ಬಿಸಿಯೂಟ ಸೇವಿಸಿ 82 ವಿದ್ಯಾರ್ಥಿಗಳು ಅಸ್ವಸ್ಥ

By Web DeskFirst Published Jul 17, 2019, 8:31 AM IST
Highlights

ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪರಿಣಾಮ ಅದನ್ನು ಸೇವಿಸಿದ 80ಕ್ಕೂ ಅಧಿಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾದ ಘಟನೆ ನಡೆದಿದೆ. 

ಬೆಳಗಾವಿ[ಜು.17] : ಹಲ್ಲಿ ಬಿದ್ದಿದ್ದ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಪರಿ​ಣಾಮ 82 ವಿದ್ಯಾ​ರ್ಥಿ​ಗಳು ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಂಭ​ವಿ​ಸಿದೆ. 

ಸುಮಾರು 12 ಮಕ್ಕಳು ಹೆಚ್ಚಿನ ಪ್ರಮಾ​ಣ​ದಲ್ಲಿ ಬಿಸಿ​ಯೂಟ ಸೇವಿ​ಸಿದ್ದು, ಇವರ ಆರೋ​ಗ್ಯದ ಮೇಲೆ ವೈದ್ಯರು ತೀವ್ರ ನಿಗಾ​ವ​ಹಿ​ಸಿ​ದ್ದಾರೆ. ಇನ್ನುಳಿದ ಮಕ್ಕಳ ಆರೋಗ್ಯವನ್ನು ಪರಿಶೀಲಿಸಿ, ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಬೆಳ​ಗಾವಿ ತಾಲೂ​ಕಿನ ಹೊಸ ವಂಟಮೂರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟ ನಡೆಯುತ್ತಿತ್ತು. 

ಯುನೈಟೆಕ್‌ ಎನ್‌ಜಿಒ ಮಧ್ಯಾಹ್ನದ ಬಿಸಿ​ಯೂಟ ಪೂರೈ​ಸಿದೆ. ಊಟ ಮಾಡುವ ವೇಳೆ ಅನ್ನದಲ್ಲಿ ಹಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಮಕ್ಕಳು ಭೀತಿಯಿಂದ ತಕ್ಷಣ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಅಷ್ಟರಲ್ಲಾಗಲೇ ಹಲವು ಮಕ್ಕಳು ಸೇವಿಸಿಯಾಗಿತ್ತು. ಪರಿಣಾಮ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿ​ಸಿ​ದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ನಗರದ ಜಿಲ್ಲಾಸ್ಪತ್ರೆಗೆ ಸಾಗಿ​ಸಿ​ದರು.

click me!