Mandya : 5 ತಿಂಗಳಿಂದ ನಡೆಯದ ಪ್ರಗತಿ ಪರಿಶೀಲನೆ..!

By Kannadaprabha NewsFirst Published Nov 19, 2022, 6:09 AM IST
Highlights

ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆಯ ರಾಜಕೀಯ ನಾಯಕರನ್ನು ಕಂಡರೆ ವಿಧಾನಸೌಧವೇ ಬೆಚ್ಚಿಬೀಳುತ್ತಿತ್ತು. ಈಗಿರುವ ನಾಯಕರನ್ನು ಕಂಡರೆ ಸ್ಥಳೀಯ ಅಧಿಕಾರಿಗಳೇ ಹೆದರುವುದಿಲ್ಲ. ಏಕೆಂದರೆ, ಅಭಿವೃದ್ಧಿ ಯಾರಿಗೂ ಬೇಕಿಲ್ಲ. ಅದರ ಬಗೆಗಿನ ಇಚ್ಛಾಶಕ್ತಿ ಯಾರಲ್ಲೂ ಇಲ್ಲ. ಇದರ ಪರಿಣಾಮ ಮಂಡ್ಯ ಜಿಲ್ಲೆ ಅಭಿವೃದ್ಧಿ ನಿಂತ ನೀರಾಗಿ ಕೊಳಕಿನಿಂದ ತುಂಬಿ ನಾರುತ್ತಿದ್ದರೂ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲ

ಮಂಡ್ಯ ಮಂಜುನಾಥ

  ಮಂಡ್ಯ (ನ.19):  ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆಯ ರಾಜಕೀಯ ನಾಯಕರನ್ನು ಕಂಡರೆ ವಿಧಾನಸೌಧವೇ ಬೆಚ್ಚಿಬೀಳುತ್ತಿತ್ತು. ಈಗಿರುವ ನಾಯಕರನ್ನು ಕಂಡರೆ ಸ್ಥಳೀಯ ಅಧಿಕಾರಿಗಳೇ ಹೆದರುವುದಿಲ್ಲ. ಏಕೆಂದರೆ, ಅಭಿವೃದ್ಧಿ ಯಾರಿಗೂ ಬೇಕಿಲ್ಲ. ಅದರ ಬಗೆಗಿನ ಇಚ್ಛಾಶಕ್ತಿ ಯಾರಲ್ಲೂ ಇಲ್ಲ. ಇದರ ಪರಿಣಾಮ ಮಂಡ್ಯ ಜಿಲ್ಲೆ ಅಭಿವೃದ್ಧಿ ನಿಂತ ನೀರಾಗಿ ಕೊಳಕಿನಿಂದ ತುಂಬಿ ನಾರುತ್ತಿದ್ದರೂ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲ. ಜಿಲ್ಲೆಯ ಹಿತದೃಷ್ಟಿಯಿಂದ ಇದೊಂದು ಅಪಾಯಕಾರಿ ಬೆಳವಣಿಗೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿರುವ (Minister)  ಈ ಜಿಲ್ಲೆಯವರಲ್ಲ. ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೆ ಅಭಿವೃದ್ಧಿ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಿದ ನಿದರ್ಶನವೇ ಇಲ್ಲ. ಐದು ತಿಂಗಳು ಕಳೆದರೂ ಪ್ರಗತಿ ಪರಿಶೀಲನಾ ಸಭೆ ನಡೆಯದಿರುವುದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಸಚಿವರಾದಿಯಾಗಿ ಜನಪ್ರತಿನಿಧಿಗಳೆಲ್ಲರೂ ಅಧಿಕಾರಿಗಳ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಅಧಿಕಾರಿಗಳ ದರ್ಬಾರ್‌ನೊಳಗೆ ಅಭಿವೃದ್ಧಿ ಹಳ್ಳ ಹಿಡಿದಿದೆ.

ಎಲೆಕ್ಷನ್‌ ಗಿಮಿಕ್‌:

(Mysugar)  ಕಾರ್ಖಾನೆ ಪುನಾರಂಭ ಮಾಡಿದ್ದು ಬಿಜೆಪಿಯವರ ಕೇವಲ ಎಲೆಕ್ಷನ್‌ ಗಿಮಿಕ್‌ ಅಲ್ಲದೆ ಮತ್ತೇನೂ ಅಲ್ಲ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಖಾನೆಗೆ ಚಾಲನೆ ನೀಡಿರುವುದನ್ನು ಬಿಟ್ಟರೆ ಪುನಶ್ಚೇತನ ಬರೀ ಗಾಳಿಗೋಪುರವಷ್ಟೇ. ಬಜೆಟ್‌ನಲ್ಲಿ ಘೋಷಿಸಿದ 50 ಕೋಟಿ ರು. ಹಣದಲ್ಲಿ ಇದುವರೆಗೂ ಕೊಟ್ಟಿರೋದು 30 ಕೋಟಿ ರು. ಮಾತ್ರ. ಇನ್ನೂ 20 ಕೋಟಿ ರು. ಕೊಡಲು ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಲೇ ಇದೆ.

ಕಾರ್ಖಾನೆಗೆ ಪ್ರಾಯೋಗಿಕ ಚಾಲನೆ ನೀಡಿ ಹೋದ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಮತ್ತೆ ಅತ್ತ ಮುಖ ಮಾಡಿಲ್ಲ. ಕಂಪನಿಗೆ ವಿದ್ಯುಕ್ತ ಚಾಲನೆ ನೀಡಬೇಕಾದ ಸಿಎಂ ಇತ್ತ ಬರಲೇ ಇಲ್ಲ. ಕಾರ್ಖಾನೆ ಯಾವ ರೀತಿ ನಡೆಯುತ್ತಿದೆ?, ಇದುವರೆಗೂ ಅರೆದಿರುವ ಕಬ್ಬು ಎಷ್ಟು?, ಉತ್ಪಾದನೆಯಾದ ಸಕ್ಕರೆ ಎಷ್ಟು?, ರೈತರು ಎದುರಿಸುತ್ತಿರುವ ಸಮಸ್ಯೆಗಳೇನು?, ಕಾರ್ಖಾನೆ ಪುನಶ್ಚೇತನಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು ಎಂಬ ಬಗ್ಗೆ ಯೋಚನೆಯನ್ನೂ ಮಾಡುತ್ತಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಬಳಿಗೆ ನಿಯೋಗ ಹೋಗಿ ಒತ್ತಡವನ್ನೂ ತರುತ್ತಿಲ್ಲ. ಇದರಿಂದ ಕಾರ್ಖಾನೆ ಪುನಶ್ಚೇತನ ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಗುಂಡಿಗಳ ಆಲಯವಾದ ರಸ್ತೆಗಳು

ಮಂಡ್ಯ ನಗರ ಸೇರಿದಂತೆ ತಾಲೂಕಿನ ರಸ್ತೆಗಳೆಲ್ಲವೂ ಗುಂಡಿಗಳಿಂದ ತುಂಬಿಹೋಗಿವೆ. ಗುಂಡಿಗಳೇ ಇಲ್ಲದ ರಸ್ತೆಗಳನ್ನು ದುರ್ಬೀನು ಹಾಕಿ ಹುಡುಕುವಂತಾಗಿದೆ. ಗುಂಡಿಗೆ ಬಿದ್ದು ನಿವೃತ್ತ ಯೋಧನೊಬ್ಬ ಬಲಿಯಾದ ನಂತರದಲ್ಲಿ ನಗರಸಭೆ ಸ್ವಲ್ಪ ಎಚ್ಚೆತ್ತುಕೊಂಡಿದೆ. ಚುನಾವಣಾ ಟಿಕೆಟ್‌ ಆಕಾಂಕ್ಷಿತರೊಬ್ಬರು ಗುಂಡಿ ಮುಚ್ಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಜಿಲ್ಲಾ ಕೇಂದ್ರದ ರಸ್ತೆಗಳು ಹೋಬಳಿ ಮಟ್ಟದ ರಸ್ತೆಗಳಿಗಿಂತಲೂ ಕಳಪೆಯಾಗಿರುವುದು ಕಣ್ಣಿಗೆ ರಾಚುತ್ತಿದೆ. ಆದರೂ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಬದ್ಧತೆಯನ್ನು ಯಾರೂ ಪ್ರದರ್ಶಿಸುತ್ತಿಲ್ಲ. ಆ ಬಗ್ಗೆ ಜನಪ್ರತಿನಿಧಿಗಳು ಗಮನಸೆಳೆಯುತ್ತಿಲ್ಲ.

ನಿವೃತ್ತ ಯೋಧನೊಬ್ಬ ಬಲಿಯಾದ ನಂತರ ನಗರಸಭೆ ಅಧ್ಯಕ್ಷರಾದಿಯಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರ ವ್ಯಾಪ್ತಿಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಏನಾದರೊಂದು ಅನಾಹುತ ಜರುಗುವವರೆಗೆ ಯಾರೂ ಎಚ್ಚೆತ್ತುಕೊಳ್ಳುವುದಿಲ್ಲ ಎನ್ನುವುದಕ್ಕೆ ಈ ಪ್ರಕರಣ ಜ್ವಲಂತ ಸಾಕ್ಷಿಯಾಗಿದೆ.

ಸರ್ಕಾರದಿಂದ ಬಂದ ಹಣವೆಷ್ಟು?

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಬಿದ್ದ ಮಳೆಯಿಂದ ಸುಮಾರು 750 ಕೋಟಿ ರು.ನಷ್ಟವಾಗಿರುವುದಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರ ಬಿಡುಗಡೆ ಮಾಡಿದ ಹಣ ಎಷ್ಟು?, ಗ್ರಾಮೀಣ ಭಾಗದಲ್ಲಿ ಹಾಳಾಗಿರುವ ರಸ್ತೆಗಳು, ಸೇತುವೆಗಳು, ಒಡೆದುಹೋದ ಕೆರೆಗಳಿಗೆ ಎಷ್ಟುಹಣ ಬಿಡುಗಡೆ ಮಾಡಲಾಗಿದೆ. ಅವುಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಯೋಜನೆಗಳೇನು ಎಂಬ ಬಗ್ಗೆ ಯಾರೊಬ್ಬರೂ ಚಕಾರವನ್ನೇ ಎತ್ತುತ್ತಿಲ್ಲ.

ಮಳೆಯಿಂದ ಜಿಲ್ಲೆಯ ಬಹುತೇಕ ಕೆರೆಗಳು ಹಾನಿಗೊಳಗಾಗಿವೆ. ಅವುಗಳಿಗೆ ಇದುವರೆಗೂ ಮರಳು ಮೂಟೆಗಳನ್ನಿಟ್ಟು ತಾತ್ಕಾಲಿಕ ಭದ್ರತೆಯನ್ನು ಒದಗಿಸಲಾಗಿದೆಯೇ ವಿನಃ ಶಾಶ್ವತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯಾವೊಂದು ಕ್ರಮಗಳನ್ನೂ ಕೈಗೊಂಡಿಲ್ಲವೆಂಬ ಮಾತುಗಳು ಅಧಿಕಾರಿ ವಲಯದಿಂದಲೇ ಕೇಳಿಬರುತ್ತಿದೆ. ಇವೆಲ್ಲವನ್ನೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದ್ದರೂ ಉಸ್ತುವಾರಿ ಸಚಿವರಿಗೆ ಆ ಬಗ್ಗೆ ಚಿಂತನೆಯೇ ಇಲ್ಲದಿರುವುದು ದುರಂತದ ಸಂಗತಿಯಾಗಿದೆ.

ಸರ್ಕಾರಿ ಜಮೀನು ಪರಭಾರೆ

ಅಧಿಕಾರಿಗಳ ದರ್ಬಾರ್‌ನೊಳಗೆ ಭೂ ಸ್ವಾಧೀನಗೊಂಡಿರುವ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಪರಭಾರೆ ಮಾಡಲಾಗುತ್ತಿದೆ. ಆದರೂ ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗಳೂ ಪ್ರಶ್ನಿಸುತ್ತಿಲ್ಲ. ಸರ್ಕಾರಿ ಜಮೀನನ್ನು ರಕ್ಷಣೆ ಮಾಡಬೇಕೆಂಬ ಕಾಳಜಿಯನ್ನೂ ಯಾರೂ ಪ್ರದರ್ಶಿಸುತ್ತಿಲ್ಲ. ಸತ್ತವರ ಹೆಸರಿನಲ್ಲಿ ಆಧಾರ್‌ ಕಾರ್ಡ್‌ಸೃಷ್ಟಿಸುವ ಕಾರ್ಯ ರಾಜಾರೋಷವಾಗಿ ಜಿಲ್ಲೆಯೊಳಗೆ ನಡೆಯುತ್ತಿದೆ. ಅದನ್ನು ಪತ್ತೆ ಹಚ್ಚಿ ಮಟ್ಟಹಾಕುವುದಕ್ಕೆ ಪೊಲೀಸರು ಕ್ರಮ ಕೈಗೊಂಡಿಲ್ಲ. ಅಕ್ರಮಗಳನ್ನು ಪ್ರಶ್ನೆ ಮಾಡದಿರುವುದರಿಂದಲೇ ಅವು ನಿರಂತರವಾಗಿ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.

ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಿಸಬೇಕಾದ ಜನಪ್ರತಿನಿಧಿಗಳು ಮಾಯವಾಗಿದ್ದಾರೆ. ಚುನಾವಣಾ ಗುಂಗಿನಲ್ಲಿರುವ ಜನಪ್ರತಿನಿಧಿಗಳು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವುದಕ್ಕೆ ಸಮಯವೇ ಇಲ್ಲದಂತಾಗಿದೆ. ಇದರ ನಡುವೆ ಅಧಿಕಾರಿಗಳ ಲಂಚಗುಳಿತನ, ಭ್ರಷ್ಟಾಚಾರ, ಅಕ್ರಮ, ಅವ್ಯವಹಾರಗಳು ನಿರ್ಭಯವಾಗಿ ನಡೆದಿವೆ.

ಜಿಲ್ಲಾಸ್ಪತ್ರೆಯೋ ನರಕವೋ ತಿಳಿಯದು...!

ಮಂಡ್ಯ ಮಿಮ್ಸ್‌ ಆಸ್ಪತ್ರೆಯೊಳಗೆ ನರಕಸದೃಶ ವಾತಾವರಣ ಮನೆಮಾಡಿದೆ. ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗವಂತೂ ಕೊಳಕುಮಯವಾಗಿದೆ. ಹೆರಿಗೆ ವಾರ್ಡ್‌ ಅವ್ಯವಸ್ಥೆಯ ಕೂಪವಾಗಿ ಪರಿವರ್ತನೆಯಾಗಿದೆ. ಫೆರಿಫೆರಲ್‌ ಕ್ಯಾನ್ಸರ್‌ ಆಸ್ಪತ್ರೆ ಕ್ಯಾನ್ಸರ್‌ಪೀಡಿತವಾಗಿ ನರಳಾಡುತ್ತಿದೆ. ರೋಗಿಗಳ ಗೋಳು ಕೇಳೋರಿಲ್ಲ. ವೈದ್ಯರ ಕಾರ್ಯವೈಖರಿಯನ್ನು ಪ್ರಶ್ನಿಸುವವರಿಲ್ಲ.

ವಿಶಾಲವಾದ ಜಾಗವನ್ನು ಹೊಂದಿರುವ ಮಿಮ್ಸ್‌ ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಬೇಕೆಂಬ ಬಯಕೆ, ಇಚ್ಛಾಶಕ್ತಿ ಯಾರೊಬ್ಬರಲ್ಲೂ ಇಲ್ಲ. ಕ್ಯಾನ್ಸರ್‌ ಆಸ್ಪತ್ರೆಗೆ ಹೊಸತನ ತುಂಬಿ ಪುನಶ್ಚೇತನಗೊಳಿಸುವ ಆಸಕ್ತಿ ಇಲ್ಲ. ತಮಿಳು ಕಾಲೋನಿ ಜನರನ್ನು ಆದಷ್ಟುಶೀಘ್ರ ಕೆರೆಯಂಗಳದಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ ಸ್ಥಳಾಂತರಿಸಿ ಜನಮೆಚ್ಚುಗೆ ಗಳಿಸುವ ರೀತಿಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕಿಸುವುದಕ್ಕೆ ಮಿಮ್ಸ್‌ ಆಡಳಿತ ಮಂಡಳಿಯಾದಿಯಾಗಿ ಜನರಿಂದ ಆಯ್ಕೆಯಾದವರು, ಉಸ್ತುವಾರಿ ಜವಾಬ್ದಾರಿ ಹೊತ್ತವರು ಹಾಗೂ ಸರ್ಕಾರ ಕೂಡ ಸಂಕಲ್ಪ ಮಾಡದಿರುವುದರಿಂದ ಆಸ್ಪತ್ರೆ ಅದ್ವಾನ ಸ್ಥಿತಿಗೆ ಬಂದು ತಲುಪಿದೆ.

ರೈತರ ಹೋರಾಟಕ್ಕೆ ಕಿವಿಗೊಡುತ್ತಿಲ್ಲ

ಟನ್‌ ಕಬ್ಬಿಗೆ 4500 ರು. ನಿಗದಿಪಡಿಸುವುದು, ಹಾಲಿನ ದರ ಹೆಚ್ಚಿಸುವುದೂ ಸೇರಿದಂತೆ ವಿವಿಧ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ಹನ್ನೊಂದು ದಿನಗಳಿಂದ ರಾಜ್ಯ ರೈತಸಂಘದ ಕಾರ್ಯಕರ್ತರು ನಗರದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದೆ ಸುಮಲತಾ, ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಇತರರು ಬಂದು ಬೆಂಬಲ ಸೂಚಿಸಿ ಹೋದರು. ಇಷ್ಟುದಿನಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಕಡೆ ತಿರುಗಿ ನೋಡಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಭಟನಾಕಾರರ ಮನವಿ ಸ್ವೀಕರಿಸುವ ಕಾಳಜಿ ತೋರ್ಪಡಿಸಲಿಲ್ಲ. ಜಿಲ್ಲೆಯವರೇ ಆದ ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡರು ರೈತರ ಕೂಗಿಗೆ ಕಿವಿಗೊಡಲಿಲ್ಲ. ಜೆಡಿಎಸ್‌ ಶಾಸಕರಾರೂ ಕೂಡ ರೈತರ ಹೋರಾಟಕ್ಕೆ ಸ್ಪಂದಿಸುವ ಗೋಜಿಗೆ ಹೋಗಲೇ ಇಲ್ಲ. ಹೀಗಾಗಿ ಸಮಸ್ಯೆಗೆ ಪರಿಹಾರ ಸಿಗುವವರೆಗೆ ರೈತರು ಹೋರಾಟ ಮುಂದುವರೆಸಿದ್ದಾರೆ.

ಖರೀದಿ ಕೇಂದ್ರಗಳ ಚಕಾರ ಎತ್ತುತ್ತಿಲ್ಲ

ಜಿಲ್ಲೆಯಲ್ಲಿ ಭತ್ತದ ಉತ್ಪಾದನೆ ನಿರೀಕ್ಷೆಗೂ ಮೀರಿ ಹೆಚ್ಚಿದೆ. ಕಟಾವು ಮುಂದಿನ ತಿಂಗಳಿನಿಂದ ಆರಂಭಗೊಳ್ಳಲಿದೆ. ಈಗಿನಿಂದಲೇ ಖರೀದಿ ಕೇಂದ್ರ ತೆರೆದು, ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ರೈತರು ಖರೀದಿ ಕೇಂದ್ರ ಆರಂಭಗೊಳ್ಳುವ ದಿನಗಳಿಗೆ ಎದುರುನೋಡುತ್ತಿದ್ದರೂ ಜನಪ್ರತಿನಿಧಿಗಳು ದನಿ ಎತ್ತುತ್ತಿಲ್ಲ. ಜಿಲ್ಲಾಡಳಿತದ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿಲ್ಲ. ಕನಿಷ್ಠ ಪಕ್ಷ ಉಸ್ತುವಾರಿ ಸಚಿವರಾದರೂ ಈ ಬಗ್ಗೆ ಗಮನಹರಿಸಿದ್ದಾರೆಯೇ ಎನ್ನುವುದಕ್ಕೆ ಅವರು ಪ್ರಗತಿ ಪರಿಶೀಲನಾ ಸಭೆಯಿಂದಲೇ ದೂರ ಉಳಿದಿದ್ದಾರೆ.

ಜಲಾವೃತಗೊಂಡರೂ ಚಿಂತೆಯಿಲ್ಲ

ಮಳೆಯಿಂದ ಕೆರೆಯಂಗಳದಲ್ಲಿರುವ ವಿವೇಕಾನಂದ ನಗರ ಬಡಾವಣೆ ಜಲಾವೃತಗೊಳ್ಳುತ್ತಿದ್ದರೂ ಯಾರೊಬ್ಬರಿಗೂ ಅದರ ಬಗ್ಗೆ ಚಿಂತೆಯೇ ಇಲ್ಲ. ಬಡಾವಣೆ ರಚನೆಗೊಂಡು 20 ವರ್ಷಗಳಾದರೂ ಶಾಶ್ವತ ಯೋಜನೆ ಇದುವರೆಗೂ ರೂಪಿಸಲಾಗಿಲ್ಲ. ತಾಂತ್ರಿಕ ಸಮಿತಿಯೊಂದನ್ನು ರಚಿಸಿ ಜನವಸತಿ ಪ್ರದೇಶದಲ್ಲಿ ನೀರು ನಿಲ್ಲದಂತೆ ಕಾಲುವೆ ಮೂಲಕ ಸರಾಗವಾಗಿ ನೀರು ಹರಿದು ಹಳ್ಳ ಸೇರುವ ನಿಟ್ಟಿನಲ್ಲಿ ವರದಿಯೊಂದನ್ನು ತಯಾರಿಸಿ ಕಳುಹಿಸಲಾಗಿಲ್ಲ. ಇದನ್ನು ನೋಡಿದಾಗ ಜನಪ್ರತಿನಿಧಿಗಳ ಬೇಜವಾಬ್ದಾರಿತನ, ಅಧಿಕಾರಿಗಳ ಕರ್ತವ್ಯನಿರ್ಲಕ್ಷ್ಯತೆ ಎಷ್ಟಿದೆ ಎನ್ನುವುದು ವೇದ್ಯವಾಗುತ್ತದೆ.

3 ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆದಿಲ್ಲ

ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಕುರಿತಂತೆ ಚರ್ಚಿಸಲು ಮೂರು ತಿಂಗಳಿಗೆ ಒಮ್ಮೆ ಕೆಡಿಪಿ ಸಭೆ ನಡೆಯಬೇಕು. ಆದರೆ, ಜೂ.29ರಂದು ನಡೆದಿರುವುದೇ ಕೊನೆಯ ಸಭೆಯಾಗಿದೆ. ಈಗಾಗಲೇ 5 ತಿಂಗಳು ಕಳೆದಿದ್ದರೂ ಸಭೆ ಕರೆದಿಲ್ಲ. ಇದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಡುವೆ ಸಮನ್ವಯತೆ ದೂರವಾಗಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿವೆ. ಇದು ತುಂಬಾ ಅಪಾಯಕಾರಿ ಮತ್ತು ಆಘಾತಕಾರಿ ವಿಷಯವಾಗಿದೆ. ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡುತ್ತಿದ್ದರೂ ಉಸ್ತುವಾರಿ ಸಚಿವರು ಎಚ್ಚರಗೊಂಡಿಲ್ಲ. ಅವರನ್ನು ಎಚ್ಚರಿಸುವ ಕೆಲಸ ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡರಿಂದ ಮಾತ್ರ ನಡೆದರೆ ಸಾಲದು. ಅಭಿವೃದ್ಧಿಯ ಬಗ್ಗೆ ಇಚ್ಛಾಶಕ್ತಿ ಇರಬೇಕಾದ ಎಲ್ಲ ಜನಪ್ರತಿನಿಧಿಗಳಿಂದ ನಡೆಯಬೇಕು. ಆ ನಿಟ್ಟಿನಲ್ಲಿ ಈಗಲಾದರೂ ಎಲ್ಲರೂ ಧ್ವನಿ ಎತ್ತುವರೇ ಎನ್ನುವುದನ್ನು ಕಾದುನೋಡಬೇಕಿದೆ.

click me!