
ಗದಗ (ಜ.16): ದೇವಸ್ಥಾನಗಳ ನಾಡು, ಕಲ್ಯಾಣಿ ಚಾಲುಕ್ಯರ ಪಟ್ಟಣ ಲಕ್ಕುಂಡಿ ಗ್ರಾಮದ ಭೂಮಿಯ ಒಡಲಿನಲ್ಲಿ ಅಡಗಿರುವ ಇತಿಹಾಸದ ಕುರುಹುಗಳನ್ನು ಪತ್ತೆಹಚ್ಚಲು ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ. ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಮಹತ್ವದ ಉತ್ಖನನ ಕಾರ್ಯಕ್ಕೆ ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಗಾರೆಗೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಕಳೆದ ವಾರವಷ್ಟೇ ಲಕ್ಕುಂಡಿಯ ರಿತ್ತಿ ಕುಟುಂಬದವರು ಮನೆ ಪಾಯ ಅಗೆಯುವಾಗ ಸುಮಾರು 470 ಗ್ರಾಂ ಚಿನ್ನಾಭರಣ ಹಾಗೂ ಪ್ರಾಚೀನ ನಾಣ್ಯಗಳಿರುವ ತಾಮ್ರದ ಬಿಂದಿಗೆ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಈಗ ಸರ್ಕಾರದಿಂದ ಅಧಿಕೃತ ಉತ್ಖನನ ಆರಂಭವಾಗಿರುವುದು ಸ್ಥಳೀಯರಲ್ಲಿ ಮತ್ತು ಇತಿಹಾಸಕಾರರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಗ್ರಾಮದ ಸ್ಥಳಾಂತರದ ಬಗ್ಗೆ ಸದ್ಯಕ್ಕೆ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದರು. 'ಇತ್ತೀಚೆಗೆ ನಿಧಿ ಸಿಕ್ಕ ಬೆನ್ನಲ್ಲೇ ಈ ಉತ್ಖನನ ನಡೆಯುತ್ತಿರುವುದು ಕೇವಲ ಕಾಕತಾಳೀಯ. ಸರ್ಕಾರವು ಈ ಮೊದಲೇ ಯೋಜಿಸಿದಂತೆ ಈಗ ಕಾರ್ಯಾರಂಭ ಮಾಡಿದೆ. ಲಕ್ಕುಂಡಿಯನ್ನು 'ದೇವಸ್ಥಾನಗಳ ಸ್ವರ್ಗ' ಎಂದು ಕರೆಯಲಾಗುತ್ತದೆ. ಇಲ್ಲಿನ ಭೂಮಿಯ ಒಡಲಿನಲ್ಲಿ ಏನಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಉತ್ಖನನದಲ್ಲಿ ಮಹತ್ವದ ಐತಿಹಾಸಿಕ ಕಟ್ಟಡಗಳು ಕಂಡುಬಂದಲ್ಲಿ ಮಾತ್ರ ಸ್ಥಳಾಂತರದ ಬಗ್ಗೆ ಯೋಚಿಸಲಾಗುವುದು. ಗ್ರಾಮಸ್ಥರ ಸಹಕಾರದೊಂದಿಗೆ ಪಾರದರ್ಶಕವಾಗಿ ಈ ಶೋಧ ನಡೆಯಲಿದೆ ಎಂದು ತಿಳಿಸಿದರು.
ಚಾಲುಕ್ಯರ ಕಾಲದಲ್ಲಿ ಲಕ್ಕುಂಡಿಯು ಪ್ರಮುಖ ನಾಣ್ಯ ತಯಾರಿಕಾ ಕೇಂದ್ರವಾಗಿತ್ತು (ಟಂಕಸಾಲೆ). ಇಲ್ಲಿನ ಭೂಮಿಯಡಿ ಅಡಗಿರುವ ಸುರಂಗ ಮಾರ್ಗಗಳು, ದೇಗುಲದ ಪಳೆಯುಳಿಕೆಗಳು ಹಾಗೂ ನಾಣ್ಯಗಳ ಶೇಖರಣೆಯ ಬಗ್ಗೆ ಅಧಿಕಾರಿಗಳು ಅಧ್ಯಯನ ನಡೆಸಲಿದ್ದಾರೆ. ಈ ಐತಿಹಾಸಿಕ ಕಾರ್ಯಾಚರಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ತಜ್ಞ ಕೆಲಸಗಾರರು ಭಾಗಿಯಾಗಿದ್ದು, ಲಕ್ಕುಂಡಿ ಮತ್ತೆ ಜಾಗತಿಕ ಭೂಪಟದಲ್ಲಿ ಮಿಂಚುವ ನಿರೀಕ್ಷೆಯಿದೆ.
ಲಕ್ಕುಂಡಿಯಲ್ಲಿ 101 ದೇಗುಲ ಹಾಗೂ 101 ಭಾವಿಗಳು ಇರುವ ಐತಿಹ್ವಿದೆ. ಇದು ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರು ಆಳಿದ, ದಕ್ಷಿಣ ಭಾರತದ ಶಿಲ್ಪಕಲೆಯ ಮುಕುಟ ಮಣಿ, ಶಿಲ್ಪಕಲೆ ತೊಟ್ಟಿಲು ಎಂದು ವಿಶ್ವ ವಿಖ್ಯಾತ ಪಡೆದಿರುವ ಲಕ್ಕುಂಡಿ ಗ್ರಾಮದಲ್ಲಿ ಚಿನ್ನಾಭರಣಗಳ ನಿಧಿ ದೊರೆತ ಬೆನ್ನಲ್ಲಿಯೇ 20 ವರ್ಷದ ನಂತರ ಮತ್ತೆ ಇಂದಿನಿಂದ (ಜ.16) ಉತ್ಖನನ ಆರಂಭವಾಗಿದೆ. ಲಕ್ಕುಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೊರೆತ 1121ರ ಶಿಲಾಶಾಸನದಲ್ಲಿ ವೈಭವದಲ್ಲಿ ಧರ್ಮದ ಆಗರವೆಂದು ಲೊಕ್ಕಿಗುಂಡಿ ಗ್ರಾಮವು ಇಂದ್ರನ ರಾಜಧಾನಿಯಾದ ಅಮರಾವತಿಗೂ, ಭೋಗಾವತಿಗೂ ಶ್ರೇಷ್ಠವಾದದ್ದು ಎಂದು ಇತಿಹಾಸದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಲೊಕ್ಕಿ ಗದ್ಯಾಣಗಳು ಸಿದ್ಧವಾಗುತ್ತಿದ್ದ ಟಂಕಶಾಲೆ ಈ ದೇವಸ್ಥಾನದ ಸಮೀಪದ ಅಚ್ಚಪ್ಪನ ಬಯಲಿನಲ್ಲಿದೆ.