'ಟಿಪ್ಪು ಬದುಕಿರುತ್ತಿದ್ರೆ ಕಾವೇರಿ ವಿವಾದ ಉದ್ಭವಿಸುತ್ತಿರಲಿಲ್ಲ'..!

By Kannadaprabha NewsFirst Published Aug 3, 2019, 11:18 AM IST
Highlights

ಟಿಪ್ಪು ಸುಲ್ತಾನ್‌ ಬದುಕಿದ್ದಿದ್ದರೆ ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ವಿವಾದವೇ ಉದ್ಭವಿಸುತ್ತಿರಲಿಲ್ಲ ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌  ಹೇಳಿದ್ದಾರೆ. ಟಿಪ್ಪು ಬಲಿಯಾಗಿದ್ದರಿಂದ ಮಂಡ್ಯಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೆ ಬಹು ದೊಡ್ಡ ನಷ್ಟವಾಗಿದೆ. ಅವನನ್ನು ಉಳಿಸಿಕೊಂಡಿದ್ದರೆ ಕಾವೇರಿ ನೀರೂ ನಮ್ಮದಾಗುತ್ತಿತ್ತು ಎಂದಿದ್ದಾರೆ.

ಮಂಡ್ಯ(ಆ.03): ಟಿಪ್ಪು ಸುಲ್ತಾನ್‌ ಬದುಕಿದ್ದಿದ್ದರೆ ತಮಿಳುನಾಡು-ಕರ್ನಾಟಕದ ನಡುವೆ ಕಾವೇರಿ ವಿವಾದವೇ ಉದ್ಭವಿಸುತ್ತಿರಲಿಲ್ಲ ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌ ಮದ್ದೂರಿನಲ್ಲಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಭಗವಾನ್‌, ಟಿಪ್ಪು ಸುಲ್ತಾನ್‌ ಅವಧಿಯಲ್ಲೇ ಕಾವೇರಿ ನದಿಗೆ ಅಣೆಕಟ್ಟು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಯೋಜನೆಗೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು. ಅವನ ಜೀವಿತಾವಧಿಯಲ್ಲೇ ಅಣೆಕಟ್ಟು ನಿರ್ಮಾಣ ಪೂರ್ಣಗೊಂಡಿದ್ದರೆ ನಮ್ಮ ನೀರು ನಮ್ಮಲ್ಲೇ ಉಳಿಯುತ್ತಿತ್ತು. ಏಕೆಂದರೆ, ಕರ್ನಾಟಕ ಮತ್ತು ತಮಿಳುನಾಡು ಎರಡೂ ಟಿಪ್ಪು ವಶದಲ್ಲೇ ಇತ್ತು ಎಂದರು.

ಟಿಪ್ಪು ಬಲಿಯಾಗಿದ್ದರಿಂದ ಮಂಡ್ಯಕ್ಕೆ ಮಾತ್ರವಲ್ಲ, ಕರ್ನಾಟಕಕ್ಕೆ ಬಹು ದೊಡ್ಡ ನಷ್ಟವಾಗಿದೆ. ಅವನನ್ನು ಉಳಿಸಿಕೊಂಡಿದ್ದರೆ ಕಾವೇರಿ ನೀರೂ ನಮ್ಮದಾಗುತ್ತಿತ್ತು. ಕಾವೇರಿ ನದಿ ನೀರಿನ ಮೇಲಿನ ನಮ್ಮ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಬ್ರಿಟಿಷರು ಅಧೀನದಲ್ಲಿ ಕಾವೇರಿ ನೀರಿನ ಒಪ್ಪಂದ ಜಾರಿಯಾಗಿ ರಾಜ್ಯಕ್ಕೆ ಅನ್ಯಾಯವಾಗಲು ಕಾರಣವಾಯಿತು ಎಂದರು.

ಟಿಪ್ಪು ಜಯಂತಿ ನಿಷೇಧ ಸರಿಯಲ್ಲ:

ಟಿಪ್ಪು ಜಯಂತಿ ಆಚರಣೆಯನ್ನು ರಾಜ್ಯಸರ್ಕಾರ ನಿಷೇಧಿಸಿದ್ದು ಸರಿಯಲ್ಲ. ಟಿಪ್ಪು ಮತಾಂಧ ಎಂದು ಹೇಳುವವರೇ ಮತಾಂಧರಾಗಿದ್ದಾರೆ. ಆತನ ಆಳ್ವಿಕೆ ಕಾಲದಲ್ಲಿ ಬಲವಂತವಾಗಿ ಯಾರನ್ನೂ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಿಲ್ಲ. ಶ್ರೀರಂಗಪಟ್ಟಣ ಭಾಗದ ಜನರಲ್ಲೂ ಟಿಪ್ಪು ಬಗ್ಗೆ ಕೆಟ್ಟಭಾವನೆ ಇಲ್ಲ. ಅವನ ಆಡಳಿತ ನಡೆಸುತ್ತಿದ್ದ ವೇಳೆ ಅಸ್ತಿತ್ವದಲ್ಲಿದ್ದ ಸರ್ಕಾರದಲ್ಲಿ 13 ಜನರು ಬ್ರಾಹ್ಮಣರಿದ್ದರು. ದಿವಾನ್‌ ಪೂರ್ಣಯ್ಯ ಮಂತ್ರಿಯಾಗಿದ್ದರು ಎಂದು ತಿಳಿಸಿದರು.

'ಮೋದಿಗಿಂತ ಟಿಪ್ಪು 100ಪಟ್ಟು ಉತ್ತಮ ಆಡಳಿತಗಾರ'..!

ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ ಮಸೂದೆ ಜಾರಿಗೆ ತಂದಿದ್ದನ್ನು ಸ್ವಾಗತಿಸಿದ ಭಗವಾನ್‌, ಮಸೂದೆ ಜಾರಿಯಿಂದ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿದ್ದ ನೋವು ದೂರವಾಗಿದೆ. ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಬದುಕುವ ಹಕ್ಕನ್ನು ತಂದುಕೊಟ್ಟಿದೆ ಎಂದು ತಿಳಿಸಿದರು. ಈ ವೇಳೆ ಮೈಸೂರು ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಸುರೇಶ್‌ ಕಂಠಿ ಇದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!