
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.04): ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಮೂರು ನಾಲ್ಕು ವರ್ಷಗಳ ಕಾಲ ಭೂಕುಸಿತವಾಗಿದ್ದು ಗೊತ್ತೇ ಇದೆ. ಈ ವರ್ಷವೂ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂಬ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಮಡಿಕೇರಿ ನಗರಸಭೆ ಅಪಾಯಕಾರಿ ಪರಿಸ್ಥಿತಿ ಇರುವ ನಗರದ ಹಲವು ಬಡಾವಣೆಗಳ 200 ಕ್ಕೂ ಹೆಚ್ಚು ಕುಟುಂಬಗಳು ತೀವ್ರ ಮಳೆಯ ಸಂದರ್ಭ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಿ ಎಂದು ನೋಟಿಸ್ ನೀಡಿದೆ. ಅಲ್ಲದೆ ಮಡಿಕೇರಿ ನಗರದ ಹಲವೆಡೆ ಕಾಳಜಿ ಕೇಂದ್ರವನ್ನು ತೆರೆಯಲು ನಗರಸಭೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಇದನ್ನೆಲ್ಲಾ ನೋಡಿದರೆ 2018 ರಂತೆಯೇ ಈ ಬಾರಿಯೂ ಮಡಿಕೇರಿ ನಗರದ ಹಲವು ಬಡಾವಣೆಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿನಾ ಎನ್ನುವ ಅನುಮಾನ ದಟ್ಟವಾಗುತ್ತಿದೆ. ಹೌದು ಮಡಿಕೇರಿ ನಗರಸಭೆಯ ವ್ಯಾಪ್ತಿಯ ಇಂದಿರಾ ನಗರ, ಚಾಮುಂಡೇಶ್ವರಿ ನಗರಿ, ಮಂಗಳಾದೇವಿ ನಗರ, ಮಲ್ಲಿಕಾರ್ಜುನನಗರ, ತ್ಯಾಗರಾಜ ಕಾಲೋನಿ ಸೇರಿದಂತೆ ಹಲವು ಬಡಾವಣೆಗಳು ಅತೀ ಹೆಚ್ಚಿನ ಬೆಟ್ಟ ಪ್ರದೇಶದಿಂದ ಕೂಡಿವೆ. ಈ ಬಡಾವಣೆಗಳಲ್ಲಿರುವ ಬಹುತೇಕ ಮನೆಗಳು ಅಪಾಯದಲ್ಲಿ ಇವೆ ಎಂದು ಮಡಿಕೇರಿ ನಗರಸಭೆ ಅಧಿಕಾರಿಗಳು ಗುರುತ್ತಿಸಿದ್ದಾರೆ. ಇವರಿಗೆ ಈಗಾಗಲೇ ನೋಟಿಸ್ ಅವನ್ನು ನೀಡಿರುವ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.
ವಿವಿಧ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದಿದ್ದೇವೆ. ಅವುಗಳಿಗೆ ಸ್ಥಳಾಂತರವಾಗಿ, ಇಲ್ಲವೆ ಸುರಕ್ಷಿತವಾಗಿರುವ ನಿಮ್ಮ ಸಂಬಂಧಿಕರ ಮನೆಗಾದರೂ ತೆರಳಿ ಎಂದು ಸೂಚಿಸಿದೆ. ಈ ನೊಟೀಸ್ ದೊರೆ ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ನೊಟೀಸ್ ನೀಡಿಯೂ ಸುರಕ್ಷಿತ ಸ್ಥಳಗಳಿಗೆ ತೆರಳದೇ ಇದ್ದು, ಒಂದು ವೇಳೆ ಏನಾದರೂ ಸಮಸ್ಯೆ ಎದುರಾದಲ್ಲಿ ಸಂಭವಿಸುವ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಆಗುವ ಎಲ್ಲಾ ಸಮಸ್ಯೆಗಳಿಗೆ ನೀವೇ ಜವಾಬ್ದಾರರಾಗುತ್ತೀರಾ ಎಂದು ಸೂಚಿದೆ. ನೊಟೀಸ್ ನೀಡಿರುವುದಕ್ಕೆ ಈ ಬಡಾವಣೆಗಳ ನಿವಾಸಿಗಳು ನಗರಸಭೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.
ಪ್ರತೀ ವರ್ಷ ನೊಟೀಸ್ ನೀಡುತ್ತೀರಾ, ನಾವು ಅಪಾಯದ ಸ್ಥಿತಿಯಲ್ಲಿ ಇದ್ದೇವೆ ಎಂದು ಗೊತ್ತಿದ್ದು ತಾನೇ ನೊಟೀಸ್ ನೋಟಿಸ್ ನೀಡಿರುವುದು. ಪ್ರತೀ ವರ್ಷ ಈ ರೀತಿ ನೊಟೀಸ್ ನೀಡುವ ಬದಲು ಶಾಶ್ವತವಾಗಿ ಸುರಕ್ಷಿತ ಸ್ಥಳಗಳಿಗೆ ನಮ್ಮನ್ನ ಸ್ಥಳಾಂತರ ಮಾಡಬಹುದು ಅಲ್ಲವೆ. ಎಷ್ಟೋ ಕುಟುಂಬಗಳು ತೀರಾ ಅಪಾಯದ ಸ್ಥಿತಿಯಲ್ಲಿ ಮನೆ ನಿರ್ಮಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಅಂತ ಕುಟುಂಬಗಳಿಗೆ ಮನೆ ನೀಡುವುದಾಗಿ ಹೇಳಿ ನಂತರ ಅವರಿಗೂ ಮನೆ ನೀಡಿಲ್ಲ. ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು.
ಆದರೆ ಪ್ರತೀ ವರ್ಷ ಮಳೆಗಾಲದ ಸಂದರ್ಭ ನೊಟೀಸ್ ನೀಡಿ, ಮಳೆ ಮುಗಿದ ಬಳಿಕ ನಮ್ಮತ್ತ ತಿರುಗಿಯೂ ನೋಡುವುದಿಲ್ಲ. ಸದ್ಯ ಶಾಸಕರು ಇಂತಹವರಿಗೆಲ್ಲಾ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚಿಂತಿಸಿದ್ದಾರೆ. ಅದು ಕಾರ್ಯ ರೂಪಕ್ಕೆ ಬಂದರೆ ಒಳ್ಳೆಯದ್ದು ಎಂದು ಸ್ಥಳೀಯರಾದ ಹಾಗೂ ಮಡಿಕೇರಿ ನಗರಸಭೆ ಮಾಜಿ ಉಪಾಧ್ಯಕ್ಷೆ ಜುಲೇಖಾಬಿ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಮಡಿಕೇರಿ ನಗರದ ಹಲವು ಬಡಾವಣೆಗಳ 200 ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಕ್ಕೆ ಸೂಚಿಸಿರುವುದು ಒಂದಷ್ಟು ಆತಂಕ ತಂದೊಡ್ಡಿದೆ.