ಸಾರಿಗೆ ನೌಕರರ ಮುಷ್ಕರ: ಕೋಲಾರ, ಗದಗದಲ್ಲಿ KSRTC ಬಸ್‌ಗಳ ಮೇಲೆ ಕಲ್ಲು ತೂರಾಟ!

Published : Aug 05, 2025, 12:07 PM IST
KSRTC Bus Stone Pelnting

ಸಾರಾಂಶ

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ನಡುವೆ, ಕೋಲಾರ ಮತ್ತು ಗದಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಗಳು ಸಾರ್ವಜನಿಕ ಸಾರಿಗೆಯ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಕೋಲಾರ/ಗದಗ (ಆ.05): ರಾಜ್ಯಾದ್ಯಂತ ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಸ್ ಚಾಲನೆ, ಡಿಪೋದಲ್ಲಿ ಮೆಕ್ಯಾನಿಕಲ್ ಕೆಲಸಗಾರರು ಸೇರಿದಂತೆ ಎಲ್ಲರೂ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಆದರೆ, ಬೆರಳೆಣಿಕೆ ನೌಕರರು ಬಸ್ ಚಾಲನೆಗೆ ಬಂದಿದ್ದಾರೆ. ಹೀಗೆ ಪ್ರಯಾಣಿಕರಿಗೆ ಸೇವೆ ಒದಗಿಸಲು ಬಂದು ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್‌ಗಳಿಗೆ ಅನಾಮಿಕ ವ್ಯಕ್ತಿಗಳು ಕಲ್ಲು ಎಸೆದು ಹಾನಿ ಮಾಡಿದ್ದಾರೆ. ಕೋಲಾರ ಮತ್ತು ಗದಗ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳು ಸಾರ್ವಜನಿಕ ಸಾರಿಗೆಯ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆ ಎತ್ತಿವೆ.

ಕೋಲಾರದಲ್ಲಿ ಸಿಬ್ಬಂದಿಗಳಿಂದ ಪ್ರತಿಭಟನೆ, ಹೈ ಡ್ರಾಮ:

ಕೋಲಾರ ಡಿಪೋದಿಂದ ಬಸ್ ನಿಲ್ದಾಣದತ್ತ ಬರುತ್ತಿದ್ದ KSRTC ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಈ ಘಟನೆಯಲ್ಲಿ ನಿರ್ವಾಹಕ ಕುಳಿತುಕೊಳ್ಳುವ ಸೀಟಿನ ಪಕ್ಕದ ಗ್ಲಾಸ್ ಸಂಪೂರ್ಣವಾಗಿ ಪುಡಿ ಪುಡಿಯಾಗಿದೆ.

ಘಟನೆಯ ಬಳಿಕ ಕೋಲಾರ KSRTC ನಿಲ್ದಾಣದಲ್ಲಿ ಹೈ ಡ್ರಾಮ ನಡೆಯಿತು. ಕೋಲಾರದಿಂದ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಂಚಾರ ಮಾಡಲು ಅಧಿಕಾರಿಗಳು ಸೂಚನೆ ನೀಡಿದರೂ, ಚಾಲಕ ನಾರಾಯಣಸ್ವಾಮಿ ಮತ್ತು ನಿರ್ವಾಹಕ ಮೂರ್ತಿ 'ನಮಗೆ ಪ್ರಾಣ ಬೆದರಿಕೆ ಇದೆ' ಎಂದು ಕೆಲಸ ನಿರಾಕರಿಸಿದರು.

ಅಧಿಕಾರಿಗಳು ಎಷ್ಟೇ ಬಲವಂತ ಮಾಡಿದರೂ, ಸಿಬ್ಬಂದಿ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ನೌಕರರು ಕೆಲಸಕ್ಕೆ ಹೋಗಲು ಹಿಂದೇಟು ಹಾಕಿದರು. 'ಪೊಲೀಸ್ ಭದ್ರತೆ ನೀಡಲಾಗುತ್ತದೆ' ಎಂಬ ಭರವಸೆ ನೀಡಿದರೂ ಸಹ ಸಿಬ್ಬಂದಿ ಒಪ್ಪಲಿಲ್ಲ. ಪರಿಣಾಮವಾಗಿ ಬಸ್‌ನ್ನು ಕೋಲಾರ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಈ ಸಂಬಂಧ KSRTC ಅಧಿಕಾರಿಗಳು ಕಲ್ಲು ಎಸೆತ ಕುರಿತಂತೆ ಪ್ರಕರಣ ದಾಖಲಿಸಿದ್ದಾರೆ.

ಗದಗ ಜಿಲ್ಲೆಯಲ್ಲೂ ಕಲ್ಲು ತೂರಾಟ:

ಕೋಲಾರದಲ್ಲಿ ಘಟನೆ ನಡೆದ ಕೆಲವೇ ಸಮಯದೊಳಗೆ, ಗದಗ ಜಿಲ್ಲೆಯಲ್ಲಿ ಹುಬ್ಬಳ್ಳಿ (HUBBALLI) ಕಡೆಯಿಂದ ಹೊಸಪೇಟೆ (HOSPET) ಕಡೆಗೆ ತೆರಳುತ್ತಿದ್ದ KA33 F0516 ನಂಬರ್‌ನ ಬಸ್ ಮೇಲೆ ಕೂಡಾ ಕಲ್ಲು ತೂರಾಟ ನಡೆದಿದೆ. ಹುಬ್ಬಳ್ಳಿ ಬೈಪಾಸ್ ಬಳಿಯ ಮುಸುಕುದಾರಿಗಳು ಬಸ್‌ ಮೇಲೆ ಕಲ್ಲು ಎಸೆದಿದ್ದು, ಬಸ್ಸಿನ ಮುಂಬದಿಯ ಗ್ಲಾಸ್ ಜಖಂಗೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ.

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಡ್ರೈವರ್ ರವಿ ಅವರು, 'ಕ್ಲಾಸ್ ಪೀಸ್ ಆಗಿದ್ದರೇ ನಮಗೂ ಅಪಾಯವಾಗುತ್ತಿತ್ತು' ಎಂದು ಭಯ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಅನಾಹುತ ತಪ್ಪಿಸಲು, ಡ್ರೈವರ್ ಬಸ್‌ನ್ನು ಗದಗ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಲಾಗಿದ್ದು, ತಾತ್ಕಾಲಿಕವಾಗಿ ಪ್ರಯಾಣ ಸ್ಥಗಿತಗೊಳಿಸಲಾಗಿದೆ.

ಸಾರ್ವಜನಿಕ ಸಾರಿಗೆಯ ಭದ್ರತೆ ಕುರಿತು ಪ್ರಶ್ನೆ:

ಈ ಎರಡು ಘಟನೆಗಳನ್ನೂ ಗಮನಿಸಿದರೆ, KSRTC ಬಸ್‌ಗಳ ಮೇಲೆ ಕಲ್ಲು ತೂರಾಟ ದಾಳಿ ಘಟನೆಗಳು ಭದ್ರತೆ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಬಸ್ ಸಿಬ್ಬಂದಿ, ಪ್ರಯಾಣಿಕರು ಮಾತ್ರವಲ್ಲದೆ, ಸಾರ್ವಜನಿಕರು ಕೂಡಾ ತಮ್ಮ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಾಗೂ ಸಾರಿಗೆ ಇಲಾಖೆ ಈ ಸಂಬಂಧ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ