ರಾಜ್ಯದ 6 ಸಾವಿರ ಕೆಜಿ ಹಾಲಿನ ಪೌಡರ್‌ ಮುಂಬೈಗೆ : ವಶ

By Kannadaprabha NewsFirst Published Oct 12, 2020, 7:11 AM IST
Highlights

ಅಕ್ರಮವಾಗಿ ಮುಂಬೈ ಕಡೆಗೆ ಸಾಗಿಸುತ್ತಿದ್ದ  ಕ್ಷೀರ ಭಾಗ್ಯ ಹಾಲಿನ ಪುಡಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ, 

ಬೈಲಹೊಂಗಲ (ಅ.12): ಅಕ್ರಮವಾಗಿ ಸಾಗಿಸುತ್ತಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಕ್ಷೀರಭಾಗ್ಯ ಯೋಜನೆಯ 15 ಲಕ್ಷ ಮೌಲ್ಯದ 6000 ಕೆಜಿ ಹಾಲಿನ ಪೌಡರ್‌ ವಶಪಡಿಸಿಕೊಂಡು, ಲಾರಿ ಚಾಲಕನನ್ನು ಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸ ಕುರಗುಂದ ಬಳಿ ಭಾನುವಾರ ನಡೆದಿದೆ.

ಬೈಲಹೊಂಗಲ ತಾಲೂಕಿನ ಹೊಸಕುರಗುಂದ ಗ್ರಾಮದ ಪುಂಡಲೀಕ ಬಸಪ್ಪ ಯಕ್ಕುಂಡಿ ಎಂಬಾತ ಬಂಧಿತ ಲಾರಿ ಚಾಲಕ. ಧಾರವಾಡದ ಬೈಲೂರು ಇಂಡಸ್ಟ್ರಿಯಲ್‌ ಪ್ರದೇಶದಿಂದ 25 ಕೆಜಿ ತೂಕದ ಸುಮಾರು 240ಕ್ಕೂ ಹೆಚ್ಚು ಚೀಲಗಳಲ್ಲಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಅನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಹಾಲಿನ ಪೌಡರ್‌ ಹಾಗೂಲಾರಿ ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಜಪ್ತಿ ಮಾಡಿಕೊಂಡಿರುವ ಕ್ಯಾಂಟರ್‌ ವಾಹನದಲ್ಲಿ ಕರ್ನಾಟಕ ಸರ್ಕಾರದ ಹೆಸರಿನ ನಂದಿನಿ  ಪೌಡರ್‌, ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಚೀಲಗಳು ಪತ್ತೆಯಾಗಿದ್ದು, ಇವುಗಳನ್ನು ಅಕ್ರಮವಾಗಿ ಧಾರವಾಡದಿಂದ ಮುಂಬೈಗೆ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಈ ಕುರಿತು ಬೈಲಹೊಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

click me!