ಗಡಿ ವಿವಾದ: ಪ್ರಧಾನಿ ಮಧ್ಯಸ್ಥಿಕೆಗೆ ಮಹಾರಾಷ್ಟ್ರ ಸಂಸದ ಮಾನೆ ಒತ್ತಾಯ

By Kannadaprabha News  |  First Published Dec 25, 2022, 11:30 PM IST

ಗಡಿ ಭಾಗದಲ್ಲಿ ಮರಾಠಿಗರಿಗೆ ಅನ್ಯಾಯ ಆಗುತ್ತಿದೆ, ತಾವು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆ ಬಗೆಹರಿಸಬೇಕು. ಮರಾಠಿಗರಿಗೆ ನ್ಯಾಯ ಒದಗಿಸಬೇಕು ಎಂದು ಪ್ರಧಾನಿಗೆ ಮನವಿ ಮಾಡಿದ ಸಂಸದ ಧೈರ್ಯಶೀಲ ಮಾನೆ 


ಬೆಳಗಾವಿ(ಡಿ.25): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುವಂತೆ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ತನ್ನ ಜನ್ಮದಿನದ ನೆಪವೊಡ್ಡಿ ಪ್ರಧಾನಿ ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಿರುವ ಮಾನೆ, ಕರ್ನಾಟಕ ಸರ್ಕಾರದ ಬಗ್ಗೆ ಸುಳ್ಳು ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಡಿ. 14 ರಂದು ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಉಭಯ ಮುಖ್ಯಮಂತ್ರಿಗಳ ಸಭೆ ನಡೆಸಿದರು. ಅದರಂತೆಯೇ ನಾವು ನಡೆದುಕೊಂಡಿದ್ದೇವೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಭೆಯ ನಿಯಮ ಉಲ್ಲಂಘಿಸಿದ್ದಾರೆ. ಕೇಂದ್ರ ಗೃಹಮಂತ್ರಿಗಳ ಸೂಚನೆಯನ್ನು ಬೊಮ್ಮಾಯಿ ಧಿಕ್ಕರಿಸಿದ್ದಾರೆ ಎಂದೂ ಪತ್ರದಲ್ಲಿ ಉಲ್ಲೇಖಿಸಿಸಲಾಗಿದೆ.

Latest Videos

undefined

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ, ಎಚ್‌ಕೆಪಿ

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ ಆದೇಶ ಬರುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಅಮಿತ್‌ ಶಾ ಸೂಚನೆ ನೀಡಿದ್ದಾರೆ. ನಾನು ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷನಾದ್ದರಿಂದ ಅಲ್ಲಿನ ಮರಾಠಿ ಜನರ ಅಳಲು ಕೇಳಲು ಡಿ.19ರಂದು ಬೆಳಗಾವಿಗೆ ಹೊರಟಿದ್ದೆ. ಆದರೆ, ನನ್ನ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಒಕ್ಕೂಟ ವ್ಯವಸ್ಥೆಯನ್ನೂ ಧಿಕ್ಕರಿಸಿದ್ದಾರೆ. ಗಡಿ ಭಾಗದಲ್ಲಿ ಮರಾಠಿಗರಿಗೆ ಅನ್ಯಾಯ ಆಗುತ್ತಿದೆ, ತಾವು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆ ಬಗೆಹರಿಸಬೇಕು. ಮರಾಠಿಗರಿಗೆ ನ್ಯಾಯ ಒದಗಿಸಬೇಕು ಎಂದು ಪ್ರಧಾನಿಗೆ ಮನವಿ ಮಾಡಿದ್ದಾರೆ.

ಕಾಲ್ಕಿತ್ತ ಎಂಇಎಸ್‌ ಕಾರ್ಯಕರ್ತರು!

ಬೆಳಗಾವಿ: ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣಕ್ಕೆ ಮರಾಠಿ ನಾಮಫಲಕ ಅಳವಡಿಸುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರು ವಾಯವ್ಯಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವೈ.ನಾಯಕರ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಡಿಸಿ ಪಿ.ವೈ. ನಾಯಕ ಕನ್ನಡ, ಇಂಗ್ಲಿಷ್‌ ಫಲಕ ಮಾತ್ರ ಹಾಕುತ್ತೇವೆ ಎಂದಿದ್ದಾರೆ. ಇದರಿಂದಾಗಿ ದಾರಿಗೆ ಸುಂಕ ಇಲ್ಲ ಎಂಬಂತೆ ಎಂಇಎಸ್‌ ಕಾರ್ಯಕರ್ತರು ಅಲ್ಲಿಂದ ಕಾಲ್ಕಿತ್ತರು.

click me!