ಕೇರಳದಿಂದ ಕೊಡಗಿಗೆ ಬರುವ ಪ್ರವಾಸಿ ಬಸ್ಸುಗಳಿಂದ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ

Published : Nov 18, 2025, 09:29 PM IST
Kodagu district

ಸಾರಾಂಶ

ಕೇರಳದಿಂದ ಕೊಡಗಿಗೆ ಬರುವ ಖಾಸಗಿ ಬಸ್ಸುಗಳು ಕರ್ನಾಟಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿವೆ. ಇದರ ಜೊತೆಗೆ, ಪ್ರವಾಸಿಗರು ಬಸ್ಸುಗಳಲ್ಲಿ ಡಿಜೆ ಹಾಕಿ, ಹೆದ್ದಾರಿಗಳಲ್ಲಿ ಪಾರ್ಟಿ ಮಾಡಿ ಸ್ಥಳೀಯರಿಗೆ ತೊಂದರೆ ನೀಡುತ್ತಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ.

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು: ಪಕ್ಕದ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಬರುವ ಖಾಸಗಿ ಬಸ್ಸುಗಳಿಂದ ತೆರಿಗೆ ಕರ್ನಾಟಕ ಸರ್ಕಾರಕ್ಕೆ ತೆರಿಗೆ ವಂಚನೆ ಎಗ್ಗಿಲ್ಲದೆ ನಡೆಯುತ್ತಿದೆ. ಹೌದು ಕೊಡಗು ಜಿಲ್ಲೆಗೆ ಕೇರಳ ಸ್ಟೇಟ್ ಪರ್ಮಿಟ್ನ ನೂರಾರು ಬಸ್ಸುಗಳು ನಿತ್ಯ ಬರುತ್ತವೆ. ನಿತ್ಯ ನೂರಾರು ಬಸ್ಸುಗಳು ಬರುತ್ತಿದ್ದರೂ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಆಲ್ ಇಂಡಿಯಾ ಪರ್ಮಿಟ್ ಬಸ್ಸುಗಳ ಸಂಖ್ಯೆ ಬೆರಳೆಣಿಕೆಯಷ್ಟಿವೆ. ಆಲ್ ಇಂಡಿಯಾ ಪರ್ಮಿಟ್ ಇದ್ದರು ಅವರು ಆನ್ಲೈನ್ ತೆರಿಗೆ ಪಾವತಿ ಮಾಡಿರುವುದಿಲ್ಲ. ಹೀಗಾಗಿ ಕೇರಳದ ಖಾಸಗಿ ಬಸ್ಸುಗಳಿಂದ ಕರ್ನಾಟಕ ಸರ್ಕಾರಕ್ಕೆ ತೆರಿಗೆಯಲ್ಲಿ ಧೋಖಾ ಮಾಡಲಾಗುತ್ತಿದೆ.

ನೂರಾರು ಖಾಸಗಿ ಬಸ್ಸು

ಆದರು ಕೂಡ ಆರ್ಟಿಓ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕೇರಳ ರಾಜ್ಯದೊಂದಿಗೆ ಕೊಡಗು ಜಿಲ್ಲೆ ಗಡಿ ಹಂಚಿಕೊಂಡಿದ್ದು ಕುಟ್ಟ, ಮಾಕುಟ್ಟ ಹಾಗೂ ಕರಿಕೆಗಳಲ್ಲಿ ಅಂತಾರಾಜ್ಯ ಗಡಿ ಚೆಕ್ ಪೋಸ್ಟ್ಗಳಲ್ಲಿವೆ. ಅಲ್ಲಿ ಯಾವುದೇ ಬಸ್ಸುಗಳ ತಪಾಸಣೆ ನಡೆಯುತ್ತಿಲ್ಲ. ಇದು ಆರ್ಟಿಓ ಅಧಿಕಾರಿಗಳ ಮೇಲೆ ಅನುಮಾನ ಮೂಡುವಂತೆ ಮಾಡಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇರಳದಿಂದ ನಿತ್ಯ ನೂರಾರು ಖಾಸಗಿ ಬಸ್ಸುಗಳು ಬರುತ್ತವೆ. ಅಂದರೆ ತಿಂಗಳಿಗೆ ಕನಿಷ್ಠ ಒಂದರಿಂದ ಒಂದುವರೆ ಕೋಟಿವರೆಗೆ ತೆರಿಗೆ ವಂಚನೆಯಾಗುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ಆರ್ಟಿಓ ಅಧಿಕಾರಿಗಳು ಕೆಲವು ಬಸ್ಸುಗಳಿಗೆ ಹಾಕಿರುವ ದಂಡವೇ 50 ಲಕ್ಷದವರೆಗೆ ಆಗಿದೆ. ಅಂದರೆ ತಿಂಗಳಿಗೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆಗುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಾಗಿ ಗಡಿಚೆಕ್ ಪೋಸ್ಟ್ಗಳಲ್ಲಿಯೇ ತೆರಿಗೆ ಪಾವತಿ ಬಗ್ಗೆ ಪರಿಶೀಲಿಸುವಂತೆ ಆರ್ಟಿಓ ಅಧಿಕಾರಿಗಳಿಗೆ ಕೊಡಗು ಅಭಿವೃದ್ಧಿ ಸಮಿತಿ ದೂರು ನೀಡಿದೆ.

ಡಿಜೆ ಸೌಂಡ್ಸ್ ಎಂಜಾಯ್ಮೆಂಟ್

ಒಂದೆಡೆ ತೆರಿಗೆ ವಂಚನೆಯಾದರೆ ಮತ್ತೊಂದೆಡೆ ಕೇರಳ ಪ್ರವಾಸಿಗರಿಂದ ದುರ್ವರ್ತನೆ, ಹುಚ್ಚಾಟ ನಡೆಯುತ್ತಿದೆ. ನಿಯಮ ಮೀರಿ ಡಿಜೆಗಳನ್ನು ಹಾಕಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಕೇರಳದಲ್ಲಿ ಬಸ್ಸುಗಳಲ್ಲಿ ಡಿಜೆ ಅಥವಾ ಹೆಚ್ಚಿನ ಶಬ್ಧದ ಸೌಂಡ್ ಸಿಸ್ಟಮ್ ಗೆ ಹಾಗೂ ಬಣ್ಣದ ಬಣ್ಣದ ಲೈಟಿಂಗ್ಸ್ ಬಳಕೆಗೆ ನಿಷೇಧವಿದೆ. ಆದರೆ ಕೇರಳದ ಬಸ್ಸುಗಳು ಕರ್ನಾಟಕಕ್ಕೆ ಎಂಟ್ರಿಯಾಗುತ್ತಿದ್ದಂತೆ ಅವುಗಳಿಗೆ ಸೌಂಡ್ಸ್ ಸಿಸ್ಟಮ್ ಫಿಕ್ಸ್ ಆಗುತ್ತಿದೆ. ಡಿಜೆ ಸೌಂಡ್ಸ್ ಸಿಸ್ಟಮ್ ಫಿಕ್ಸ್ ಮಾಡಿ ಎಂಜಾಯ್ಮೆಂಟ್ ಮಾಡುತ್ತಿದ್ದಾರೆ. ರಾತ್ರಿ ಕೊಡಗಿನ ಹೆದ್ದಾರಿಗಳಲ್ಲೇ ಬಸ್ಸುಗಳ ನಿಲ್ಲಿಸಿ ಪಾರ್ಟಿ ಮಾಡಿ ಹುಚ್ಚಾಟ ನಡೆಸುತ್ತಿದ್ದಾರೆ. ರಸ್ತೆಗಳಲ್ಲಿ ಸ್ಥಳೀಯ ವಾಹನಗಳು ಓಡಾಡಲು ಸಾಧ್ಯವಾಗದಂತೆ ದುರ್ವರ್ತನೆ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಕೇರಳ ಪ್ರವಾಸಿಗರ ವಿರುದ್ಧ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಆರ್ಟಿಓ, ಪೊಲೀಸರಿಗೆ ದೂರು ನೀಡಿದ್ದಾರೆ. ಸಂಚಾರಿ ಪೊಲೀಸರಾದರೂ ಕೂಡ ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ಕಿಡಿಯಾಗಿದ್ದಾರೆ. ಇನ್ನಾದರೂ ಆರ್.ಟಿ.ಓ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಅಭಿವೃದ್ಧಿ ಸಮಿತಿ ಆಗ್ರಹಿಸಿದೆ.

PREV
Read more Articles on
click me!

Recommended Stories

ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!