
ಕೊಪ್ಪಳ (ನ.27): ಜಿಲ್ಲೆಯ ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮೆಟ್ರಿಕ್ ಪೂರ್ವ ವಸತಿ ನಿಲಯವೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾ*ಚಾರ ಹಾಗೂ ನಿರ್ಲಕ್ಷ್ಯದ ಆರೋಪದಡಿ ಒಟ್ಟು ಆರು ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಮ್ ಅರಸಿದ್ದಿ ತಿಳಿಸಿದ್ದಾರೆ.
ಓರ್ವ ಆರೋಪಿ ಬಂಧನ; ಐವರ ವಿರುದ್ಧ ನಿರ್ಲಕ್ಷ್ಯದ ದೂರು
ಮಕ್ಕಳ ರಕ್ಷಣಾಧಿಕಾರಿಗಳು ನೀಡಿದ ದೂರಿನನ್ವಯ ಕುಕನೂರು ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿಯಾಗಿರುವ ಹನುಮಗೌಡ ಬಸ್ತಿಯನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ರಾಮ್ ಅರಸಿದ್ದಿ ಮಾಹಿತಿ ನೀಡಿದ್ದಾರೆ. ಈ ಘಟನೆಗೆ ಕಾರಣರಾದವರ ಜೊತೆಗೆ, ನಿರ್ಲಕ್ಷ್ಯ ತೋರಿದ ವಸತಿ ನಿಲಯದ ಸಿಬ್ಬಂದಿ ವಿರುದ್ಧವೂ ದೂರು ದಾಖಲಾಗಿದೆ.
ನಿರ್ಲಕ್ಷ್ಯ ತೋರಿದ ಈ ಐವರನ್ನು ವಿಚಾರಣೆಗಾಗಿ ಕರೆಸಲು ನೋಟಿಸ್ ನೀಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ವಿದ್ಯಾರ್ಥಿನಿಯು ಮಹೇಶ್ವರಿ ಸಂಯುಕ್ತ ಪದವಿ ಪೂರ್ವ ಶಾಲೆಯಲ್ಲಿ 8ನೇ ತರಗತಿಯಿಂದ ಓದುತ್ತಿದ್ದಳು. ವಸತಿ ನಿಲಯ ಮತ್ತು ಶಾಲೆ ಎರಡೂ ಅಕ್ಕಪಕ್ಕದಲ್ಲಿಯೇ ಇವೆ ಎಂದು ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಾಗವೇಣಿ ಅವರು 'ಈ ಘಟನೆ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ್ದು, ಇಲಾಖಾ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ವಸತಿ ನಿಲಯದ ಮೇಲ್ವಿಚಾರಕಿ ಶಶಿಕಲಾ ಹಿರೇಮಠ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಲಾಗಿದೆ. ಅವರೊಂದಿಗೆ ಇಬ್ಬರು ಡಿ ಗ್ರೂಪ್ ನೌಕರರಾದ ಪ್ರೀಯಾಂಕಾ ಸಿಂಧೋಗಿ ಮತ್ತು ಪಾರ್ವತಿ ಯವರನ್ನೂ ಅಮಾನತ್ತು ಮಾಡಲಾಗಿದೆ. ರಾತ್ರಿ ಪಾಳಯದಲ್ಲಿದ್ದ ವಾಚ್‌ಮನ್‌ರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ವಸತಿ ನಿಲಯದ ಸಿಬ್ಬಂದಿ ವಿದ್ಯಾರ್ಥಿನಿಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿತ್ತು. ಮೆಡಿಕಲ್ ಚೆಕಪ್ ಮಾಡಿದ್ದರೂ ಸಿಬ್ಬಂದಿ ಗಮನಿಸದ ಕಾರಣ ಈ ಘಟನೆ ನಡೆದಿದೆ. ಹೀಗಾಗಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ನಾಗವೇಣಿ ಅವರು ಸ್ಪಷ್ಟಪಡಿಸಿದ್ದಾರೆ. ಇಂತಹ ಘಟನೆಗಳು ಆಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ ಅವರು, ಇಲಾಖಾ ಆಯುಕ್ತರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಎಸ್ಪಿ ಅವರು ಸಹ "ನಿರ್ಲಕ್ಷ್ಯ ಮಾಡಿದವರ ವಿರುದ್ಧವೂ ಕ್ರಮ ಎಂದು ಎಚ್ಚರಿಕೆ ನೀಡಿದ್ದಾರೆ.