ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಘಾಟಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಭೂ ಕುಸಿತಗಳಾಗಿವೆ. ಘಾಟಿಯ ಎರಡು ಹಾಗೂ ಮೂರನೇ ತಿರುವಿನ ನಡುವೆ ದೊಡ್ಡ ಪ್ರಮಾಣದ ಭೂಕುಸಿತವಾಗಿದ್ದು, ರಸ್ತೆಯ ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ತಡೆಗೋಡೆಯ ಮೇಲೆ ನೀರು ಹರಿಯುತ್ತಿದ್ದು ಇಡೀ ರಸ್ತೆ ಹಾಗೂ ತಡೆಗೋಡೆ ಕುಸಿಯುವ ಅಪಾಯವಿದೆ.
ಮಂಗಳೂರು(ಆ.07): ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಘಾಟಿಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆ ಭೂ ಕುಸಿತಗಳಾಗಿವೆ.
ಅದರಲ್ಲಿಯೂ ಸುಮಾರು ಮೂರು ಕಡೆ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, ಅಲ್ಲಲ್ಲಿ ಮರಗಳು ಧರೆಗೆ ಉರುಳುವ ಭೀತಿಯಲ್ಲಿದೆ. ಆಗಾಗ ಘಾಟಿಯಲ್ಲಿ ಭೂ ಕುಸಿತಗಳಾಗುತ್ತಿದ್ದು ಮಳೆ ಮುಂದುವರಿದರೆ ಘಾಟಿ ರಸ್ತೆಗೆ ಅಪಾಯ ಎದುರಾಗಲಿದೆ.
ಬಿದ್ದ ಮರವನ್ನು ತೆರವು:
ಘಾಟಿಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ಅಲ್ಲಲ್ಲಿ ಭೂಕುಸಿತ ಹಾಗೂ ಮರಗಳು ಕುಸಿದು ಬಿದ್ದಿದ್ದು ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಗಿದೆ. ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬೆಳಗ್ಗೆ ಆರು ಗಂಟೆಯ ಸುಮಾರಿಗೆ ಬಿದ್ದುದ್ದು ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿದು ಚಾರ್ಮಾಡಿ ಹಸನಬ್ಬ ಅವರ ನೇತೃತ್ವದಲ್ಲಿ ಸ್ಥಳೀಯರು ಸ್ಥಳಕ್ಕೆ ತೆರಳಿ ಬಿದ್ದ ಮರವನ್ನು ತೆರವುಗೊಳಿಸಿದರು. ಸುಮಾರು ಒಂದುವರೆ ಗಂಟೆಗಳ ಕಾಲ ನಿರಂತರ ಪ್ರಯತ್ನದ ಬಳಿಕ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಮತ್ತಷ್ಟು ಕುಸಿತದ ಅಪಾಯ:
ಘಾಟಿಯ ಎರಡು ಹಾಗೂ ಮೂರನೇ ತಿರುವಿನ ನಡುವೆ ದೊಡ್ಡ ಪ್ರಮಾಣದ ಭೂಕುಸಿತವಾಗಿದ್ದು, ರಸ್ತೆಯ ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ತಡೆಗೋಡೆಯ ಮೇಲೆ ನೀರು ಹರಿಯುತ್ತಿದ್ದು ಇಡೀ ರಸ್ತೆ ಹಾಗೂ ತಡೆಗೋಡೆ ಕುಸಿಯುವ ಅಪಾಯವಿದೆ. ಇಲ್ಲಿ ಜೆಸಿಬಿಯ ಸಹಕಾರದಿಂದ ಕುಸಿದ ಮಣ್ಣನ್ನು ತೆಗೆಯುವ ಕಾರ್ಯವನ್ನು ಮಾಡಲಾಗುತ್ತಿದೆ. ಇದರ ನಡುವೆಯೇ ಮತ್ತಷ್ಟುಕುಸಿತಗಳಾಗುತ್ತಿದ್ದು ಅಪಾಯಕಾರಿ ಸ್ಥಿತಿಯಿದೆ.
ಶಿಕಾರಿಪುರ ತಾಲೂಕಿನಾದ್ಯಂತ ಧಾರಾಕಾರ ಮಳೆ
ಅಲ್ಲಲ್ಲಿ ಭೂಕುಸಿತ:
ರಸ್ತೆಯಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮರಗಳು ಹಾಗೂ ಗುಡ್ಡ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಒಂಬತ್ತು ಹಾಗೂ ಹತ್ತನೇ ತಿರುವಿನ ನಡುವೆಯೂ ದೊಡ್ಡ ಪ್ರಮಾಣದ ಭೂಕುಸಿತವಾಗಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅಪಾಯಕಾರಿಯಾಗಿರುವ ರೀತಿಯಲ್ಲಿ ಅಲ್ಲಲ್ಲಿ ಭೂಕುಸಿತಗಳು ಕಾಣಿಸಿಕೊಂಡಿದ್ದು, ಮರಗಳು ಹೆಚ್ಚು ಅಪಾಯಕಾರಿಯಾಗಿ ನಿಂತಿದೆ.
ಮಹಾಮಳೆ: ಅರ್ಧ ಕರ್ನಾಟಕಕ್ಕೆ ಜಲಸಂಕಷ್ಟ!
ಘಾಟಿಯಲ್ಲಿ ಎರಡು ಜೆಸಿಬಿಗಳು ಕೆಲಸ ಮಾಡುತ್ತಿದ್ದು ರಸ್ತೆ ಸಂಚಾರಕ್ಕೆ ತಡೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ತಂಡದವರ ಸ್ಥಳದಲ್ಲಿದ್ದು ಕಾಮಗಾರಿಯ ನೇತೃತ್ವ ವಹಿಸುತ್ತಿದ್ದಾರೆ.