಕ್ಯೂಸೆಕ್

ಇದೀಗ ಜಲಾಶಯಕ್ಕೆ ಒಳ ಹರಿವು ಕೇವಲ 66 ಕ್ಯೂಸೆಕ್ ಇದ್ದು, ಹೊರ ಹರಿವು 4388 ಕ್ಯೂಸೆಕ್ ಆಗಿದೆ. ಒಳ ಹರಿವು ಕಡಿಮೆಯಾಗಿದ್ದು, ಹೊರ ಹರಿವು ಹೆಚ್ಚು ಇರುವುದರಿಂದ ನೀರಿನ ಮಟ್ಟ ನಿರಂತರವಾಗಿ ಇಳಿಕೆಯಾಗುತ್ತಿದೆ. ಮುಂಗಾರು ಮಳೆ ತಡವಾದಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಜೂನ್ ಮೊದಲ ವಾರದೊಳಗೆ ಸಮರ್ಪಕ ಮಳೆಯಾಗದಿದ್ದರೆ, ಮಂಡ್ಯ ಸೇರಿದಂತೆ ಕಾವೇರಿ ನೀರನ್ನು ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ಭೀತಿ ವ್ಯಕ್ತವಾಗಿದೆ.

ಕಬಿನಿಯಲ್ಲೂ ಇಳಿಕೆ

ಇನ್ನು ಕಬಿನಿ ಜಲಾಶಯದ ಸ್ಥಿತಿಯೂ ಸಹ ಗಮನಾರ್ಹವಾಗಿದೆ. ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 2260.81 ಅಡಿ (7.63 ಟಿಎಂಸಿ) ಇದ್ದು, ಒಳ ಹರಿವು 112 ಕ್ಯೂಸೆಕ್ ಮತ್ತು ಹೊರ ಹರಿವು 1200 ಕ್ಯೂಸೆಕ್ ಆಗಿದೆ. ಇದರ ಗರಿಷ್ಠ ಮಟ್ಟ 2284 ಅಡಿ ಆಗಿದ್ದು, ಇಲ್ಲಿಯೂ ನೀರಿನ ಮಟ್ಟ ಸಮರ್ಪಕವಾಗಿಲ್ಲ

ಒಟ್ಟಾರೆ, ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳ ನೀರಿನ ಮಟ್ಟ ಕುಸಿತದಿಂದಾಗಿ ಕಾವೇರಿ ನೀರನ್ನು ಅವಲಂಬಿಸಿರುವ ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನೀರಿನ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಮುಂಗಾರು ಮಳೆಯ ಮೇಲೆಯೇ ಈಗ ಜನರ ನಿರೀಕ್ಷೆ ನೆಟ್ಟಿದೆ. ಮಳೆ ವಿಳಂಬವಾದರೆ, ಕೃಷಿ ಚಟುವಟಿಕೆಗಳಿಗೆ ಹೊಡೆತ ಬೀಳುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

PREV
Read more Articles on
click me!

Recommended Stories

ಚಿತ್ರದುರ್ಗದಲ್ಲಿ BSY ಅಭಿಮಾನೋತ್ಸವ: ಕಾರ್ಯಕ್ರಮಕ್ಕೆ ಬರುವ ವಾಹನ ಪಾರ್ಕಿಂಗ್ ಸ್ಥಳಗಳಿಗೆ ನಾಡಿನ ನದಿಗಳ ಹೆಸರು!
ಚಿತ್ರದುರ್ಗದಲ್ಲಿ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಬರುವ 10 ಲಕ್ಷ ಜನರಿಗೆ ಊಟದ ವ್ಯವಸ್ಥೆ! ಊಟದ ಮೇನುವಿನಲ್ಲಿ ಏನಿದೆ?