*ಕನ್ನಂಗಿ ಗ್ರಾಪಂ ವ್ಯಾಪ್ತಿಯಲ್ಲಿ ಮತ್ತಿಬ್ಬರಿಗೆ ಕೆಎಫ್‌ಡಿ ಸೋಂಕು
*ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 18 ಕ್ಕೆ ಏರಿಕೆ
*ಕಾಡಿನಲ್ಲಿ ದರಗು ತರಲು ಹೋಗಿದ್ದು ತಗುಲಿದ ಸೋಂಕು
ಶಿವಮೊಗ್ಗ (ಮಾ. 26): ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬರು ಮಹಿಳೆಯರಿಗೆ ಮಂಗನ ಕಾಯಿಲೆ (ಕೆಎಫ್‌ಡಿ) ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರೂ ಕಾಡಿನಲ್ಲಿ ದರಗು ತರಲು ಹೋಗಿದ್ದು ಅಲ್ಲಿಯೇ ಸೋಂಕು ತಗುಲಿದೆ. ಕುಡುವಳ್ಳಿ ಗ್ರಾಮದ ಸುಶೀಲಮ್ಮ (69) ಹಾಗೂ ಹಿರೇಬೈಲು ಗ್ರಾಮದ ಉಷಾ (47) ಸೋಂಕಿತರು. ಈ ಇಬ್ಬರೂ ಸ್ಥಳೀಯರೇ ಆಗಿದ್ದಾರೆ. ಒಬ್ಬರನ್ನು ಇಲ್ಲಿನ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರಿಂದ ತಾಲೂಕಿನಲ್ಲಿ ಈ ವರ್ಷದ ಸೋಂಕಿತರ ಸಂಖ್ಯೆ 18ಕ್ಕೆ ಏರಿದೆ. ಚಳಿಗಾಲ ಮುಗಿದು ಬೇಸಿಗೆ ಸಮೀಪಿಸುತ್ತಿದ್ದಂತೆ ಮಲೆನಾಡು, ಕರಾವಳಿ ಭಾಗದಲ್ಲಿ ಮಂಗನ ಕಾಯಿಲೆ ಕಾಡುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿಂದ ಮೇ ತಿಂಗಳವರೆಗೆ ಮಲೆನಾಡನ್ನು ಇನ್ನಿಲ್ಲದಂತೆ ಕಾಡುವ, ಕೆಲ ವರ್ಷ ಮರಣ ಮೃದಂಗವನ್ನೇ ಬಾರಿಸುವ ‘ಕ್ಯಾಸನೂರು ಫಾರೆಸ್ಟ್ ಡಿಸೀಸ್’ ಅಥವಾ ಸಂಕ್ಷಿಪ್ತವಾಗಿ ‘ಕೆಎಫ್‌ಡಿ’ ಎಂದೇ ಕರೆಯಲ್ಪಡುವ ಈ ಕಾಯಿಲೆಗೆ ಇದುವರೆಗೆ ಮದ್ದು ಕಂಡುಹಿಡಿಯಲಾಗಿಲ್ಲ. ಆದರೆ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವ್ಯಾಕ್ಸಿನೇಶನ್ ನೀಡಲಾಗುತ್ತದೆ.
ಇದನ್ನೂ ಓದಿ: ಮತ್ತೆ ಶುರುವಾಯ್ತು ಮಂಗನ ಕಾಯಿಲೆ ಆತಂಕ..!
ಅರಳಗೋಡಲ್ಲಿ ಮತ್ತೆ ಕೆಎಫ್‌ಡಿ ವೈರಾಣು ಪತ್ತೆ: ಎರಡು ವರ್ಷಗಳ ಹಿಂದೆ ಮಂಗನ ಕಾಯಿಲೆಯಿಂದ 20 ಮಂದಿ ಮೃತಪಟ್ಟಿದ್ದ ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಈ ವರ್ಷ ಮುಂಜಾಗ್ರತಾ ಕ್ರಮವಾಗಿ ಸಂಗ್ರಹಿಸಿದ್ದ ಉಣ್ಣೆಯಲ್ಲಿ ಕೆಎಫ್‌ಡಿ ವೈರಾಣು ಕಂಡುಬಂದಿದೆ.
ಜನವರಿಯಲ್ಲಿ ಅರಳಗೋಡು ಗ್ರಾಪಂ ವ್ಯಾಪ್ತಿಯ ಸುಮಾರು 5 ಕಿ. ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಉಣ್ಣೆಗಳ ಮಾದರಿಯನ್ನು ಸಂಗ್ರಹಿಸಿ ಶಿವಮೊಗ್ಗ ಪ್ರಯೋಗ ಶಾಲೆಗೆ ಕಳುಹಿಸಲಾಗಿತ್ತು. ಇದರಲ್ಲಿ ಫಲಿತಾಂಶದಲ್ಲಿ ಕೆಎಫ್‌ಡಿ ವೈರಾಣು ಕಂಡುಬಂದಿದೆ. ಇದರಿಂದಾಗಿ ಮತ್ತೆ ಮಂಗನ ಕಾಯಿಲೆಯ ಆತಂಕ ಮನೆ ಮಾಡಿದೆ.
2019ರಲ್ಲಿ ಅರಳಗೋಡು ಗ್ರಾಪಂ ವ್ತಾಪ್ತಿಯಲ್ಲಿ ಕೆಎಫ್‌ಡಿ ಸೋಂಕು ಸ್ಫೋಟಗೊಂಡಿದ್ದು, ನೂರಾರು ಜನರು ಇದರಿಂದ ಬಳಲಿದ್ದರು. ಸುಮಾರು 20 ಜನರಿಗೂ ಅಧಿಕ ಮಂದಿ ಮೃತಪಟ್ಟಿದ್ದರು. ಕೊನೆಗೆ ಯಾವ ಮಟ್ಟದ ಭೀತಿ ಏರ್ಪಟ್ಟಿತ್ತು ಎಂದರೆ ಸ್ವತಃ ಜಿಲ್ಲಾಧಿಕಾರಿಗಳು ಇಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರಲ್ಲಿನ ಆತಂಕ ದೂರ ಮಾಡುವ ಯತ್ನ ನಡೆಸಿದ್ದರು. ಹೊರಗಿನಿಂದ ಯಾರೊಬ್ಬರೂ ಗ್ರಾಮಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಉತ್ತರ ಕನ್ನಡಕ್ಕೆ ಮತ್ತೆ ವಕ್ಕರಿಸಿ ಮಂಗನ ಕಾಯಿಲೆ.. ಪರಿಹಾರ ಯಾವ ಕಾಲಕ್ಕೋ!
ನಿತ್ಯ ಒಬ್ಬಿಬ್ಬರು ಆಸ್ಪತ್ರೆಗೆ ದಾಖಲಾಗತೊಡಗಿದ್ದರು. ಜಿಲ್ಲಾಡಳಿತ ಉಚಿತವಾಗಿ ಅರಳಗೋಡು ಗ್ರಾಮದಿಂದ ಮಣಿಪಾಲ ಆಸ್ಪತ್ರೆಗೆ ನಿತ್ಯ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿತ್ತಲ್ಲದೆ, ಮಣಿಪಾಲದಲ್ಲಿನ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿತ್ತು. ಸದನದಲ್ಲೂ ಈ ಕುರಿತು ಚರ್ಚೆ ನಡೆದಿತ್ತು. ಆ ಬಳಿಕ ಇಲ್ಲಿ ವ್ಯಾಪಕ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರಿಂದ ಸೋಕು ಕಡಿಮೆಯಾಗಿತ್ತು. ಆದರೆ ಈ ವರ್ಷ ಪುನಃ ಸೋಂಕಿನ ವೈರಾಣು ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿದೆ.
ಕೋವಿಡ್ ಲಸಿಕೆ ಪಡೆದವರು ಕೆಎಫ್‌ಡಿಗೆ ಹಿಂದೇಟು: ಇನ್ನು ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳನ್ನು ಬೇಸಿಗೆಯಲ್ಲಿ ಕಾಡುವ ಕೆಎಫ್‌ಡಿ ವೈರಾಣುವಿನ ವಿರುದ್ಧದ ಹೋರಾಟಕ್ಕೆ ಕೊರೋನಾ ವ್ಯಾಕ್ಸಿನ್ ಅಡ್ಡಿಯಾಗಿದೆ. ಕೋವಿಡ್ ವ್ಯಾಕ್ಸಿನ್ ಪಡೆದವರು ಕೆಎಫ್‌ಡಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವು ತಂದಿದೆ.
ಕೋವಿಡ್ ಲಸಿಕೆ ಪಡೆದ 14 ದಿನದ ನಂತರ ಕೆಎಫ್‌ಡಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದರೂ ಜನರು ಸ್ಪಂದಿಸುತ್ತಿಲ್ಲ. ಈ ಬಾರಿ ಜಿಲ್ಲೆಯ 1.95 ಲಕ್ಷ ಜನರಲ್ಲಿ ಕೇವಲ 95 ಸಾವಿರ ಜನರಿಗಷ್ಟೇ ಕೆಎಫ್‌ಡಿ ಲಸಿಕೆ ನೀಡಲಾಗಿದೆ. ಅಂದರೆ ಶೇ.47ರಷ್ಟುಮಾತ್ರ ಸಾಧನೆ ಆಗಿದೆ.