
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಸರ್ಪಕ್ಷೇತ್ರ ಎಂದೇ ಖ್ಯಾತಿ ಪಡೆದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಮತ್ತು 24ರಂದು ಕೆಲವು ಪ್ರಮುಖ ಧಾರ್ಮಿಕ ಸೇವೆಗಳು ನಡೆಯುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಗಸ್ಟ್ 23ರಂದು ಏಕಾದಶಿ ಹಾಗೂ ಆಗಸ್ಟ್ 24ರಂದು ಅತಿರಿಕ್ತ ಏಕಾದಶಿ ಇರುವುದರಿಂದ, ಈ ವಿಶೇಷ ಧಾರ್ಮಿಕ ದಿನಗಳ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಸೇವೆಗಳಾದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಈ ಮೂರು ಪ್ರಮುಖ ಸೇವೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ದೇವರ ದರ್ಶನ ಮತ್ತು ನಿತ್ಯ ಪೂಜೆಗಳು ಎಂದಿನಂತೆದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಮಂಗಳಾರತಿ, ಅರ್ಚನೆ, ಮಹಾಪೂಜೆ ಸೇರಿದಂತೆ ಇತರ ನಿತ್ಯ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ಎಂದಿನಂತೆ ನೆರವೇರಲಿವೆ.ಸುಬ್ರಹ್ಮಣ್ಯಕ್ಕೆ ಆಗಮಿಸುವ ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು, ನಿಗದಿತ ನಿತ್ಯ ಪೂಜೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ದೇವಸ್ಥಾನದ ಪ್ರಕಟಣೆ ಸ್ಪಷ್ಟಪಡಿಸಿದೆ. ಆದ್ದರಿಂದ ಭಕ್ತಾದಿಗಳು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಕ್ಕೆ ಆಗಮಿಸಬೇಕಾಗಿ ವಿನಂತಿಸಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ನಾಗರ ಪಂಚಮಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ₹750 ಮುಂಗಡ ಹಣ ಪಾವತಿಸಿದರೆ ದೇವಸ್ಥಾನದ ಸೇವೆಗಳನ್ನು ನೆರವೇರಿಸಿ ಪ್ರಸಾದವನ್ನು ಕಳುಹಿಸಿಕೊಡಲಾಗುವುದು ಎಂಬ ಸಂದೇಶವನ್ನು ವಿಡಿಯೋದಲ್ಲಿ ನೀಡಲಾಗಿದೆ. ಇದರಿಂದ ಭಕ್ತರು ಮೋಸ ಹೋಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಕೂಡಲೇ ಕಾರ್ಯಪ್ರವೃತ್ತರಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೇವಸ್ಥಾನದ ಅಧಿಕೃತ ಸೇವೆಗಳು ಹಾಗೂ ಪ್ರಸಾದಕ್ಕೆ ಸಂಬಂಧಿಸಿದ ಹಣ ಪಾವತಿ ಮಾಡುವ ಮುನ್ನ ಭಕ್ತರು ಯಾವುದೇ ಅಪರಿಚಿತ ವ್ಯಕ್ತಿಗಳ ಸಾಮಾಜಿಕ ಜಾಲತಾಣದ ಲಿಂಕ್, ಮೊಬೈಲ್ ಸಂಖ್ಯೆ ಅಥವಾ ಖಾತೆಗೆ ಹಣ ವರ್ಗಾಯಿಸದೆ, ದೇವಸ್ಥಾನದ ಅಧಿಕೃತ ಮೂಲಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.