ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.6): ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಸಮೀಪದ ಅಳಗವಾಡಿ ಗ್ರಾಮದ ಉಣ್ಣೆ ಬಸಪ್ಪನ ಗುಡಿ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದರ ಪ್ರಯಾಣಿಕರಿಗೆ ಪ್ರತ್ಯಕ್ಷವಾಗಿ ಅದರ ಚಲನವಲನಗಳನ್ನು ಕಾರು ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕಳೆದ ಕೆಲ ದಿನಗಳಿಂದ ಚಿರತೆಗಳು ಅಳಗವಾಡಿ ಗುಡ್ಡಗಳಿಗೆ ಹೊಂದಿಕೊಂಡ ಅರಣ್ಯ ಭಾಗಗಳಲ್ಲಿ ನೆಲೆಸಿರುವ ಬಗ್ಗೆ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದರು.
undefined
ಸೋಮವಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೊಬ್ಬರಿಗೆ ರಸ್ತೆ ಪಕ್ಕದಲ್ಲಿ ಚಿರತೆ ದರ್ಶನ ನೀಡಿದೆ. ಚಿರತೆಯ ವಿಡಿಯೋ ಮಾಡಿ ಕಾರು ಪ್ರಯಾಣಿಕರು ಸ್ಥಳೀಯ ರೊಂದಿಗೆ ವೀಡಿಯೋ ಹಂಚಿಕೊಂಡಿದ್ದಾರೆ. ಚಿರತೆ ವಿಡಿಯೋ ಅಳಗವಾಡಿ ಸುತ್ತಮುತ್ತಲಿನ ಓಬಳಾಪುರ, ಪಳಕೆಹಳ್ಳಿ, ಬಾವಿಹಾಳ್, ಜಮ್ಮೆನಹಳ್ಳಿ, ದೊಡ್ಡಿಗನಾಳ್ , ಹಳವುದರ, ಪುಡಕಲಹಳ್ಳಿ ಸೇರಿದಂತೆ ಇತರೆ ಹಳ್ಳಿಗಳ ಜನರ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ.
ಇದೀಗ ಚಿರತೆಗಳ ಇರುವಿಕೆ ಸ್ಥಳೀಯ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಮನವರಿಕೆ ಆಗಿದೆ. ಅಲ್ಲದೆ ನಾಲ್ಕಾರು ಚಿರತೆಗಳು ಇಲ್ಲಿನ ಅರಣ್ಯದಲ್ಲಿ ನೆಲೆಸಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದಾರೆ.
ರಾಜ್ಯದ ಹಲವೆಡೆ ವರುಣನ ಅರ್ಭಟ: ಚಿತ್ರದುರ್ಗದಲ್ಲಿ ಮಳೆಯಿಲ್ಲದೇ ಅನ್ನದಾತ ಕಂಗಾಲು..!
ಪ್ರತಿ ವರ್ಷ ಈ ದಿನಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ ತರುವಾಯ ಕಾಡು ಹಂದಿಗಳ ಕಾಟ ಶುರುವಾಗುತ್ತಿತ್ತು. ಬಿತ್ತನೆ ಮಾಡಿದ ದಿನದಿಂದ ಸರಿಸುಮಾರು ಹತ್ತು ದಿನಗಳ ವರೆಗೆ ರೈತರಿಗೆ ಬಿತ್ತನೆ ಮಾಡಿದ ಜಮೀನುಗಳನ್ನು ಹಂದಿಗಳ ದಾಳಿಗೆ ತುತ್ತಾಗದಂತೆ ರಾತ್ರಿಯೆಲ್ಲ ಕಾವಲು ಕಾಯಬೇಕಿತ್ತು. ಆದರೆ ಇಲ್ಲಿನ ಗುಡ್ಡಗಳಲ್ಲಿ ಚಿರತೆಗಳು ಇರುವದರಿಂದಲೇ ಏನು ಈ ವರ್ಷ ಹಂದಿಗಳ ಕಾಟ ಕಡಿಮೆ ಆಗಿದೆ.
ಇದರಿಂದ ನಮ್ಮಲ್ಲಿನ ಬಿತ್ತನೆ ಮಾಡಿದ ಮೆಕ್ಕೆಜೋಳ ಹೊಲಗಳಲ್ಲಿ ರಾತ್ರಿ ಕಾವಲು ಮಾಡುವದನ್ನು ಕೆಲ ರೈತರು ಕೈ ಬಿಟ್ಟಿದ್ದರು. ಹೀಗಾಗಿ ಚಿರತೆಗಳ ಇರುವಿಕೆ ಈ ಮೊದಲೇ ನಮಗೆ ಖಚಿತವಾಗಿತ್ತು ಎನ್ನುತ್ತಾರೆ ಅಳಗವಾಡಿ ಗ್ರಾಮಸ್ಥರು.
Chitradurga: ಕಾರ್ಮಿಕರ ಆರೋಗ್ಯ ಕಾಳಜಿಗೆ ಸಂಚಾರಿ ಕ್ಲಿನಿಕ್: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ಒಟ್ಟಾರೆ ಅಳಗವಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಸಂಚರಿಸುವವರು ಚಿರತೆಗಳ ದಾಳಿಗೆ ಒಳಗಾಗದೆ ಎಚ್ಚರಿಕೆಯಿಂದ ಓಡಾಡುವುದು ಉತ್ತಮ. ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಜನರು ಈ ವೇಳೆ ಜಮೀನುಗಳಲ್ಲಿ ಬಿತ್ತನೆ ಮಾಡಲು ತೆರಳುವುದು ಹೆಚ್ಚಾಗಿರುತ್ತದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಇತ್ತ ಗಮನ ಹರಿಸಿ ಜನರಿಗೆ ಯಾವುದೇ ತೊಂದರೆ ಆಗದ ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.