ಎಚ್‌ಡಿಕೆ ಪದತ್ಯಾಗಕ್ಕೆ ನೊಂದು 1 ಎಕ್ರೆ ಸಿಲ್ವರ್‌ ಓಕ್‌ ಕತ್ತರಿಸಿದ!

By Web DeskFirst Published Jul 26, 2019, 9:54 AM IST
Highlights

ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮನನೊಂದ ರೈತನೊಬ್ಬ ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದ ಭಾರೀ ಮೌಲ್ಯದ ಸಿಲ್ವರ್‌ ಓಕ್‌ ಗಿಡಗಳನ್ನು ಕಡಿದು ಹಾಕಿದ್ದಾನೆ 

ಮಂಡ್ಯ [ಜು.26] :  ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮನನೊಂದ ರೈತನೊಬ್ಬ ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದ ಭಾರೀ ಮೌಲ್ಯದ ಸಿಲ್ವರ್‌ ಓಕ್‌ ಗಿಡಗಳನ್ನು ಕಡಿದು ಹಾಕಿದ್ದಾನೆ ಎನ್ನಲಾದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೆಡಿಎಸ್‌ ಯುವ ಬ್ರಿಗೇಡ್‌ ನಾಗಮಂಗಲ ಹೆಸರಿನ ಫೇಸ್‌ಬುಕ್‌ ಪೇಜ್‌ನಿಂದ ಷೇರ್‌ ಆಗಿರುವ ಸುಮಾರು 18 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಸಿಲ್ವರ್‌ ಗಿಡಗಳನ್ನು ಕತ್ತರಿಸಿದ ನಂತರ ರೈತನೊಬ್ಬ ಮಾತನಾಡಿದ ದೃಶ್ಯಾವಳಿಗಳಿವೆ. ಈ ರೈತ ಯಾರು, ಯಾವ ಊರು ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಮೈಸೂರು ಮೂಲದ ರೈತ ಎಂದು ಹೇಳಲಾಗಿದೆ.

ಗಿಡಗಳನ್ನು ಕಡಿದು ಹಾಕಿದ ಹಿಂದಿನ ಉದ್ದೇಶವನ್ನು ಕ್ಯಾಮೆರಾ ಮುಂದೆ ತಿಳಿಸಿರುವ ಆತ, ಕುಮಾರಸ್ವಾಮಿ ರಾಜೀನಾಮೆ ಕೊಟ್ಟರೆ ಮರುದಿನ ಬೆಳಗ್ಗೆಯ ಹೊತ್ತಿಗೆ ಒಂದು ಎಕರೆಯಲ್ಲಿರುವ ಸಿಲ್ವರ್‌ ಗಿಡ ಕಡಿದು ಹಾಕುವುದಾಗಿ ಚಾಲೆಂಜ್ ಮಾಡಿದ್ದೆ. ಅಂಥವರನ್ನೇ ಅಧಿಕಾರದಿಂದ ಇಳಿಸಿದಾಗ ಇನ್ನು ದೇಶದಲ್ಲಿ ಇನ್ಯಾರು ಆಡಳಿತ ನಡೆಸುತ್ತಾರೆ ಎಂದು ಪ್ರಶ್ನಿಸಿದ್ದಾನೆ. ರೈತ ಸಿಲ್ವರ್‌ ಗಿಡ ಕಡಿದು ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನಡೆಯಿಂದ ಕುಮಾರಸ್ವಾಮಿಯವರಿಗೆ ಮತ್ತಷ್ಟು ನೋವು ಕೊಡಬೇಡಿ ಎಂದು ಕುಮಾರಸ್ವಾಮಿ ಅಭಿಮಾನಿಗಳು ಮನವಿ ಮಾಡಿದ್ದಾರೆ.

click me!