Breaking: ಮಂಗಳೂರು MRPL ನಲ್ಲಿ ಭಾರೀ ಸ್ಫೋಟ, ಆಕಾಶದೆತ್ತರ ದಟ್ಟ ಹೊಗೆ, ವಿಮಾನ ನಿಲ್ದಾಣದ ಗಾಜುಗಳು ಪುಡಿ ಪುಡಿ!

Published : Sep 30, 2026, 01:13 PM IST
MRPL

ಸಾರಾಂಶ

ಮಂಗಳೂರಿನ ಜೋಕಟ್ಟೆ ಬಳಿಯ MRPL ಘಟಕದಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ದಟ್ಟವಾದ ಕಪ್ಪು ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಹಿಂದೆಯೂ ಇಲ್ಲಿ ಹಲವು ಬಾರಿ ಅನಿಲ ಸೋರಿಕೆ ಮತ್ತು ಸ್ಫೋಟದಂತಹ ದುರಂತಗಳು ಸಂಭವಿಸಿದ್ದವು.

ಮಂಗಳೂರು: ಇಲ್ಲಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆ ಭಾಗದಲ್ಲಿ ಭಾರೀ ಸ್ಪೋಟ ಸಂಭವಿಸಿದೆ. ಆ ಪ್ರದೇಶದ ತುಂಬಾ ದಟ್ಟ ಹೊಗೆ ಆವರಿಸಿಕೊಂಡಿದ್ದು ಭಾರೀ ಆತಂಕ ಎದುರಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸಮೀಪದಲ್ಲಿರುವ ಮಂಗಳೂರು ವಿಮಾನ ನಿಲ್ದಾಣದ ಗಾಜುಗಳು ಪುಡಿಪುಡಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಂಆರ್‌ಪಿಎಲ್‌ನ ಸಿಎಸ್‌ಟಿ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳೂರು ತಾಲೂಕಿನ ಜೋಕಟ್ಟೆ ಗ್ರಾಮದ ಬಳಿ ಇರುವ MRPL ಸಂಕೀರ್ಣದಿಂದ ಈ ಭಾರೀ ಶಬ್ದದ ಬೆನ್ನಲ್ಲೇ ಆಕಾಶದೆತ್ತರಕ್ಕೆ ದಟ್ಟವಾದ ಕಪ್ಪು ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ವಸತಿ ಪ್ರದೇಶ ಮಾತ್ರವಲ್ಲದೆ ಕಿಲೋ ಮೀಟರ್ ಗಟ್ಟಲೆ ಏರಿಯಾಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಕಾರ್ಖಾನೆಯ ಒಳಗಡೆಯೇ ಭಾರೀ ಪ್ರಮಾಣದ ಸ್ಪೋಟ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪೈಪ್‌ಲೈನ್ ಒಡೆದಿದೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಯಲ್ಲಿ ಸಾವು ನೋವುಗಳಾಗಿರುವ ಮತ್ತು ಈ ಸ್ಫೋಟಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

MRPLನಲ್ಲಿ ನಡೆದ ಹಿಂದಿನ ಘಟನೆಗಳು:

ಸಂಸ್ಥೆಯಲ್ಲಿ ಸುರಕ್ಷತಾ ಕ್ರಮಗಳಿದ್ದರೂ, ಈ ಹಿಂದೆ ಕೆಲವು ಸಣ್ಣ ಹಾಗೂ ಗಂಭೀರ ಪ್ರಮಾಣದ ಅಪಘಾತ ಘಟನೆಗಳು ನಡೆದಿತ್ತು.

ಜುಲೈ 2025 ರ ವಿಷಕಾರಿ ಅನಿಲ ಸೋರಿಕೆಯಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಟ್ಯಾಂಕ್ ಪ್ಲಾಟ್‌ಫಾರ್ಮ್‌ ಮೇಲ್ಭಾಗದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅತ್ಯಂತ ಅಪಾಯಕಾರಿ ಹೈಡ್ರೋಜನ್ ಸಲ್ಫೈಡ್ (H2S) ಅನಿಲ ಸೋರಿಕೆಯಾಗಿತ್ತು. ಈ ದುರಂತದಲ್ಲಿ ತಪಾಸಣೆ ನಡೆಸುತ್ತಿದ್ದ ಇಬ್ಬರು ಸಿಬ್ಬಂದಿ ಉಸಿರುಗಟ್ಟಿ ಅಸ್ವಸ್ಥಗೊಂಡು ಪ್ರಾಣ ಕಳೆದುಕೊಂಡಿದ್ದರು.

2012 ರ ಜನವರಿಯಲ್ಲಿ ಸಲ್ಫರ್ ರಿಕವರಿ ಯುನಿಟ್ (SRU) ಸಮೀಪ ವೆಲ್ಡಿಂಗ್ ಕೆಲಸ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಿಡಿ ತಗುಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಸಣ್ಣ ಮಟ್ಟದ ಸ್ಪೋಟ ಸಂಭವಿಸಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದ.

2012 ರ ಪವರ್ ಪ್ಲಾಂಟ್ ಸ್ಪೋಟವಾಗಿತ್ತು. ಫೇಸ್-III ರ ಪವರ್ ಪ್ಲಾಂಟ್‌ನಲ್ಲಿ ಸ್ಟೀಮ್ ಪೈಪ್‌ಲೈನ್ ಅಧಿಕ ಒತ್ತಡದಿಂದಾಗಿ ಒಡೆದು ಸ್ಪೋಟಗೊಂಡಿತ್ತು. ಈ ದುರಂತದಲ್ಲಿ ಸುಮಾರು 7 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದರು.

ಏನಿದು MRPL ಸಂಸ್ಥೆ?

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಭಾರತದ ಅತ್ಯಂತ ಪ್ರಮುಖ ತೈಲ ಶುದ್ಧೀಕರಣ ಕಾರ್ಖಾನೆಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಈ ರಿಫೈನರಿಯು ವರ್ಷಕ್ಕೆ ಬರೋಬ್ಬರಿ 15 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.

ವಿವಿಧ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಪೆಟ್ರೋಕೆಮಿಕಲ್ಸ್ ಉತ್ಪಾದಿಸುವ ಜತೆಗೆ, ಸಂಸ್ಥೆಯು 'ಹೈಕ್' ಬ್ರ್ಯಾಂಡ್ ಹೆಸರಿನಲ್ಲಿ ಚಿಲ್ಲರೆ ಇಂಧನ ವಿತರಣಾ ಸೇವೆಗಳನ್ನೂ ಒದಗಿಸುತ್ತಿದೆ. ಈ ಬೃಹತ್ ಘಟಕವನ್ನು ಆರಂಭದಲ್ಲಿ, ಅಂದರೆ 1987 ರಲ್ಲಿ ಎಚ್‌ಪಿಸಿಎಲ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಜಂಟಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿತ್ತು.

ಪ್ರಸ್ತುತ ಜೋಕಟ್ಟೆ ಭಾಗದಲ್ಲಿ ಕಂಡುಬಂದಿರುವ ದಟ್ಟ ಹೊಗೆ ಮತ್ತು ಸ್ಪೋಟದ ಸದ್ದಿನ ಮೂಲ ಕಾರಣವೇನೆಂಬ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಇನ್ನು ಅಧಿಕೃತ ಸ್ಪಷ್ಟನೆ ನೀಡಬೇಕಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ತಜ್ಞರ ತಂಡ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

ಭೋಪಾಲ್‌ನಲ್ಲಿ ಕಾಣಿಸಿ ಮತ್ತೆ ಮಾಯ; ಫರ್ವೇಜ್ ಚಲನವಲನ ಹೇಗಿತ್ತು? ಹೋಗಿದ್ದೆಲ್ಲಿಗೆ?
ಹೊಸಪೇಟೆಯಲ್ಲಿ ಭೀಕರ ರೈಲು ಅಪಘಾತ ಅಣುಕು ಪ್ರದರ್ಶನ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ ಪ್ರತ್ಯಕ್ಷಿಕೆ!