ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ವಸೂಲಿಗಾಗಿ ಬಲಿಯಾದ 3 ವರ್ಷದ ಮಗು!

Published : May 26, 2025, 01:14 PM IST
Mandya

ಸಾರಾಂಶ

ಮಂಡ್ಯದ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಬೈಕ್ ಅಪಘಾತಕ್ಕೀಡಾಗಿ 3 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮಂಡ್ಯ (ಮೇ 26): ಸಕ್ಕರೆ ನಾಡು ಮಂಡ್ಯ ನಗರದ ನಂದ ಸರ್ಕಲ್ ಬಳಿ ಭಾನುವಾರ ಭಾರೀ ದುರ್ಘಟನೆ ಸಂಭವಿಸಿದ್ದು, ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದಿಂದ 3 ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರಂತ ನಡೆದಿದೆ. ಈ ಘಟನೆ ಜಿಲ್ಲೆಯಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ.

ಘಟನೆ ವಿವರ ಈಂತಿದೆ: ಮದ್ದೂರು ತಾಲ್ಲೂಕಿನ ಗೊರವನಹಳ್ಳಿಗೆ ಸೇರಿದ ಅಶೋಕ್ ಮತ್ತು ವಾಣಿ ದಂಪತಿ, ತಮ್ಮ ಮಗಳು ಹೃತೀಕ್ಷಗೆ (3 ವರ್ಷ) ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಮಂಡ್ಯ ನಗರದ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗಾಗಿ ಬೈಕ್‌ಅನ್ನು ಅಡ್ಡಗಟ್ಟಿದ್ದಾರೆ. ಹಠಾತ್ ಅಡ್ಡಗಟ್ಟಿದ ಪರಿಣಾಮ, ಅಶೋಕ್ ಚಾಲನೆ ಮಾಡುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ. ಈ ವೇಳೆ ಮಗು ಹೃತೀಕ್ಷ ತಲೆಯ ಮೇಲೆ ಹಿಂದಿನಿಂದ ಬಂದ ಟೆಂಪೋ ಹರಿದಿದೆ. ಇದರಿಂದ ತಲೆಗೆ ಭಾರೀ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಾಳೆ. ಆಕೆಯ ಮರಣದಿಂದ ಆಘಾತಕ್ಕೊಳಗಾದ ಪೋಷಕರು ರಸ್ತೆಯ ಮಧ್ಯೆ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಗೋಳಾಡಿದ ದುಃಖದ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣು ನೀರಾಗುವಂತೆ ಮಾಡಿದೆ.

ಹೃದಯ ವಿದ್ರಾವಕ ಈ ಘಟನೆ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯ ಮಿಮ್ಸ್ ಆಸ್ಪತ್ರೆ ಎದುರು ಸಂಭವಿಸಿದ್ದು, ಇದರಿಂದ ಸಂಚಾರಕ್ಕೂ ಕೆಲ ಹೊತ್ತಿಗೆ ವ್ಯತ್ಯಯ ಉಂಟಾಯಿತು. ಮೃತ ಮಗು ಹೃತೀಕ್ಷ, ಮದ್ದೂರು ತಾಲೂಕಿನ ಗೊರವನಹಳ್ಳಿಗೆ ಸೇರಿದ ವಾಣಿ ಹಾಗೂ ಅಶೋಕ್ ದಂಪತಿಯ ಮಗಳಾಗಿದ್ದಾಳೆ. ಈ ಘಟನೆ ಸಂಬಂಧವಾಗಿ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಸಾರ್ವಜನಿಕರು ಪೊಲೀಸರು ತಕ್ಷಣದ ಚಿಕಿತ್ಸೆಗಾಗಿ ಹೋಗುತ್ತಿದ್ದ ಕುಟುಂಬದ ಮಹತ್ವವನ್ನು ಅರ್ಥಮಾಡಿಕೊಳ್ಳದೆ, ನಿಯಮ ಪಾಲನೆಯ ಹೆಸರಲ್ಲಿ ಜೀವವನ್ನೇ ಹರಾಜುಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ದುರಂತದಿಂದ ತತ್ತರಿಸಿರುವ ಹೃತೀಕ್ಷನ ಪೋಷಕರಿಗೆ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಲಾಗುತ್ತಿದೆ. ಪೊಲೀಸರು ಇಂತಹ ಘಟನೆಗಳು ಪುನರಾವೃತವಾಗದಂತೆ ಕೆಲಸ ಮಾಡಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ.

PREV
Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ