ಮದ್ಯ ಮಾರಾಟ ನಿಷೇಧ : ಯಾವಾಗಿನಿಂದ ಸಿಗೋದಿಲ್ಲ..?

By Kannadaprabha NewsFirst Published Dec 18, 2020, 10:02 AM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇದೇ ಅವಧಿಯಲ್ಲಿ ಮದ್ಯ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. 

ತುಮಕೂರು (ಡಿ.18):  ಗ್ರಾಪಂ ಚುನಾವಣೆ ನಡೆಯುವ ಗ್ರಾಪಂಗಳ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತದಾನ ಮುಗಿಯುವ ಸಮಯಕ್ಕೆ 48 ಗಂಟೆಗಳ ಮುಂಚಿತವಾಗಿ ಮದ್ಯದಂಗಡಿ ಹಾಗೂ ತಯಾರಿಕಾ ಘಟಕ ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಡಿ.22ರಂದು ಮೊದಲನೇ ಹಂತದ ಚುನಾವಣೆ ನಡೆಯಲಿದ್ದು, ಡಿ.20ರ ಸಂಜೆ 5 ಗಂಟೆಯಿಂದ 22ರ ಸಂಜೆ 5 ಗಂಟೆಯವರೆಗೆ ಹಾಗೂ ಡಿ.27ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಡಿ.25ರ ಸಂಜೆ 5 ಗಂಟೆಯಿಂದ 27ರ ಸಂಜೆ 5 ಗಂಟೆಯವರೆಗೆ ಎಲ್ಲಾ ಮದ್ಯದಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಸಂಬಂಧಪಟ್ಟವರು ಮುಚ್ಚಬೇಕು. ಅವುಗಳನ್ನು ಮೊಹರ್‌ ಮಾಡಿ ಕೀ ಅನ್ನು ಜಿಲ್ಲಾಧಿಕಾರಿ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಪ್ರೇಟ್‌ಗೆ ಒಪ್ಪಿಸಬೇಕು. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ನಿಷೇಧ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.

2 ಲಕ್ಷಕ್ಕೂ ಅಧಿಕ ಮೌಲ್ಯದ 71 ಲೀಟರ್ ಗೋವಾ ಮದ್ಯ ವಶ ...

ಪಾವಗಡ ತಾಲೂಕಿನ ವೈ.ಎನ್‌.ಹೊಸಕೋಟೆ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯದಿದ್ದರೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಗ್ರಾಪಂ ವ್ಯಾಪ್ತಿಯಲ್ಲೂ ಡಿ.20ರ ಸಂಜೆ 5 ಗಂಟೆಯಿಂದ 22ರ ಸಂಜೆ 5 ಗಂಟೆಯವರೆಗೆ ಎಲ್ಲಾ ಮದ್ಯ ಮಾರಾಟ, ಶೇಖರಣೆ(ಕೆಎಸ್‌ಬಿಸಿಎಲ್‌ ಡಿಪೋ ಹೊರತುಪಡಿಸಿ)ನಿಷೇಧಿಸಲಾಗಿದೆ.

ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡುಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಕ್ತಾಯವಾಗುವವರೆಗೆ ಅಂತಹವರನ್ನು ಕಸ್ಟಡಿಯಲ್ಲಿ ಇಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

click me!