Huvina Hadagali: ಇಂದು ಮೈಲಾರಲಿಂಗೇಶ್ವರ ಜಾತ್ರೆ: ಕಾರ್ಣಿಕ ನುಡಿಯಲ್ಲೇ ಅಡಗಿದ ದೇಶದ ಭವಿಷ್ಯ..!

By Kannadaprabha News  |  First Published Feb 18, 2022, 7:03 AM IST

*   ಕಾರ್ಣಿಕಕ್ಕೆ ಕ್ಷಣಗಣನೆ ಭಕ್ತರ ಕಾತುರ, ಸರ​ಳ​ವಾಗಿ ಜಾತ್ರಾ ಧಾರ್ಮಿಕ ಆಚರಣೆ
*   ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಗೆ ಕ್ಷಣಗಣನೆ
*   ಈ ಬಾರಿಯ ಕಾರ್ಣಿಕ ನುಡಿಯಲ್ಲಿ ಏನು ಅಡಗಿದೆ? 


ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಫೆ.18):  ಅತಿ ಸಂಭ್ರಮದಿಂದ ಜರುಗಬೇಕಿದ್ದ ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಗೆ(Mailaralingeshwara Fair) ಕೋವಿಡ್‌ ಕರಿನೆರಳಿನಿಂದಾಗಿ ಎಲ್ಲ ಧಾರ್ಮಿಕ ಆಚರಣೆಗಳು ಸರಳವಾಗಿಯೇ ಸಾಂಗವಾಗಿವೆ. ಫೆ. 18ರಂದು ಶುಕ್ರವಾರ ಸಂಜೆ 5.30ಕ್ಕೆ ಜರುಗುವ ಕಾರ್ಣಿಕವನ್ನು ಮೈಲಾರಲಿಂಗೇಶ್ವರ ದೈವವಾಣಿ ಎಂದು ನಂಬಿರುವ ಭಕ್ತರು(Devotees), ಆಲಿಸಲು ಕಾತುರದಿಂದ ಕಾಯುತ್ತಿದ್ದಾರೆ. ಕಾರ್ಣಿಕ ನುಡಿ ಕೇಳಲು ಈ ಬಾರಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಆದರೆ ಜಿಲ್ಲಾಡಳಿತದ ನಿರ್ದೇಶನದಂತೆ ಪೊಲೀಸ್‌ ಇಲಾಖೆ(Police Department) ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ.

Tap to resize

Latest Videos

undefined

ಶತಮಾನಗಳ ಇತಿಹಾಸ ಹೊಂದಿರುವ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ಸ್ಥಳ ಡೆಂಕಣ ಮರಡಿ ಪುಣ್ಯಭೂಮಿಯಲ್ಲಿ ನಡೆಯುವ ಭಂಡಾರದ ಒಡೆಯನ ವಾಣಿಯಲ್ಲಿ ದೇಶದ ಭವಿಷ್ಯವೇ ಅಡಗಿದೆ. ಕಾರ್ಣಿಕೋತ್ಸವದ(Karnikotswa) ಮುನ್ನಾ ದಿನವಾದ ಗುರುವಾರ ಬೆಳಗ್ಗೆ ದೇವಸ್ಥಾನದಲ್ಲಿ(Temple) ತ್ರಿಶೂಲ, ಆಯುಧ ಪೂಜೆ ಹಾಗೂ ಪೊಲೀಸ್‌ ಇಲಾಖೆಯಿಂದ ತರಿಸಿದ್ದ ಬಂದೂಕಿಗೆ ಪೂಜೆ ನೆರವೇರಿತು. ಜತೆಗೆ ಬಿರುದಾವಳಿಗಳ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ ಸಮ್ಮುಖದಲ್ಲಿ ಜರುಗಿದವು.

Mailaralingeshwara Fair: ನಿಷೇಧದ ನಡುವೆಯೂ ಡೆಂಕಣ ಮರಡಿಗೆ ರಾತ್ರೋರಾತ್ರಿ ಭಕ್ತರ ದಂಡು..!

ಕಾರ್ಣಿಕ ನುಡಿ ಆಲಿಸಲು ಪ್ರತಿ ವರ್ಷ ರಾಜ್ಯ, ಅಂತಾರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಈ ಬಾರಿ ಕೋವಿಡ್‌(Covid-19) ನಿಯಂತ್ರಿಸಬೇಕೆಂಬ ಜಿಲ್ಲಾಡಳಿತದ ನಿರ್ದೇಶನದಂತೆ, ಭಕ್ತರ ಆಗಮನಕ್ಕೆ ಅವಕಾಶ ಇಲ್ಲದ ಕಾರಣ ಜನರ ಆಗಮನ ಕಡಿಮೆಯಾಗಿದೆ.

ಕಾರ್ಣಿಕ ಸ್ಥಳ ಡೆಂಕಣ ಮರಡಿಯಲ್ಲಿ ಶಿವ-ಪಾರ್ವತಿಯರು ಮೈಲಾರಲಿಂಗ-ಗಂಗಿ ಮಾಳಮ್ಮ ವೇಶದಲ್ಲಿ ಬಂದು ಮಲ್ಲಾಸುರ, ಮಣಿಕಾಸುರರನ್ನು ಸಂಹರಿಸಿದ ವಿಜಯ ದಿನದ ಸಂಕೇತವಾಗಿ ಭಕ್ತರ ಆಶಯದಂತೆ ಶುಭ ನುಡಿ ದೇವವಾಣಿಯನ್ನು ಕಾರ್ಣಿಕ ನುಡಿ ಹೇಳುವುದು ಸಂಪ್ರದಾಯ ಈವರೆಗೂ ನಡೆದು ಬಂದಿದೆ.

ಇಂದು ಸಂಜೆ 5.30ಕ್ಕೆ ಡೆಂಕಣ ಮರಡಿಯಲ್ಲಿ 11 ದಿನಗಳ ಕಾಲ ಉಪವಾಸ ವ್ರತದಲ್ಲಿರುವ ಗೊರವಯ್ಯ ಸುಮಾರು 20 ಅಡಿ ಉದ್ದದ ತುಪ್ಪ ಸವರಿದ ಐತಿಹಾಸಿಕ ಬಿಲ್ಲನ್ನು ಏರಿ ಸದ್ದಲೇ..! ಎಂದಾಗ ನೆರೆಯುವ ಲಕ್ಷಾಂತರ ಭಕ್ತರು, ಪಶು, ಪಕ್ಷಿ ಸೇರಿದಂತೆ ಎಲ್ಲ ಕಡೆಗೂ ನಿಶ್ಯಬ್ದ ಆವರಿಸುತ್ತದೆ. ಆ ಕ್ಷಣದಲ್ಲೇ ಗೊರವಯ್ಯ ಕಾರ್ಣಿಕ ನುಡಿಯುವುದು ಸಂಪ್ರದಾಯ.

ಈ ಕಾರ್ಣಿಕ ನುಡಿಯಲ್ಲಿ ಪ್ರಸಕ್ತ ವರ್ಷದ ಮಳೆ, ಬೆಳೆ, ರಾಜಕೀಯದ ಏಳು-ಬೀಳು, ಆರ್ಥಿಕ, ವಾಣಿಜ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳು ಹಾಗೂ ದೇಶದ ಭವಿಷ್ಯ ಅಡಗಿರುತ್ತದೆ. ಕಳೆದ 2021ರಲ್ಲಿ ಮುತ್ತಿನ ರಾಶಿ ಮೂರು ಪಾಲು ಆತಲೇ ಪರಾಕ್‌ ಎಂದು ಗೊರವಯ್ಯ ರಾಮಣ್ಣ ಕಾರ್ಣಿಕ ನುಡಿದನು. ಅದರಂತೆ ಅಪಾರ ಮಳೆಗೆ ರೈತರು ಬೆಳೆದಿದ್ದ ಬೆಳೆ ನೀರು ಪಾಲಾಗಿ ಹೋಗಿತ್ತು. ಹೀಗೆ ಪ್ರತಿ ವರ್ಷದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯು ಸತ್ಯಾಂಶವನ್ನು ಸಾರುತ್ತಿರುವ ಹಿನ್ನೆಲೆಯಲ್ಲಿ, ಕಾರ್ಣಿಕ ನುಡಿಯನ್ನು ಭಕ್ತರು ಅಪಾರವಾಗಿ ನಂಬಿಕೆ ಹೊಂದಿದ್ದಾರೆ.

ಗಡ್ಡಧಾರಿ ಸಿಎಂ ಸುಳ್ಳು, ಅದು ರಾಜಕೀಯ ಪ್ರೇರಿತ ಹೇಳಿಕೆ: ಗೊರವಯ್ಯ

ಫೆ. 19ರಂದು ಶನಿವಾರ ಸಂಜೆ 4.30ಕ್ಕೆ ದೇವಸ್ಥಾನದ ಆವರಣದಲ್ಲಿ ಕಂಚಿವೀರರು, ಆಕರ್ಷಕ ಮೈಲಾರಲಿಂಗನ ಒಡಪುಗಳನ್ನು ಹೇಳುತ್ತಾ ಪವಾಡಗಳು ನಡೆಯಲಿವೆ. ಜಾತ್ರೆಗೆ ಬಂದ ಭಕ್ತರು ಗೊರವರು ಈ ಬಾರಿ ದೇವಸ್ಥಾನಕ್ಕೆ ಭಕ್ತರಿಗೆ ಅವಕಾಶ ಇಲ್ಲದ ಕಾರಣ, ಎಲ್ಲ ಭಕ್ತರು ಡೆಂಕಣ ಮರಡಿಯಲ್ಲಿ ತಮ್ಮ ಹರಕೆ, ಸೇವೆಗಳನ್ನು ಮಾಡುತ್ತಿದ್ದಾರೆ.

ಕಾರ್ಣಿಕ ನುಡಿಯ ಘಟನಾವಳಿಗಳು:

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಶತಮಾನಗಳ ಕಾಲದ ಇತಿಹಾಸವಿದ್ದು, ಅದರಂತೆ 1856ರಲ್ಲಿ ಕೆಂಪು ನೊಣಗಳಿಗೆ ಕಷ್ಟ ಪ್ರಾಪ್ತಿಯಾದೀತಲೇ ಪರಾಕ್‌ ಎಂಬ ಕಾರ್ಣಿಕ ನುಡಿ, ಹಿನ್ನೆಲೆಯಲ್ಲಿ ಭಾರತ(India) ದೇಶವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು, ಆಡಳಿತ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಸಿಪಾಯಿದಂಗೆ ನಡೆಯಿತು. 1984ರಲ್ಲಿ ಇಬ್ಬನಿ ಕರಗಿತಲೇ ಪರಾಕ್‌ ಕಾರ್ಣಿಕ ನುಡಿದಾಗ, ದೇಶದ ಅಂದಿನ ಮಹಿಳಾ ಪ್ರಧಾನಿ ಇಂದಿರಾ ಗಾಂ​ಧಿ(Indira Gandhi) ಅವರ ಹತ್ಯೆ​ಯಾ​ಗಿತ್ತು. ಅದೇ ರೀತಿ 1991ರಲ್ಲಿ ಮುತ್ತು ಒಡೆದು ಮೂರು ಭಾಗ ಆದಿತಲೇ ಪರಾಕ್‌ ಎಂಬ ಕಾರ್ಣಿಕ ನುಡಿದಾಗ, ಪ್ರಧಾನಿ ರಾಜೀವ ಗಾಂ​ಧಿ ಬಾಂಬ್‌ ಸ್ಫೋಟದಿಂದ ನಿಧನ ಹೊಂದಿದ ನಿದರ್ಶನಗಳಿವೆ ಎನ್ನುತ್ತಾರೆ ದೇವಸ್ಥಾನದ ವಂಶ ಪರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್‌.

ಇಂತಹ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿಯಲ್ಲಿ ದೇಶದ ಭವಿಷ್ಯವೇ ಅಡಗಿದೆ ಎಂಬ ಸತ್ಯಾಂಶ ಕಂಡುಬರುತ್ತದೆ. ಈ ಬಾರಿಯ ಕಾರ್ಣಿಕ ನುಡಿಯಲ್ಲಿ ಏನು ಅಡಗಿದೆ? ಎಂಬ ಕಾತರದಲ್ಲಿ ಭಕ್ತರಿದ್ದಾರೆ.
 

click me!