ಕೆಎಂಎಫ್‌ ಮೂಲಕ ಮೆಕ್ಕೆಜೋಳ ಖರೀದಿ: ಸಂಸದ ಬಿ ವೈ ರಾಘವೇಂದ್ರ

By Kannadaprabha NewsFirst Published May 15, 2020, 4:18 PM IST
Highlights

ಕೆಎಂಎಫ್‌ ಮೂಲಕ ಮೆಕ್ಕೆಜೋಳ ಖರೀದಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಶಿಕಾರಿಪುರ(ಮೇ.15): ಕೆಎಂಎಫ್‌ ಮೂಲಕ ಮೆಕ್ಕೆಜೋಳ ಖರೀದಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಾಗೂ ಸಹಕಾರಿ ಸಂಘಗಳ ಮೂಲಕ ಖರೀದಿಯಿಂದ ಯೋಜನೆಯ ದುರುಪಯೋಗ ತಡೆಗಟ್ಟಬಹುದಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

ತಾಲೂಕಿನ ಸಂಡ ಕೆಎಂಎಫ್‌ ಪಶು ಆಹಾರ ಘಟಕದಲ್ಲಿ ಮೆಕ್ಕೆಜೋಳ ಖರೀದಿ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮೆಕ್ಕೆಜೋಳ ನೀಡಲು ರೈತರು ಪಹಣಿ ಪಡೆಯಲು ಪರದಾಡುತ್ತಿದ್ದಾರೆ. ಅದು ನಿಲ್ಲಬೇಕಿದೆ, ರೈತರು ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ತೆರಳಿ ಅಲ್ಲಿರುವ ಪೋಟ್‌ ಪೋರ್ಟಲ್‌ನಲ್ಲಿ ರೈತರ ಆಧಾರ್‌ ಕಾರ್ಡ್‌ ನೀಡಿದರೆ ಸಾಕು ಅವರ ಕೃಷಿಭೂಮಿಯ ಬೆಳೆ ಏನಿದೆ ಎನ್ನುವುದು ತಿಳಿಯುತ್ತದೆ, ಪೋರ್ಟಲ್‌ನಲ್ಲಿ ದಾಖಲೆ ಇಲ್ಲದ ರೈತರು ಮಾತ್ರ ದಾಖಲೆ ಪಡೆಯುವುದಕ್ಕೆ ಗ್ರಾಮಲೆಕ್ಕಾಧಿಕಾರಿ ಸಂಪರ್ಕಿಸಿ ಸಮಸ್ಯೆ ಸರಿಪಡಿಸಿಕೊಳ್ಳಬಹುದು. ಜಿಲ್ಲೆಯ ರೈತರು ಕೆಎಂಎಫ್‌ಗೆ ಮೆಕ್ಕೆಜೋಳ ಮಾರುವುದಕ್ಕೆ ಆರ್‌ಟಿಸಿ ದಾಖಲೆಯ ಅಗತ್ಯವಿರುವುದಿಲ್ಲ ಬದಲಿಗೆ ಆಧಾರ್‌ ಕಾರ್ಡ್‌, ಮೊಬೈಲ್‌ನೊಂದಿಗೆ ಹಾಲು ಸಂಗ್ರಹ ಕೇಂದ್ರಕ್ಕೆ ತೆರಳಿದರೆ ಸಾಕು ಎಂದು ಸಂಸದರು ತಿಳಿಸಿದರು.

ತಾಲೂಕಿನ ಸಂಡ ಗ್ರಾಮ ಸೇರಿ ರಾಜ್ಯದಲ್ಲಿ ಐದು ಪಶು ಆಹಾರ ಘಟಕಗಳಿವೆ ಅವು ಸೇರಿ ರಾಜ್ಯದಲ್ಲಿ ಒಟ್ಟು 9 ಕಡೆ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ. ರಾಜ್ಯದ 1250 ಹಾಲು ಉತ್ಪಾದಕ ಸಹಕಾರ ಸಂಘದ ಮೂಲಕ ರೈತರು ಮೆಕ್ಕೆಜೋಳ ನೀಡುವ ಕಾರಣಕ್ಕೆ ಎಲ್ಲಿಯೂ ಅದು ದುರುಪಯೋಗ ಆಗುವುದಿಲ್ಲ, ಜಿಲ್ಲೆಯ ಒಟ್ಟು ಉತ್ಪಾದನೆ ಅರ್ಧಭಾಗ ಮೆಕ್ಕೆಜೋಳ ಸೊರಬ, ಸಾಗರ, ಶಿಕಾರಿಪುರ ತಾಲೂಕಿನಲ್ಲಿ ಬೆಳೆಯಲಾಗುತ್ತಿದ್ದು ಈ ಭಾಗದ ರೈತರಿಗೆ ಯೋಜನೆ ಅನುಕೂಲ ಆಗುತ್ತದೆ ಎಂದು ಹೇಳಿದರು.

ಕೊನೆಗೂ ಕ್ವಾರಂಟೈನ್‌ ತೆರೆಯುವಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಯಶಸ್ವಿ

ಪಶು ಆಹಾರ ಘಟಕದಲ್ಲಿ ಗುಣಮಟ್ಟದ ಉತ್ಪಾದನೆಗೆ ಗಮನ ನೀಡಬೇಕು, ಕಾಯಂ ಸಿಬ್ಬಂದಿ ನೇಮಕ ಕುರಿತು ಈಗಾಗಲೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಶೀಘ್ರದಲ್ಲೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಪಶು ಆಹಾರ ಘಟಕ ವ್ಯವಸ್ಥಾಪಕ ಸದಾಶಿವಪ್ಪ, ನೋಡಲ್‌ ಅಧಿಕಾರಿ ಹೇಮಶೇಖರ್‌, ತಹಸೀಲ್ದಾರ್‌ ಎಂ.ಪಿ.ಕವಿರಾಜ್‌, ಕೃಷಿ ಅಧಿಕಾರಿ ಕಿರಣ್‌ಕುಮಾರ್‌, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಎಸ್‌.ಗುರುಮೂರ್ತಿ, ಕೆಎಂಎಫ್‌ ನಿರ್ದೇಶಕ ಸಿದ್ಧಲಿಂಗಪ್ಪ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ ಇದ್ದರು.
 

click me!