ಬಿಜೆಪಿಯ ತತ್ವ, ಸಿದ್ಧಾಂತವನ್ನು ಒಪ್ಪಿ ಜೆಡಿಎಸ್ ಮುಖಂಡರಾದ 2ನೇ ವಾರ್ಡಿನ ಕುರುಬ ಸಮುದಾಯದ ಮುಖಂಡ ಇಂದ್ರಕುಮಾರ್ ಹಾಗೂ ಅವರ ಅನುಯಾಯಿಗಳು ಬಿಜೆಪಿ ಸೇರ್ಪಡೆಯಾದರು.
ತುಮಕೂರು : ಬಿಜೆಪಿಯ ತತ್ವ, ಸಿದ್ಧಾಂತವನ್ನು ಒಪ್ಪಿ ಜೆಡಿಎಸ್ ಮುಖಂಡರಾದ 2ನೇ ವಾರ್ಡಿನ ಕುರುಬ ಸಮುದಾಯದ ಮುಖಂಡ ಇಂದ್ರಕುಮಾರ್ ಹಾಗೂ ಅವರ ಅನುಯಾಯಿಗಳು ಬಿಜೆಪಿ ಸೇರ್ಪಡೆಯಾದರು.
ನಗರದ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಇಂದ್ರಕುಮಾರ್, ನರಸಿಂಹಮೂರ್ತಿ, ಭಾಸ್ಕರ್, ಚಿಕ್ಕಣ ಸೇರಿದಂತೆ ಹತ್ತಕ್ಜು ಬೆಂಬಲಿಗರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಶಾಸಕ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್ ಅವರ ಸಮ್ಮುಖದಲ್ಲಿ ಬಿಜೆಪಿ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಚುನಾವಣೆ ಘೋಷÜಣೆಯಾದ ದಿನದಂದಲೂ ವಿವಿಧ ಪಕ್ಷಗಳ ಮುಖಂಡರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅದು ಇಂದು ಸಹ ಮುಂದುವರೆದಿದೆ. 2ನೇ ವಾರ್ಡಿನ ಜೆಡಿಎಸ್ ಮುಖಂಡರು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆಯಾದರು. ಅವರೆಲ್ಲರೂ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ. ಇದರಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಬಿ.ಬಿ.ಜ್ಯೋತಿಗಣೇಶ್ ನಿಚ್ಚಳವಾಗಿ ಗೆಲುವು ಸಾಧಿಸಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಮಾತನಾಡಿ, ದೇಶದ ಭದ್ರತೆಯ ದೃಷ್ಟಿಯಿಂದ ಇಂದು ಎಲ್ಲಾ ವರ್ಗದ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಮುಂದಿನ 20 ದಿನಗಳ ಕಾಲ ಬಿಜೆಪಿ ಕಾರ್ಯಕರ್ತರು ಬಹಳ ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ಪಕ್ಚವನ್ನು ಗೆಲ್ಲಲು ದುಡಿಯಬೇಕು. ಈ ಬಾರಿ ಬಿಜೆಪಿ 58 ಜನ ಹೊಸಬರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ನಿಮಗೂ ಅವಕಾಶ ದೊರೆಯುವುದು ನಿಶ್ಚಿತ. ಹಾಗಾಗಿ ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದವರೊಂದಿಗೆ ಪಕ್ಷದಲ್ಲಿ ಈಗಾಗಲೇ ಗುರುತಿಸಿಕೊಂಡವರು ಅವರೊಂದಿಗೆ ಸಮನ್ವಯ ಸಾಧಿಸಿ, ಬಿಜೆಪಿ ವಿಜಯಿ ಆಗುವಂತೆ ಮಾಡಬೇಕೆಂದರು.
ಈ ವೇಳೆ ಪಕ್ಷದ ನಗರ ಮಂಡಲ ಅಧ್ಯಕ್ಷ ಹನುಮಂತರಾಜು, ಮುಖಂಡರಾದ ರಾಜೀವ್, ಗಣೇಶ್, ವಿರೂಪಾಕ್ಷಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ
ಬೆಂಗಳೂರು(ಏ.24): ‘ರಾಜ್ಯದಲ್ಲಿ ಲಿಂಗಾಯತರೇ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಎಲ್ಲಾ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು’ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಜೆಪಿ ವಲಯದಲ್ಲಿ ಆಕ್ರೋಶದ ಕಿಡಿಯನ್ನೇ ಹಚ್ಚಿದ್ದು, ಭಾನುವಾರವೂ ಬಿಜೆಪಿ ನಾಯಕರು ಸಿದ್ದು ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬೊಮ್ಮಾಯಿ, ಸಚಿವರಾದ ಆರ್, ಅಶೋಕ್, ವಿ.ಸೋಮಣ್ಣ, ಶಾಸಕ ಬೆಲ್ಲದ, ಯತ್ನಾಳ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಿದ್ದರಾಮಯ್ಯನವರ ಹೇಳಿಕೆಗೆ ಕಿಡಿ ಕಾರಿದ್ದು, ಬಹಿರಂಗವಾಗಿ ಲಿಂಗಾಯತರ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಈ ಮೇಲಿನ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭಾನುವಾರವೂ ಬಿಜೆಪಿಯ ಹಲವು ನಾಯಕರು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಿಂಗಾಯತರ ಕುರಿತು ಕಾಂಗ್ರೆಸ್ ಅಪಪ್ರಚಾರ: ಕೇಂದ್ರ ಸಚಿವ ಭಗವಂತ ಖೂಬಾ
ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಹುಲ್ ಅವರು ಮೋದಿ ಸಮುದಾಯದ ಬಗ್ಗೆ ಮಾತನಾಡಿದ ಹಾಗೆ, ಸಿದ್ದರಾಮಯ್ಯನವರು ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಇದು ಅವರ ಘನತೆಗೆ ತಕ್ಕುದಾದುದ್ದಲ್ಲ. ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ರಾಹುಲ್ ಗಾಂಧಿಯವರ ಜೊತೆಗೆ ಪ್ರವಾಸ ಮಾಡಿ ಸಿದ್ದರಾಮಯ್ಯನವರು ತಮ್ಮ ಐಕ್ಯೂವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಲಿಂಗಾಯತರು ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ್ನು ಕ್ಷಮಿಸುವುದಿಲ್ಲ. ಅವರ ಹುಚ್ಚು ಹೇಳಿಕೆಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿದ್ದುಗೆ ಲಿಂಗಾಯತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ತಾಕತ್ತಿದ್ದರೆ ಕಾಂಗ್ರೆಸ್‌ನವರು ಲಿಂಗಾಯತ ಸಮುದಾಯದವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ, ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಸೇರಿದಂತೆ ಲಿಂಗಾಯತರನ್ನು ಸಿಎಂ ಮಾಡಿದೆ. ಲಿಂಗಾಯತರನ್ನು ಪಕ್ಷ ಕಡೆಗಣಿಸುವ ಮಾತೇ ಇಲ್ಲ ಎಂದಿದ್ದಾರೆ.