ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸಿ: ಸಿ.ಟಿ. ರವಿ

By Kannadaprabha News  |  First Published Jun 24, 2020, 2:33 PM IST

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚು ಪ್ರವಾಸಿ ತಾಣಗಳಿದ್ದು, ಜಲ ಸಾಹಸ, ಟ್ರಕ್ಕಿಂಗ್‌, ಸೈಕ್ಲಿಂಗ್‌ಗೆ ಪ್ಲಾನ್‌ ಮಾಡಿಕೊಂಡಿದ್ದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಸಿ.ಟಿ. ರವಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಚಿಕ್ಕಮಗಳೂರು(ಜೂ.24): ಜಿಲ್ಲೆಯ ಪ್ರವಾಸಿತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕೆಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚು ಪ್ರವಾಸಿ ತಾಣಗಳಿದ್ದು, ಜಲ ಸಾಹಸ, ಟ್ರಕ್ಕಿಂಗ್‌, ಸೈಕ್ಲಿಂಗ್‌ಗೆ ಪ್ಲಾನ್‌ ಮಾಡಿಕೊಂಡಿದ್ದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.

Tap to resize

Latest Videos

ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಅಡ್ವೆಂಚರ್ಸ್‌ ಸಮಿತಿ, ಟ್ರಕ್ಕಿಂಗ್‌ ಸಮಿತಿ, ಹೋಂ ಸ್ಟೇ ಸಮಿತಿ, ನಗರ ಅಲಂಕಾರಿಕ ಎಂಬ ನಾಲ್ಕು ಸಮಿತಿಗಳನ್ನು ರಚಿಸಿ, ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂಗಳ ಅನುದಾನದೊಂದಿಗೆ ನಿರ್ಮಾಣವಾದ ಸ್ವಾಮಿಕಟ್ಟೆ ಮಾರ್ಗವಾಗಿ ಹಾದು ಹೋಗುವ ಹುಲಿಕೆರೆಯಿಂದ ಕರಡಿಗವಿ ಮಠ ರಸ್ತೆಯ ಕಾಮಗಾರಿಗೆ ಇಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಿದ್ದೇನೆ. pic.twitter.com/b2OpaitSvG

— C T Ravi 🇮🇳 ಸಿ ಟಿ ರವಿ (@CTRavi_BJP)

ಅರಣ್ಯ ಇಲಾಖೆಯಿಂದ ಈಗಾಗಲೇ ಕೆಲವು ಪ್ರದೇಶಗಳಲ್ಲಿ ಟ್ರಕ್ಕಿಂಗ್‌ ಆಯೋಜಿಸಲಾಗಿದ್ದು, ಸೀತಾಳಯ್ಯನಗಿರಿ, ಸಿರಿಮನೆ, ದತ್ತಪೀಠ ಹಾಗೂ ಭದ್ರಾ ಹಾಗೂ ಅಗತ್ಯವಿರುವ ಪ್ರದೇಶಗಳಲ್ಲಿ ಹೊಸದಾಗಿ ಆಯೋಜಿಸುವಂತೆ ಪ್ರಸ್ತಾವನೆಯನ್ನು ಸಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೈಕ್ಲಿಂಗ್‌ಗಾಗಿ ಕೈಮರದಿಂದ ಸೀತಾಳಯ್ಯನಗಿರಿ, ಮುಳ್ಳಯ್ಯಗಿರಿ ಹಾಗೂ ಕೈಮರದಿಂದ ಕೊಳಗಾಮೆ ಪ್ರದೇಶಗಳಲ್ಲಿ ಮಾರ್ಗವನ್ನು ಗುರುತಿಸಲಾಗಿದ್ದು, ಅಯ್ಯನಕೆರೆಯಲ್ಲೂ ಹೊಸದಾಗಿ ಸೈಕ್ಲಿಂಗ್‌ ಆಯೋಜಿಸುವಂತೆ ಸೂಚಿಸಿದರು.

ರಿವರ್‌ ಆಫ್ಟಿಂಗ್‌ನ್ನು ತುಂಗಾ-ಭದ್ರಾ ನದಿಗಳಲ್ಲಿ ಆಯೋಜಿಸಲಾಗಿದ್ದು, ಜಲಸಾಹಸ ಕ್ರೀಡೆಗಳನ್ನು ನಲ್ಲೂರು ಕೆರೆ, ಭದ್ರಾ ಹಿನ್ನೀರಿನ ಪ್ರದೇಶಗಳಲ್ಲಿ ಇದರ ಜೊತೆಗೆ ಲಕ್ಯಾಡ್ಯಾಂನಲ್ಲೂ ಆಯೋಜಿಸಲಾಗುವುದು. ಪ್ಯಾರಾ ಗ್ಲೇಡಿಂಗ್‌ ಹಾಗೂ ಪ್ಯಾರಾ ಮೋಟರಿಂಗ್‌ಗಳನ್ನು ಸೀತಾಳಯ್ಯನಗಿರಿ ಹಾಗೂ ಕ್ಯಾತನಮಕ್ಕಿ, ಮುಳ್ಳಯ್ಯಗಿರಿಗಳಲ್ಲೂ ಆಯೋಜಿಸಲು ಪ್ರಸ್ತಾವನೆ ಸಲ್ಲಿಸಿ ಹಾಗೂ ಅಯ್ಯನಕೆರೆಯಲ್ಲಿ ಹಾಟೇರ್‌ ಬಲೂನ್‌ಗಳನ್ನು ಆಯೋಜಿಸುವಂತೆ ತಿಳಿಸಿದರು.

ಕೆಮ್ಮಣ್ಣುಗುಂಡಿ ಆಕರ್ಷಣಿಯ ಹಾಗೂ ಹೆಚ್ಚಾಗಿ ಪ್ರವಾಸಿಗರು ಬರುವ ತಾಣವಾಗಿರುವುದರಿಂದಾಗಿ ಪ್ರವಾಸಿಗರಿಗೆ ಹೆಚ್ಚಿನ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಈ ಭಾಗದ ಸುತ್ತಮುತ್ತ ಕಲ್ಲತ್ತಿಗಿರಿ ಜಲಪಾತ, ಹೆಬ್ಬೆ ಪಾಲ್ಸ್‌ ಹಾಗೂ ಅರಣ್ಯ ಪ್ರದೇಶವಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಾರೆ ಎಂದು ತಿಳಿಸಿದರು.

ಹೋಂ ಸ್ಟೇಗಳಿಗೆ ಸಂಬಂಧಿಸಿದಂತೆ 15 ವರ್ಷದ ಹಳೆಯ ಕಟ್ಟಡವಾಗಿರಬೇಕು. 5 ಕೊಠಡಿಗಳನ್ನು ಮಾತ್ರ ಹೊಂದಿರಬೇಕು, ಈಜು ಕೊಳ ಇರಬಾರದು, ಮದ್ಯ ಮಾರಾಟ ಮಾಡಬಾರದು, ಹೋಂ ಸ್ಟೇ ಹೊಂದಿರುವವರು ಸ್ಥಳೀಯರಾಗಿರಬೇಕು, ರಸ್ತೆ ಬದಿಯಲ್ಲಿ ಪ್ರವಾಸೋದ್ಯಮ ಹಾಗೂ ಹೋ ಸ್ಟೇಗಳಿಗೆ ಸಂಬಂಧಿಸಿದ ನಾಮಫಲಕಗಳನ್ನು ಹಾಕಬೇಕು ಹಾಗೂ ಸ್ಥಳೀಯವಾಗಿ ಗ್ರಾಪಂಗಳಿಂದ ಪರವಾನಿಗೆ ಪಡೆದಿರಬೇಕು. ಅಲ್ಲದೆ, ಹೋಂ ಸ್ಟೇ ನೆಟ್‌ವರ್ಕ್ ಮಾಡಿದರೆ ಜಿಲ್ಲೆಯ ಎಲ್ಲ ಹೋಂ ಸ್ಟೇಗಳ ಮಾಹಿತಿ ಒಂದೇ ಕಡೆ ದೊರಕುತ್ತದೆ ಎಂದು ತಿಳಿಸಿದರು.

ನಗರ ಅಲಂಕಾರಕ್ಕೆ ಸಂಬಂಧಿಸಿದಂತೆ ಉಪ ಸಮಿತಿಯು ವರದಿ ನೀಡಿದ್ದು, ನಗರದ ಪ್ರಾರಂಭದಲ್ಲೇ ಪ್ರವಾಸೋದ್ಯಮದ ಕುರಿತಾದ ನಾಮಫಲಕ ಹಾಗೂ ಪ್ರಮುಖ ಸ್ಥಳ ಮತ್ತು ವೃತ್ತಗಳಲ್ಲಿ ಪ್ರವಾಸಿ ತಾಣಗಳ ಕುರಿತ ನಾಮಫಲಕ ಹಾಕಬೇಕು, ಅನಧಿಕೃತವಾದ ಬ್ಯಾನರ್‌ಗಳನ್ನು ಹಾಗೂ ಫ್ಲೆಕ್ಸ್‌ಗಳಿದ್ದಲ್ಲಿ ತೆರವುಗೊಳಿಸಬೇಕು, ಪ್ರಮುಖ ರಸ್ತೆಗಳಲ್ಲಿ ಡಿವೈಡರ್‌ಗಳನ್ನು ಅಳವಡಿಸಿ ರಸ್ತೆಗಳು ವಿಭಜನೆ ಆಗುವ ಜಾಗದಲ್ಲಿ ಅಲಂಕರಿಸಬೇಕು ಎಂದು ತಿಳಿಸಿದರು.

ನಗರದ ಎಂ.ಜಿ.ರಸ್ತೆಯಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತಿಂಗಳಿಗೆ ಒಂದು ದಿನ ವಾಹನ ಸಂಚಾರ ದಟ್ಟಣೆ ಮುಕ್ತ ದಿನವಾಗಿಸಿ (ವೆಹಿಕಲ್‌ ಫ್ರೀ ಡೇ) ಅಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.

ನಗರಕ್ಕೆ ಬರುವ ವಾಹನಗಳಿಗಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು, ಹೋಟೆಲ್‌ಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತಾದ ಭಿತ್ತಿ ಪತ್ರಗಳನ್ನು ಅಳವಡಿಸಬೇಕು. ಜೊತೆಗೆ ಅಂಬೇಡ್ಕರ್‌ ರಸ್ತೆಯಲ್ಲಿ ಫುಡ್‌ಸ್ಟ್ರೀಟ್‌ಗಳನ್ನು ತೆರೆದು ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯು ಹೆಚ್ಚು ಪ್ರಶಂಸೆಗೆ ಒಳಗಾಗುತ್ತದೆ. ಪ್ರವಾಸಿಗರಿಗಾಗಿ ಮಿನಿಬಸ್‌ ಹಾಗೂ ಜೀಪ್‌ಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಮುತ್ತೋಡಿ ಅರಣ್ಯದಲ್ಲಿ ಸಫಾರಿ ಇರುವ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ ವಿಶೇಷ ದಿನಗಳಲ್ಲಿ ಹೆಲಿಟೂರಿಸಂ ಆಯೋಜಿಸಬೇಕು ಹಾಗೂ ಪ್ಲಾಸ್ಟಿಕ್‌ ಮತ್ತು ಲಿಕ್ಕರ್‌ ಬಾಟಲ್‌ಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯದಂತೆ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ಉಪ ನಿರ್ದೇಶಕಿ ಡಾ.ಎಚ್‌.ಪಿ.ಮಂಜುಳಾ ಉಪಸ್ಥಿತರಿದ್ದರು.

click me!