* ನಿಷ್ಕ್ರೀಯ ಜಿಲ್ಲಾಧ್ಯಕ್ಷರ ಮರುನೇಮಕ
* ಕೋವಿಡ್ ಪರಿಹಾರ ಕಾರ್ಯ, ಪ್ರವಾಹ ನಿರ್ವಣೆಯಲ್ಲಿ ಸರ್ಕಾರ ವಿಫಲ
* ಕಾಂಗ್ರೆಸ್‌ನಲ್ಲಿ ಯಾವ ಹಿರಿಯರನ್ನೂ ಮೂಲೆಗುಂಪು ಮಾಡಿಲ್ಲ
ಹುಬ್ಬಳ್ಳಿ(ಜು.29): ಪಕ್ಷಕ್ಕಾಗಿ ದುಡಿದ ಹಿರಿಯನ್ನು ಕಸದಬುಟ್ಟಿಗೆ ಎಸೆಯುವ ಕೆಲಸವನ್ನು ಬಿಜೆಪಿ ಮಾಡಿದೆ. ಭ್ರಷ್ಟಾಚಾರದ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಿಸಲಾಗಿದೆಯಾ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಪಕ್ಷ ಕಟ್ಟಿದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ? ಎಂಬ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಉತ್ತರಿಸಬೇಕು. ಜತೆಗೆ ಯಡಿಯೂರಪ್ಪ ಅವರ ಕಣ್ಣೀರಿನ ಕಥೆ ಎಲ್ಲರಿಗೂ ತಿಳಿಯಬೇಕಿದೆ. ಕಾಂಗ್ರೆಸ್‌ನಲ್ಲಿ ಯಾವ ಹಿರಿಯರನ್ನೂ ಮೂಲೆಗುಂಪು ಮಾಡಲಾಗಿಲ್ಲ. ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದ ಹಿರಿಯರು ಕೂಡ ಉನ್ನತ ಸ್ಥಾನಮಾನದಲ್ಲೇ ಇದ್ದಾರೆ ಎಂದರು.
ಪ್ರವಾಹ ಬಂದ ಸಂದರ್ಭದಲ್ಲಿ ಶಾಸಕರು, ಸಚಿವರು ಆಯಾ ಜಿಲ್ಲೆಯಲ್ಲಿದ್ದು ಉಸ್ತುವಾರಿ ನೋಡಿಕೊಳ್ಳಬೇಕು. ಈಗ ಅದೆಲ್ಲ ಬಿಟ್ಟು, ಸಿಎಂ ಬದಲಾವಣೆ, ನೂತನ ಸಿಎಂ ನೇಮಕ, ರಾಜ್ಯ ಉಸ್ತುವಾರಿಗಳ ಪ್ರವಾಸ ಎಂದು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೋವಿಡ್ ಪರಿಹಾರ ಕಾರ್ಯ, ಪ್ರವಾಹ ನಿರ್ವಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಸಲೀಮ್, ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಮಾಡಿದೆ. 2.5ಕೋಟಿ ಜನರಿಗೆ ನಾವು ಫುಡ್‌ಕಿಟ್, ಆರೋಗ್ಯ ಕಿಟ್ ಸೇರಿದಂತೆ ಅಗತ್ಯ ಸೌಲಭ್ಯವನ್ನು ವಿತರಣೆ ಮಾಡಿದ್ದೇವೆ. ಆದರೆ, ಬಿಜೆಪಿ ಪರಿಹಾರ ನೀಡಬೇಕಾಗುತ್ತದೆ ಎಂದು ಮೃತಪಟ್ಟವರ ಸಂಖ್ಯೆಯನ್ನು ಮರೆಮಾಚಿದೆ ಎಂದು ದೂರಿದರು.
ಜು.30ಕ್ಕೆ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ : ಹಲವು ಮುಖಂಡರು ಕೈ ಪಾಳಯಕ್ಕೆ
ಇನ್ನು, ರಾಜ್ಯದ ಸುಮಾರು ಹದಿನೈದು ಜಿಲ್ಲೆಗಳಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹಾಗೂ ಬ್ಲಾಕ್ ಅಧ್ಯಕ್ಷರ ಮರುನೇಮಕ ಪ್ರಕ್ರಿಯೆ ನಡೆದಿದೆ. ಆರು ವರ್ಷ ಪೂರೈಸಿರುವ ಬ್ಲಾಕ್ ಅಧ್ಯಕ್ಷರಿಗೆ ಉನ್ನತ ಹುದ್ದೆ ನೀಡುವುದು, ನಿಷ್ಕ್ರೀಯ ಬ್ಲಾಕ್ ಅಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರನ್ನು ಬದಲಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ ಮಾಡಲಾಗುತ್ತಿದೆ. ಆ. 31ರೊಳಗೆ ಪಂಚಾಯಿತಿ ಕಮೀಟಿ, ಸೆಪ್ಟೆಂಬರ್‌ನಲ್ಲಿ ಬೂತ್ ಕಮೀಟಿ ರಚನೆಯಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ್, ನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಸೇರಿ ಇತರರಿದ್ದರು.
ಇಂದು ಹುಬ್ಬಳ್ಳಿಗೆ ಸುರ್ಜೇವಾಲಾ
ಎಐಸಿಸಿ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅವರು ಜು. 29, 30ಹಾಗೂ 31ರಂದು ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸಲೀಮ್ ಅಹ್ಮದ್ ತಿಳಿಸಿದರು.
ಜು. 29ರಂದು ಸಂಜೆ 6ರಿಂದ8 ರ ವರೆಗೆ ಇಲ್ಲಿಯ ಏರ್‌ಪೋರ್ಟ್ ರಸ್ತೆ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳ ಜಿಲ್ಲಾ ಮುಖಂಡರ ಜತೆ ಅನೌಪಚಾರಿಕ ಮಾತುಕತೆ ಇದೆ. ಜು. 30ರಂದು ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ಹಾವೇರಿ, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ ಮತ್ತು ಗದಗ ಸೇರಿ 10 ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, 2018ರ ಅಧ್ಯಕ್ಷರು, ಶಾಸಕರು, ಲೋಕಸಭಾ ಮತ್ತು ವಿಧಾನಸಭಾ ಅಭ್ಯರ್ಥಿಗಳು, ವಿಪ ಸದಸ್ಯರು ಮುಖಂಡರ ಸಭೆ ನಡೆಸಲಿದ್ದಾರೆ. ಅಂದು ಬೆಳಗ್ಗೆ 9 ಗಂಟೆಗೆ ಮಧು ಬಂಗಾರಪ್ಪ ಅವರು ಬೆಂಬಲಿಗರ ಜತೆ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಪ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಉಪಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಹಿರಿಯರಾದ ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್ ಸೇರಿ ಎಲ್ಲ ಜಿಲ್ಲೆಗಳ ಪ್ರಮುಖ ಮುಖಂಡರು ಉಪಸ್ಥಿತರಿರುವರು ಎಂದು ತಿಳಿಸಿದರು. ಜು. 31ರಂದು ಮೈಸೂರಿಗೆ ತೆರಳಿ ಸಭೆ ನಡೆಸಲಿದ್ದಾರೆ ಎಂದರು.