
ಆನೇಕಲ್: ಜಮೀನಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉದ್ಭವಿಸಿದ ವಿವಾದ ಗಂಭೀರ ತಿರುವು ಪಡೆದು ಹೊಲದಲ್ಲೇ ಪರಸ್ಪರ ಮಾರಾಮಾರಿಗೆ ಕಾರಣವಾದ ಘಟನೆ ಆನೇಕಲ್ ತಾಲ್ಲೂಕಿನ ಮಹಂತ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಸರ್ವೇ ನಂಬರ್ 48ಕ್ಕೆ ಸೇರಿದ ಜಮೀನಿನ ಮಾಲೀಕತ್ವದ ವಿಚಾರವಾಗಿ ಮುತ್ತರಾಯಪ್ಪ ಹಾಗೂ ಮುನಿರಾಜು ಕುಟುಂಬಗಳ ನಡುವೆ ಕೆಲಕಾಲದಿಂದಲೂ ತಕರಾರು ನಡೆಯುತ್ತಿತ್ತು. ಮುತ್ತರಾಯಪ್ಪ ಕುಟುಂಬದವರು ಈ ಜಮೀನು ತಮ್ಮ ಪೂರ್ವಜರಿಂದ ಬಂದ ಆಸ್ತಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದು, ಮುನಿರಾಜು ಎಂಬುವವರು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಜಮೀನಿನ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಎರಡೂ ಕುಟುಂಬಗಳ ಸದಸ್ಯರು ಜಮೀನಿನ ಬಳಿ ಸೇರಿಕೊಂಡಿದ್ದು, ಮಾತಿನ ಚಕಮಕಿಯಿಂದ ಆರಂಭವಾದ ವಿವಾದ ಕ್ಷಣಾರ್ಧದಲ್ಲೇ ತೀವ್ರಗೊಂಡು ಪರಸ್ಪರ ಬಡಿದಾಟಕ್ಕೆ ತಿರುಗಿದೆ. ಎರಡು ಗುಂಪಿನವರು ಹೊಲದಲ್ಲೇ ಪರಸ್ಪರ ಕೈಕೈ ಮಿಲಾಯಿಸಿ ಜಗಳ ಮಾಡಿಕೊಂಡಿದ್ದಾರೆ .
ಇದೇ ವೇಳೆ, ಜಮೀನಿನಲ್ಲಿದ್ದ ತಮ್ಮ ಹಿರಿಯರ ಸಮಾಧಿಯನ್ನು ಧ್ವಂಸ ಮಾಡಿ ಅಕ್ರಮವಾಗಿ ಜಮೀನಿಗೆ ಒಳನುಗ್ಗಿದ್ದಾರೆ ಎಂದು ಮುತ್ತರಾಯಪ್ಪ ಕುಟುಂಬದವರು ಮುನಿರಾಜು ಕುಟುಂಬದವರ ವಿರುದ್ಧ ಆರೋಪ ಮಾಡಿದ್ದಾರೆ. ಈ ಘಟನೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಯ್ತು.
ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಕ್ರಮ ಕೈಗೊಂಡಿದ್ದು, ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಒಟ್ಟಾರೆ, ಜಮೀನಿನ ವಿವಾದದಿಂದ ಆರಂಭವಾದ ಈ ಘಟನೆ ಎರಡು ಕುಟುಂಬಗಳ ನಡುವೆ ತೀವ್ರ ಘರ್ಷಣೆಗೆ ಕಾರಣವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.