
ರಾಯಚೂರು: ಭಾನುವಾರ ಬೆಳಗ್ಗೆ ಆರಂಭವಾದ ಲೋಕಾಯುಕ್ತ ದಾಳಿ ಪ್ರಕರಣ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್)ಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಡಿ. ವಿಜಯಲಕ್ಷ್ಮಿ ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ. ಹುಡುಕಿದಷ್ಟು ಒಂದೊಂದೇ ವಿಚಾರಗಳು ಬಯಲಾಗುತ್ತಿದೆ. ಗಂಟೆಗಳು ದಿನಗಳು ಉರುಳುತ್ತಿದ್ದರೂ ಶೋಧ ಕಾರ್ಯ ಮಾತ್ರ ಮುಕ್ತಾಯದ ಹಂತ ಕಾಣುತ್ತಿಲ್ಲ.
ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಲೋಕಾಯುಕ್ತ ಎಸ್‌ಪಿ ಸತೀಶ್ ಚಿಟಗುಪ್ತಿ ಅವರ ನೇತೃತ್ವದ ಅಧಿಕಾರಿಗಳ ತಂಡ ರಾಯಚೂರು ಸೇರಿ ಐದು ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ. ಬೆಳಗ್ಗೆ 6 ಗಂಟೆಗೆ ಆರಂಭವಾದ ಶೋಧ ಕಾರ್ಯವು 14 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು, ದಾಳಿ ವೇಳೆ ಒಂದೊಂದೇ ಅಕ್ರಮ ಆಸ್ತಿ ವಿವರಗಳು ಬೆಳಕಿಗೆ ಬರುತ್ತಿವೆ.
ಲೋಕಾಯುಕ್ತ ಅಧಿಕಾರಿಗಳು ರಾಯಚೂರು ನಗರದ ಐಡಿಎಂಸಿ ಲೇಔಟ್‌ನಲ್ಲಿರುವ ವಿಜಯಲಕ್ಷ್ಮಿ ಅವರ ಎರಡು ನಿವಾಸಗಳು, ಯಾದಗಿರಿಯಲ್ಲಿರುವ ಮನೆ ಹಾಗೂ ಖಾಸಗಿ ಲೇಔಟ್, ದೇವದುರ್ಗ ತಾಲ್ಲೂಕಿನ ಜೋಳದಡಗಿಯಲ್ಲಿ ಇರುವ ಫಾರ್ಮ್‌ಹೌಸ್, ಜೊತೆಗೆ ವಿಜಯಲಕ್ಷ್ಮಿ ಅವರ ತಂಗಿಯ ಮನೆಗಳ ಮೇಲೂ ಶೋಧ ನಡೆಸಿದ್ದಾರೆ. ಅಲ್ಲದೆ, ವಿಜಯಲಕ್ಷ್ಮಿ ಸಿಂಧನೂರು ಉಪವಿಭಾಗದಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ ಅಲ್ಲಿನ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆದಿದೆ.
ಶೋಧ ಕಾರ್ಯದ ವೇಳೆ ಒಟ್ಟು 49 ರಿಂದ 53 ಆಸ್ತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ರಾಯಚೂರು ನಗರದ ಎರಡು ಭವ್ಯ ಬಂಗಲೆಗಳು, ಯಾದಗಿರಿಯಲ್ಲಿ ನಿರ್ಮಿಸಿರುವ ಖಾಸಗಿ ಲೇಔಟ್, ಎರಡು ಫಾರ್ಮ್‌ಹೌಸ್‌ಗಳು, ಹಾಗೂ ವಿವಿಧ ಪ್ರದೇಶಗಳಲ್ಲಿ ಖರೀದಿಸಿದ ಸುಮಾರು 33 ಎಕರೆ ಜಮೀನಿನ ದಾಖಲೆಗಳು ಸೇರಿವೆ. ಯಾದಗಿರಿಯಲ್ಲಿ ಇತ್ತೀಚೆಗೆ ರೂಪಿಸಿದ್ದ ಲೇಔಟ್ ಒಂದರ ಮೌಲ್ಯವೇ 2 ಕೋಟಿಗೂ ಅಧಿಕವಾಗಿದೆ. ಇದೇ ವೇಳೆ ಒಂದೇ ಕಡೆ 25 ಎಕರೆ ಜಮೀನು ಖರೀದಿ ಮಾಡಿರುವ ದಾಖಲೆಗಳು ಪತ್ತೆಯಾಗಿದ್ದು, ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ.
ವಿಜಯಲಕ್ಷ್ಮಿ ಮನೆಗಳಲ್ಲಿ ನಡೆದ ಶೋಧ ವೇಳೆ ಸುಮಾರು 290 ಗ್ರಾಂ ಚಿನ್ನಾಭರಣ, ಬೆಳ್ಳಿ ಆಭರಣಗಳು, ದೇವರ ಬೆಳ್ಳಿ ಸಾಮಗ್ರಿಗಳು ಹಾಗೂ 5 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ. ಈ ಎಲ್ಲ ವಸ್ತುಗಳನ್ನು ಪರಿಶೀಲನೆಗಾಗಿ ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ಆಸ್ತಿ ಮೂಲಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಪತ್ತೆಯಾದ ಬಹುತೇಕ ಆಸ್ತಿ ಪತ್ರಗಳು ವಿಜಯಲಕ್ಷ್ಮಿ ಅವರ ಗಂಡ, ಮಗಳು ಹಾಗೂ ಮಗನ ಹೆಸರಿನಲ್ಲಿ ನೋಂದಾಯಿಸಿರುವುದು ಗಮನಕ್ಕೆ ಬಂದಿದೆ. ಇತ್ತೀಚೆಗೆ ಲೇಔಟ್ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಅಲ್ಪ ಪ್ರಮಾಣದ ಜಮೀನು ಖರೀದಿಸಿದ್ದ ಮಾಹಿತಿಯೂ ದೊರೆತಿದೆ.
ದಾಳಿ ಆರಂಭವಾದ ವೇಳೆ ಎಇಇ ವಿಜಯಲಕ್ಷ್ಮಿ ಮನೆಯಲ್ಲಿರಲಿಲ್ಲ. ಸೊಸೆಯ ಡೆಲಿವರಿ ಹಿನ್ನೆಲೆ ಅವರು ಹುಬ್ಬಳ್ಳಿಗೆ ತೆರಳಿದ್ದಾಗಿ ತಿಳಿದುಬಂದಿದೆ. ಈ ನಡುವೆ ಮನೆಯ ಬೆಡ್‌ರೂಂ ಕೀ ಲಭ್ಯವಾಗದೆ ಇದ್ದ ಕಾರಣ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿಗೆ ದೂರವಾಣಿ ಮೂಲಕ ತಕ್ಷಣ ರಾಯಚೂರಿಗೆ ಆಗಮಿಸುವಂತೆ ಸೂಚನೆ ನೀಡಲಾಗಿತ್ತು. ನಂತರ ಅವರು ಹುಬ್ಬಳ್ಳಿಯಿಂದ ರಾಯಚೂರಿನ ನಿವಾಸಕ್ಕೆ ಆಗಮಿಸಿದ್ದು, ಬೆಡ್‌ರೂಂ ತೆರೆಯಿಸಿ ದಾಖಲೆಗಳು ಹಾಗೂ ಕೋಣೆಗಳ ಪರಿಶೀಲನೆ ಪುನರಾರಂಭಿಸಲಾಗಿದೆ.
ಸದ್ಯ ರಾಯಚೂರು ಸೇರಿದಂತೆ ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಶೋಧ ಕಾರ್ಯ ಮುಂದುವರಿದಿದ್ದು, ಇನ್ನಷ್ಟು ದಾಖಲೆಗಳು ಪತ್ತೆಯಾಗುವ ಸಾಧ್ಯತೆ ಇದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಜಯಲಕ್ಷ್ಮಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.