ಶಿವಮೊಗ್ಗ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ತೆರವು; ಸಚಿವ ಈಶ್ವರಪ್ಪ

By Suvarna News  |  First Published Jul 23, 2020, 11:26 AM IST

ಅತಿ ಹೆಚ್ಚು ಸೋಂಕು ಇರುವ ಹಳೆ ಶಿವಮೊಗ್ಗದ ಕೆಲವು ವಾರ್ಡುಗಳನ್ನು ಹೊರತುಪಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್‌ಡೌನ್‌ ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ಶಿವಮೊಗ್ಗ(ಜು.23): ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಜಾರಿಗೊಳಿಸಿದ್ದ ಲಾಕ್‌ಡೌನ್‌ ಬುಧವಾರದಿಂದಲೇ ತೆರವುಗೊಳಿಸಲಾಗಿದ್ದು,ರಾತ್ರಿ ಕಫ್ರ್ಯೂ ಮಾತ್ರಜಾರಿಯಲ್ಲಿರುತ್ತದೆ ಎಂದು ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದರೆ ಅತಿ ಹೆಚ್ಚು ಸೋಂಕು ಇರುವ ಹಳೆ ಶಿವಮೊಗ್ಗದ ಕೆಲವು ವಾರ್ಡುಗಳಲ್ಲಿ ಮಾತ್ರ ಜುಲೈ 23 ರಿಂದ 29 ರವರೆಗೆ ಸಂಪೂರ್ಣ ಸೀಲ್‌ಡೌನ್‌ ಇರುತ್ತದೆ ಎಂದು ತಿಳಿಸಿದರು.

ಕಳೆದೊಂದು ವಾರದಿಂದ ಮಧ್ಯಾಹ್ನ 2ವರೆಗೆ ಮಾತ್ರ ವ್ಯಾಪಾರ ವಹಿವಾಟು ಇದ್ದು, ಬಳಿಕ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಆದರೆ ಸರ್ಕಾರದ ನಿರ್ದೇಶನ ಪ್ರಕಾರ ಇದನ್ನು ತೆಗೆಯಲಾಗಿದೆ. ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ ಎಂದರು.

Tap to resize

Latest Videos

ಯಾವುದಕ್ಕೆ ವಿನಾಯಿತಿ: ಆಸ್ಪತ್ರೆಗಳು, ಔಷಧಿ ಅಂಗಡಿಗಳು ಮತ್ತು ಹಾಲು ಮಾರಾಟ ಕೇಂದ್ರಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ತರಕಾರಿ, ದಿನಸಿ, ಮಾಂಸ ಮತ್ತು ಹಣ್ಣು ಮಾರಾಟ ಕೇಂದ್ರಗಳಿಗೆ ಬೆಳಿಗ್ಗೆ 5ರಿಂದ ಬೆ.10ರವರೆಗೆ ವಿನಾಯಿತಿ ನೀಡಲಾಗಿದ್ದು, ಇತರ ಎಲ್ಲಾ ಅಂಗಡಿ ಮುಂಗಟ್ಟುಗಳ ವ್ಯವಹಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ವ್ಯಾಪ್ತಿಯಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಪಾಲಿಕೆ ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.

ಯಾವ್ಯಾವ ಪ್ರದೇಶ ಸೀಲ್‌ಡೌನ್‌: ಹಳೆ ಶಿವಮೊಗ್ಗ ಕ್ಲಸ್ಟರ್‌ನಲ್ಲಿ ಬರುವ ವಾರ್ಡ್‌ ಸಂಖ್ಯೆ 22, 23, 29 ಮತ್ತು 30 ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಹಾಗೂ ಹಾಗೂ ವಾರ್ಡ್‌ ಸಂಖ್ಯೆ 12, 13 ಮತ್ತು 33 ರಲ್ಲಿನ ಭಾಗಶಃ ಸೀಲ್‌ಡೌನ್‌ ಜಾರಿಯಾಗಲಿದೆ. ಬೆಕ್ಕಿನ ಕಲ್ಮಠ ಬಿ.ಎಚ್‌.ರಸ್ತೆ, ಅಮೀರ್‌ ಅಹ್ಮದ್‌ ವೃತ್ತ, ಅಶೋಕ ವೃತ್ತದಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಹೊಸ ತೀರ್ಥಹಳ್ಳಿ ರಸ್ತೆ, ಬೈಪಾಸ್‌ ರಸ್ತೆಯ ತುಂಗಾ ಹೊಸ ಸೇತುವೆವರೆಗೆ ಬರುವಂತಹ ಪ್ರದೇಶದಲ್ಲಿ ಜಾರಿಯಾಗಲಿದೆ.

ನಗರದಲ್ಲಿ ಗುರುತಿಸಿರುವ 27 ಕಂಟೈನ್‌ಮೆಂಟ್‌ ಜೋನ್‌ಗಳು ಈ ವಾರ್ಡ್‌ಗಳ ವ್ಯಾಪ್ತಿಯಲ್ಲಿದ್ದು 80 ಸಕ್ರಿಯ ಕೊರೋನಾ ಪಾಸಿಟಿವ್‌ ಪ್ರಕರಣಗಳು ಇಲ್ಲಿವೆ. ಆದ್ದರಿಂದ ಈ ಪ್ರದೇಶವನ್ನು ಕ್ಲಸ್ಟರ್‌ ಕಂಟೈನ್‌ಮೆಂಟ್‌ ಜೋನ್‌ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿನ ಸಾರ್ವಜನಿಕರು ಸೀಲ್‌ಡೌನ್‌ ಅವಧಿಯಲ್ಲಿ ಹೊರಗೆ ಹೋಗುವುದು ಹಾಗೂ ಬೇರೆ ಪ್ರದೇಶದ ಜನರು ಸೀಲ್‌ಡೌನ್‌ ಪ್ರದೇಶ ಪ್ರವೇಶ ಕಡ್ಡಾಯ ನಿಷೇಧಿಸಲಾಗಿದೆ. ತರಕಾರಿ, ಹಾಲು ಇತ್ಯಾದಿ ಅಗತ್ಯಗಳಿಗಾಗಿ ಬೆಳಗ್ಗೆ 5 ರಿಂದ 10 ಗಂಟೆಯವರೆಗೆ ಹೊರಗೆ ಬರಬಹುದು. ವೈದ್ಯಕೀಯ ತುರ್ತು ಚಿಕಿತ್ಸೆ ಪ್ರಕರಣಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ನಿಷೇಧ: ಈ ಭಾಗದಲ್ಲಿ ಬರುವ ಗುಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸಂಪೂರ್ಣ ಬಂದ್‌ ಮಾಡಬೇಕು. ಬೀದಿ ಬದಿ ವ್ಯಾಪಾರ, ಸಂತೆ, ಸಭೆ, ಸಮಾರಂಭ ಸಂಪೂರ್ಣ ನಿಷೇಧಿಸಲಾಗಿದೆ. ದೇವಸ್ಥಾನ, ಚಚ್‌ರ್‍ ಮತ್ತು ಮಸೀದಿಗಳಲ್ಲಿ ದೈನಂದಿನ ಪೂಜೆ ಪುನಸ್ಕಾರ ಮಾಡಬಹುದು. ಸಾರ್ವಜನಿಕರಿಗೆ ಪ್ರವೇಶ ಹಾಗೂ ಎಲ್ಲಾ ತರಹದ ನಿರ್ಮಾಣ ಕಾಮಗಾರಿ ನಿಷೇಧಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ವಿಚಾರಣೆ ಇದ್ದಲ್ಲಿ ಪಾಲಿಕೆಯಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ ಬಿ.ಎಚ್‌. ರಸ್ತೆ, ಬೈಪಾಸ್‌ ಮುಖ್ಯರಸ್ತೆಗಳಲ್ಲಿನ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ಆರ್‌ಎ ಕಿಟ್‌ ಮೂಲಕ ಪರೀಕ್ಷೆ: ಸೀಲ್‌ಡೌನ್‌ ಪ್ರದೇಶಗಳಲ್ಲಿ ರಾರ‍ಯಪಿಡ್‌ ಆ್ಯಂಟಿಸೆನ್‌ ಕಿಟ್‌ ಮೂಲಕ ಪ್ರತಿ ಮನೆಗೂ ಆರೋಗ್ಯ ಸಿಬ್ಬಂದಿ ತಂಡ ತೆರಳಿ ಸೋಂಕು ಪರೀಕ್ಷೆ ನಡೆಸಲಿದೆ. ತಕ್ಷಣವೇ ಫಲಿತಾಂಶ ನೀಡಲಿದೆ.ಇದಕ್ಕಾಗಿ ಆರು ತಂಡ ರಚಿಸಲಾಗಿದೆ. ಸೋಂಕು ಕಂಡು ಬಂದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌, ಪೊಲೀಸ್‌ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಜಿಪಂ ಸಿಇಒ ಎಂ.ಎಲ್‌. ವೈಶಾಲಿ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್‌.ಅರುಣ್‌ ಇದ್ದರು.

click me!