
ಮಡಿಕೇರಿ (ಜೂ.03): ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ನಂತರ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರೈಲ್ವೆ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳ ಕುರಿತು ಚರ್ಚೆ ನಡೆಸಲಾಯಿತು.
ಇತ್ತೀಚಿನ ದಿನಗಳಲ್ಲಿ ಹರಿದಾಡುತ್ತಿರುವ ಕೆಲವು ವರದಿಗಳು ಮತ್ತು ಚರ್ಚೆಗಳು ಕೊಡಗಿನ ಮೂಲಕ ರೈಲು ಮಾರ್ಗ ಹಾದುಹೋಗುವ ಸಾಧ್ಯತೆ ಬಗ್ಗೆ ಸಾರ್ವಜನಿಕರ ಒಂದು ವಲಯದಲ್ಲಿ ಆತಂಕವನ್ನು ಉಂಟುಮಾಡಿವೆ ಎಂದು ಯದುವೀರ್ ತಿಳಿಸಿದ್ದಾರೆ. ಆದರೆ, ರೈಲ್ವೆ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ಇಂತಹ ಯಾವುದೇ ಪ್ರಸ್ತಾವನೆ ಪ್ರಸ್ತುತ ಸಚಿವಾಲಯದ ಪರಿಗಣನೆಯಲ್ಲಿಲ್ಲ ಎಂಬುದು ದೃಢಪಟ್ಟಿದೆ. ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಭವಿಷ್ಯದ ಮೂಲ ಸೌಕರ್ಯ ಯೋಜನೆಯನ್ನು ಕೈಗೊಳ್ಳುವ ಮೊದಲು ಎಲ್ಲ ಹಿತಾಸಕ್ತಿ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.
ದೇಶ ಮತ್ತು ರಾಜ್ಯದ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷ ಸಂಘಟಿಸಲು ನಿರಂತರವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತದಿಂದಾಗಿ ಮೂರನೇ ಅವಧಿಯಲ್ಲಿ ಕೇಂದ್ರ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕೇಂದ್ರದಲ್ಲಿ ಅಲ್ಲದೇ, ಮುಂದಿನ ದಿನಗಳಲ್ಲೂ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರ ತರುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷಸಂಘಟನೆ ಮಾಡಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿದ್ದರೂ ಕೂಡ ಮೈಸೂರು ಪ್ರಾಂತ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಎಂಎಲ್ಎ, ಎಂ.ಪಿ ಸ್ಥಾನಗಳನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡುಗು, ಮಡಿಕೇರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಮುಂದಾಗುತ್ತಿದ್ದೇವೆ. ಪಕ್ಷ ಬಲಪಡಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಎನ್‌ಡಿಎ ಮೈತ್ರಿ ಕೂಟ ಇರುವುದರಿಂದ ವರಿಷ್ಠರ ತೀರ್ಮಾಣಕ್ಕೆ ಪ್ರತಿಯೊಬ್ಬರು ಬದ್ಧರಾಗಬೇಕೆ ಹೊರತು ಕಾರ್ಯಕರ್ತರು ಹಾಗೂ ಮುಖಂಡರು ಗೊಂದಲಕ್ಕೆ ಒಳಗಾಗದೇ ಪಕ್ಷವನ್ನು ಗಟ್ಟಿಗೊಳಿಸಲು ಶ್ರಮಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗವಹಿಸಿ ಅಕ್ರಮ ಮತಗಳನ್ನು ತಡೆಯುವ ಮೂಲಕ ಬಲಿಷ್ಠ ರಾಷ್ಟ್ರಕ್ಕೆ ಕೈಜೋಡಿಸಬೇಕೆಂದು ಎಂದರು.