ಸಾಮಾನ್ಯ ರೈತ ಕುಟುಂಬದಿಂದ ಬಂದ ಮಾಜಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ತಮ್ಮ ನೆಲದ ಸಂಸ್ಕೃತಿ ಮರೆತಿಲ್ಲ: ನಟ ವಿಜಯ ರಾಘವೇಂದ್ರ
ಅಥಣಿ(ಅ.06): ಸಮಾಜ ಸೇವೆ ಮೂಲಕ ಎಲ್ಲರ ಗಮನ ಸೆಳೆದಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಮುಂದೆ ಈ ರಾಜ್ಯದ ಮುಖ್ಯಮಂತ್ರಿ ಆಗುವ ಸಾಮರ್ಥ್ಯ ಇದೆ ಎಂದು ನಟ ವಿಜಯ ರಾಘವೇಂದ್ರ ಹೇಳಿದರು. ತಾಲೂಕಿನ ನಾಗನೂರ (ಪಿ.ಕೆ) ಗ್ರಾಮದಲ್ಲಿ ದಸರಾ ಅಂಗವಾಗಿ ಲಕ್ಷೀದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಾಮಾನ್ಯ ರೈತ ಕುಟುಂಬದಿಂದ ಬಂದ ಮಾಜಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ತಮ್ಮ ನೆಲದ ಸಂಸ್ಕೃತಿ ಮರೆತಿಲ್ಲ. ಇದಕ್ಕೆ ಸಾಕ್ಷಿ ಅವರು ತಮ್ಮ ಹುಟ್ಟೂರಿನ ಗ್ರಾಮ ದೇವತೆಯಾದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವವನ್ನು ರಾಷ್ಟ್ರಮಟ್ಟದಲ್ಲಿ ಗಮನ ಸಳೆಯುವಂತೆ ಆಚರಿಸುತ್ತಿರುವುದು ಎಂದರು.
ನಾನು ನಗರ ಪ್ರದೇಶದಲ್ಲಿ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಚಿಕ್ಕ ಗ್ರಾಮದಲ್ಲಿ ಇಷ್ಟೊಂದು ಜನ ಸಮೂಹ ಸೇರುತ್ತಿರುವುದು ನೋಡಿ ಸಂತಸವಾಗಿದೆ. ಇಲ್ಲಿ ಜನರ ಭಕ್ತಿ ನೋಡಿ ನನಗೆ ಮೈಸೂರು ದಸರಾದಲ್ಲಿ ಭಾಗವಹಿಸಿದಷ್ಟು ಆನಂದವಾಗಿದೆ ಎಂದು ಹೇಳಿದರು.
'ಬಿಜೆಪಿಯವರೇ ಆರೆಸ್ಸೆಸ್ ಹಿಡಿತದಲ್ಲಿದ್ದಾರೆ : ರಮೇಶ್ಗೆ ಚಾಕಲೇಟ್ ತಿನ್ನಿಸುವ ಕೆಲಸ'
ಮಾಜಿ ಡಿಸಿಎಂ ಲಕ್ಷ್ಮಣ ಸಂಗಪ್ಪ ಸವದಿ ಮಾತನಾಡಿ, ಉತ್ತರ ಕರ್ನಾಟಕ ಜನರು ಕಲೆ, ಸಂಸ್ಕೃತಿ ಪ್ರೋತ್ಸಾಹಿಸುತ್ತಾ ಗೌರವಿಸುವ ಗುಣ ಹೊಂದಿದ್ದಾರೆ. ಇದೇ ಸಮಯದಲ್ಲಿ ಡಾ.ಪುನೀತ ರಾಜಕುಮಾರ ಅವರನ್ನು ನೆನೆಸಿಕೊಂಡು ಅವರ ದಾನದ ಗುಣಗಳನ್ನು ಸ್ಮರಿಸಿಕೊಂಡರು.
ಈ ವೇಳೆ ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ, ಕರ್ನಾಟಕ ಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಯುವ ಧುರೀಣ ಚಿದಾನಂದ ಸವದಿ ಮಾತನಾಡಿದರು. ಈ ಸಮಯದಲ್ಲಿ ಪ್ರದೀಪ ನಂದಗಾಂವ, ಮಹಾಂತೇಶ ಟಕ್ಕನ್ನವರ, ಪ್ರಶಾಂತ ಅಕ್ಕೋಳ, ಮಲ್ಲೇಶ ಸವದಿ, ರಮೇಶ ಸವದಿ, ಗಂಗಯ್ಯಾ ಮಠಪತಿ, ಬಸಪ್ಪ ಚೌಗಲಾ, ಗಂಗಪ್ಪ ಬಿಳ್ಳೂರ, ಪಾಪಯ್ಯ ಹಿರೇಮಠ, ಶಂಕರ ಚೌಗಲಾ, ಈಶ್ವರ ಸವದಿ, ಮಲ್ಲೇಶ ದುಂಡಪ್ಪ ಸವದಿ ಉಪಸ್ಥಿತರಿದ್ದರು.