ಜಾನಪದ ನೃತ್ಯ ರಾಷ್ಟ್ರ ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಣ್ಯ ವೇದಿಕೆಗಳಲ್ಲಿ ಪ್ರದರ್ಶನ ಕಂಡು ಜನಮನ್ನಣೆ ಗಳಿಸುವಂತೆ ಮಾಡಿದ ಕೀರ್ತಿ, ಹೆಗ್ಗಳಿಕೆ ರಾಣಿ ಮಾಚ್ಚಯ್ಯ ಅವರಿಗೆ ಸಲ್ಲುತ್ತದೆ.
ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಜ.26): ಕೊಡಗಿನ ಜಾನಪದ ಕಲೆಗಾರ್ತಿ ರಾಣಿಮಾಚ್ಚಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿಯ ಗರಿ ಮುಡಿಗೇರಿದೆ. ಕೊಡವ ಜನಾಂಗದ ಜಾನಪದ ನೃತ್ಯವಾದ ಉಮ್ಮತ್ತಾಟ್ ಕಲೆಯನ್ನು ಯುವತಿಯರು, ಮಹಿಳೆಯರಾದಿಯಾಗಿ ಎಲ್ಲರಿಗೂ ಕಲಿಸುತ್ತಲೇ ಅದನ್ನು ಮತ್ತು ಪ್ರಚುರಪಡಿಸುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಲೇ ಇದ್ದರು. ಹೀಗಾಗಿಯೇ ಆ ಜಾನಪದ ನೃತ್ಯ ರಾಷ್ಟ್ರ ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಣ್ಯ ವೇದಿಕೆಗಳಲ್ಲಿ ಪ್ರದರ್ಶನ ಕಂಡು ಜನಮನ್ನಣೆ ಗಳಿಸುವಂತೆ ಮಾಡಿದ ಕೀರ್ತಿ, ಹೆಗ್ಗಳಿಕೆ ರಾಣಿಮಾಚ್ಚಯ್ಯ ಅವರಿಗೆ ಸಲ್ಲುತ್ತದೆ.
undefined
ಅಷ್ಟು ಮಾತ್ರವಲ್ಲ ಹಲವು ಯುವತಿಯರು ಹಾಗೂ ಮಹಿಳೆಯರನ್ನ ಒಗ್ಗೂಡಿಸಿಕೊಂಡು ಜಾನಪದ ನೃತ್ಯ ತಂಡವನ್ನ ಕಟ್ಟಿ ಕೊಡಗಿನ ಕೊಡವ ಜನಾಂಗದ ಜಾನಪದ ನೃತ್ಯ ಉಮ್ಮತಾಟ್ ಅನ್ನು ದೇಶಮಟ್ಟದಲ್ಲಿ ಪ್ರದರ್ಶನ ನೀಡಿದ ಕೀರ್ತಿ ರಾಣಿ ಮಾಚ್ಚಯ್ಯರಿಗೆ ಸಲ್ಲುತ್ತದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಜನಿಸಿದ ಇವರು ಮಡಿಕೇರಿಯಲ್ಲಿಯೇ ಪದವಿ ಶಿಕ್ಷಣ ಮುಗಿಸಿದ್ದಾರೆ. ಚಿಕ್ಕಂದಿನಿಂದಲೂ ಉಮ್ಮತಾಟ್ ನೃತ್ಯವನ್ನೇ ಅಪ್ಪಕೊಂಡ ರಾಣಿಮಾಚ್ಚಯ್ಯ ಅವರು 1967 ರಲ್ಲಿ ಉಮ್ಮತಾಟ್ ನೃತ್ಯ ತಂಡವನ್ನು ಕಟ್ಟಿದ್ದರು. ನಂತರ ಆ ತಂಡವನ್ನು ನಿರಂತರ ತರಬೇತಿಗೊಳಿಸುತ್ತಾ ದೇಶದ ನಾನಾ ಭಾಗಗಳಲ್ಲಿ ನಡೆಯುವ ಪ್ರಸಿದ್ಧ ವೇದಿಕೆಗಳಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡುವ ಮಟ್ಟಕ್ಕೆ ಬೆಳೆಸಿದರು. ಹೀಗೆ ನಿರಂತರ ಹೊಸ ಹೊಸ ತಂಡಗಳನ್ನು ಮಾಡುತ್ತಾ ಅವುಗಳನ್ನು ಪೋಷಿಸುತ್ತಾ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ನೀಡುವ ಮೂಲಕ ತಮ್ಮ ಕಲೆಯನ್ನ ಅನಾವರಣ ಗೊಳಿಸಿದ್ದಾರೆ.
Padma Awards 2023: ಎಸ್‌ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್‌ಎಲ್ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಗೌರವ!
ಗೋವಾದಲ್ಲಿ ಕಲೆ ಪ್ರದರ್ಶನ
ಗೋವಾದಲ್ಲಿ ನಡೆದ ಕರ್ನಾಟಕ ಉತ್ಸವದಲ್ಲಿ ತಮ್ಮ ಕಲೆ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಒರಿಸ್ಸಾ, ಹೈದರಾಬಾದ್ ಬಾಂಬೆ, ಮೆಡ್ರಾಸ್, ಅಂಡಾಮನ್ ನಿಕೋಬಾರ್ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ತಂಡದಿಂದ ಪ್ರದರ್ಶನ ನೀಡಿದ್ದಾರೆ. ಹೆಚ್ಚಾಗಿ ಇವರು ಕಾಲೇಜು ವಿದ್ಯಾರ್ಥಿಗಳನ್ನೆ ತಮ್ಮ ತಂಡಗಳಿಗೆ ಸೇರಿಸಿಕೊಂಡು ಪ್ರದರ್ಶನ ನೀಡುತ್ತಾ ಬಂದಿದ್ದು ಬರೋಬ್ಬರಿ ನಾಲ್ಕು ದಶಕಗಳಿಂದ ವಿದ್ಯಾರ್ಥಿಗಳಿಗೆ ಉಮ್ಮತ್ತಾಟ್ ಕಲಿಸುತ್ತಾ ಬಂದಿದ್ದಾರೆ. ಇವರು ಕೇವಲ ಉಮ್ಮತಾಟ್ ಅಷ್ಟೇ ಕೊಡವ ಜಾನಪದ ಕಲೆಗಳಾದ ಕೋಲಾಟ, ಸೇರಿದಂತೆ ಹಲವು ನೃತ್ಯ ಪ್ರಕಾರಗಳನ್ನ ಪ್ರದರ್ಶನ ನೀಡುತ್ತಿದ್ದರು. ರಾಜ್ಯ ದೇಶಗಲ್ಲಿ ಇವರು ನೀಡಿದ ಪ್ರದರ್ಶನಕ್ಕೆ ಸಾಕಷ್ಟು ಬಹುಮಾನಗಳು ಕೂಡ ಇವರ ಮುಡಿಗೇರಿವೆ. ರಾಜೋತ್ಸವ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ರಾಣಿಮಾಚ್ಚಯ್ಯ ಅವರನ್ನು ಅರಸಿ ಬಂದಿವೆ.
ಜಿಲ್ಲೆ, ರಾಜ್ಯ ದೇಶ ಮಟ್ಟದಲ್ಲಿ ಪ್ರದರ್ಶನವನ್ನು ನೀಡಿ ಜನ ಮನ್ನಣೆ ಗಳಿಸಿದ ರಾಣಿ ಮಾಚಯ್ಯರ ಈ ಸೇವೆಯನ್ನ ಭಾರತ ಸರ್ಕಾರ ಗಮನಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗಲೂ ಭಾರತ್ ಸ್ಕೌಟ್ ಆಂಡ್ ಗೈಡ್ಸ್ ನ ಉಪಾಧ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದು ಇವರ ಧಣಿವರಿಯದ ಸೇವೆಗೆ ಸಾಕ್ಷಿ.