ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೂ ಇಲ್ಲ: ಡಿ.ಕೆ. ಶಿವಕುಮಾರ

By Kannadaprabha NewsFirst Published Oct 4, 2020, 3:11 PM IST
Highlights

ಅನುಶ್ರೀ ಪರ ರಾಜಕೀಯ ನಾಯಕರ ಹಸ್ತಕ್ಷೇಪ ಮಾಡಿರುವ ನಾಯಕ ಯಾರೆಂದು ನನಗೆ ಗೊತ್ತಿಲ್ಲ| ಆ ನಾಯಕರ ಹೆಸರೇನಾದರೂ ನಿಮಗೆ ಗೊತ್ತಿದೆಯಾ? ನೀವೇನಾದ್ರೂ ತನಿಖೆ ಮಾಡಿದ್ದೀರಾ? ನಾವು ಮಾಧ್ಯಮಗಳು ಹೇಳುವುದನ್ನು ಕೇಳುತ್ತಿದ್ದೇವೆ ಎಂದು ಮಾಧ್ಯಮದವರಿಗೆ ಡಿಕೆಶಿ ಮರು ಪ್ರಶ್ನೆ ಮಾಡಿದ ಡಿಕೆಶಿ| 

ಧಾರವಾಡ(ಅ.04): ಅತಿವೃಷ್ಟಿಯಿಂದ ಉತ್ತರ ಕರ್ನಾಟಕದ ಜನ ಸಂಕಷ್ಟದಲ್ಲಿದ್ದರೂ ಆಡಳಿತ ಸರ್ಕಾರಕ್ಕೆ ಕಣ್ಣು, ಕಿವಿ ಹಾಗೂ ಹೃದಯವೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 

ಶನಿವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯ ಹಾನಿಯ ಪರಿಹಾರವನ್ನೇ ಸರ್ಕಾರ ಇನ್ನೂ ನೀಡಿಲ್ಲ. ಇದೀಗ ಈ ವರ್ಷಕ್ಕೆ ದೇವರೇ ಗತಿ ಎಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಹೇಳಿದ್ದು ಇದು ಜನಹಿತ ಕಾಪಾಡುವ ಸರ್ಕಾರದ ಜವಾಬ್ದಾರಿಯೇ ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಳೆದ ಪ್ರವಾಹದ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಈಗಲಾದರೂ ಜನರ ನೋವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬಂದು ನೋಡಬೇಕು. ಎಲ್ಲೋ ಕುಳಿತು ಮಾತನಾಡಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಸಂಘಟಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ, ಧಾರವಾಡ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ ಎಂದರು.

ಹುಬ್ಬಳ್ಳಿ-ಧಾರವಾಡದ BRTSಗೆ ಕಳಪೆ ಕಾಮಗಾರಿ ಸಂಕಟ!

ವಿಧಾನಪರಿಷತ್‌ ಪದವೀಧರ ಕ್ಷೇತ್ರಕ್ಕೆ ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಅಂತಿಮಗೊಂಡಿದೆ. ಹಾಗೆಯೇ, ಉಪಚುನಾವಣೆ ಅಭ್ಯರ್ಥಿಗಳು ಯಾರು ಎಂದು ಅಂತಿಮಗೊಳ್ಳಬೇಕಿದೆ. ಡಿ.ಕೆ. ರವಿ ಪತ್ನಿಗೆ ಟಿಕೆಟ್‌ ನೀಡುವ ಜವಾಬ್ದಾರಿಯನ್ನು ಪಕ್ಷದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ವಹಿಸಿದ್ದೇವೆ. ಅವರೇ ನೋಡಿ ಪರಿಶೀಲಿಸಿ ತಮಗೆ ತಿಳಿಸುತ್ತಾರೆ. ಆಡಳಿತ ನಡೆಸುತ್ತಿರುವ ಬಿಜೆಪಿ ಅವರು ಚುನಾವಣೆಯನ್ನು ಜೋರಾಗಿ ನಡೆಸುತ್ತಾರೆ. ವಿಪಕ್ಷದಲ್ಲಿರುವ ನಾವು ನಮ್ಮ ಕೆಲಸವನ್ನು ಮಾಡುತ್ತೇವೆ ಎಂದರು.

ರಾಜ್ಯ ಸರ್ಕಾರ ಉಳಿವಿನ ಕುರಿತು ಸಚಿವ ಆನಂದ್‌ ಸಿಂಗ್‌ ನೀಡಿರುವ ಹೇಳಿಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ, ಈ ಕುರಿತು ಆನಂದ್‌ಸಿಂಗ್‌ ಮತ್ತು ಅಲ್ಲಿರುವ ಸಚಿವರೇ ಹೇಳಬೇಕು. ಡ್ರಗ್ಸ್‌ ಪ್ರಕರಣದಲ್ಲಿ ಅನುಶ್ರೀ ಪರ ರಾಜಕೀಯ ನಾಯಕರ ಹಸ್ತಕ್ಷೇಪ ಮಾಡಿರುವ ನಾಯಕ ಯಾರೆಂದು ನನಗೆ ಗೊತ್ತಿಲ್ಲ. ಆ ನಾಯಕರ ಹೆಸರೇನಾದರೂ ನಿಮಗೆ ಗೊತ್ತಿದೆಯಾ? ನೀವೇನಾದ್ರೂ ತನಿಖೆ ಮಾಡಿದ್ದೀರಾ? ನಾವು ಮಾಧ್ಯಮಗಳು ಹೇಳುವುದನ್ನು ಕೇಳುತ್ತಿದ್ದೇವೆ ಎಂದು ಮಾಧ್ಯಮದವರಿಗೆ ಡಿಕೆಶಿ ಮರು ಪ್ರಶ್ನೆ ಮಾಡಿದರು.
 

click me!