ಕರ್ನಾಟಕದ ಹೋಟೆಲ್ ಒಂದಕ್ಕೆ ಕೇರಳ ಗ್ರಾಹಕ ಆಯೋಗ ಭಾರೀ ದಂಡ, ಸಣ್ಣ ಕೂದಲು ಪತ್ತೆ ಪ್ರಕರಣದ ಕಾನೂನು ಹೋರಾಟ ಹೇಗಿತ್ತು?

Published : Nov 08, 2026, 10:39 PM IST
Karnataka Hotel Fined Rs 8,000 After Customer Finds Hair In Breakfast

ಸಾರಾಂಶ

ಉಪಹಾರದಲ್ಲಿ ಕೂದಲು ಬಂದಿದ್ದಕ್ಕೆ ಮತ್ತು ಗ್ರಾಹಕರನ್ನು ನಿಂದಿಸಿದ್ದಕ್ಕೆ ಕರ್ನಾಟಕದ ಹೋಟೆಲ್ ಒಂದಕ್ಕೆ ಕಾಸರಗೋಡು ಗ್ರಾಹಕ ಆಯೋಗ 8 ಸಾವಿರ ರೂ. ದಂಡ ವಿಧಿಸಿದೆ. ಆಹಾರದ ಗುಣಮಟ್ಟ ಮತ್ತು ಗ್ರಾಹಕರ ಹಕ್ಕುಗಳ ಬಗ್ಗೆ ಈ ತೀರ್ಪು ಮಹತ್ವದ್ದಾಗಿದೆ.

ಕಾಸರಗೋಡು: ಕರ್ನಾಟಕದ ಹೋಟೆಲ್ ಒಂದಕ್ಕೆ ಕೇರಳ ಗ್ರಾಹಕ ಆಯೋಗವು ಬರೋಬ್ಬರಿ 8 ಸಾವಿರ ರೂಪಾಯಿ ದಂಡ ವಿಧಿಸಿದೆ. ಅಷ್ಟಕ್ಕೂ ಆಗಿದ್ದೇನು?

ಏನಿದು ಪ್ರಕರಣ?

ಆರೋಪದ ಪ್ರಕಾರ, ದೂರುದಾರರು ಸೆಪ್ಟೆಂಬರ್ 28, 2025 ರಂದು ಮಂಜೇಶ್ವರದಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಇಬ್ಬರು ಉಪಹಾರಕ್ಕಾಗಿ ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಆರ್ಡರ್ ಮಾಡಿದ್ದ ಸಜ್ಜಿಗೆ ಅವಲಕ್ಕಿಯಲ್ಲಿ ಕೂದಲು ಹುದುಗಿರೋದು ಕಂಡುಬಂದಿದೆ. ಕೂಡಲೇ ಹೋಟೆಲ್ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ.

ನಂತರ ಏನಾಯ್ತು?

ಹೋಟೆಲ್ ಸಿಬ್ಬಂದಿಗೆ ಗೊತ್ತಾಗುತ್ತಿದ್ದಂತೆಯೇ ವೇಟರ್, ಅದನ್ನು ತೆಗೆದುಕೊಂಡು ಹೋಗಿದ್ದಾನೆ. ಆದರೆ ಹೋಟೆಲ್ ಮ್ಯಾನೇಜ್ಮೆಂಟ್, 180 ರೂಪಾಯಿ ಬಿಲ್ ಪಾವತಿಸುವಂತೆ ಕೇಳಿಕೊಂಡಿದೆ. ಅದಕ್ಕೆ ದೂರುದಾರರು ನೋ ಎಂದಿದ್ದಾರೆ. ಅದಕ್ಕೆ ಹೋಟೆಲ್ ಸಿಬ್ಬಂದಿ ಖಾರವಾಗಿ ಪ್ರತಿಕ್ರಿಯಿಸಿದೆ. ನೀವು ಅದನ್ನು ತಿನ್ನಬೇಕಿತ್ತು. ನಾವು ನೀಡಿದ ಪದಾರ್ಥವನ್ನು ಸೇವಿಸದೇ ಅವಮಾನ ಮಾಡಲಾಗಿದೆ ಎಂದು ನಿಂದಿಸಿದ್ದರಂತೆ.

ಇದರಿಂದ ಬೇಸರಗೊಂಡ ದೂರುದಾರ ಸ್ನೇಹಿತರು ಕಾಸರಗೋಡು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮೊರೆ ಹೋಗಿದ್ದಾರೆ. ಆಗ ಕೋರ್ಟ್‌ನಿಂದ ಕಾನೂನು ನೋಟಿಸ್ ನೀಡಲಾಗಿದೆ. ಆಗ ಹೋಟೆಲ್‌ಗೆ ತನ್ನ ತಪ್ಪಿನ ಅರಿವಾಗಿದೆ. ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದೆ. ನಂತರ 180 ರೂಪಾಯಿ ಪಾವತಿಸೋದಾಗಿ ತಿಳಿಸಿದೆ. ಆದರೆ ಹೋಟೆಲ್ ಮ್ಯಾನೇಜ್ಮೆಂಟ್ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮುಂದೆ ಹಾಜರಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಗ್ರಾಹಕನಿಗೆ 8 ಸಾವಿರ ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದೆ. ಗ್ರಾಹಕರು ಅನುಭವಿಸಿದ ಅನಾನುಕೂಲತೆ ಮತ್ತು ಮಾನಸಿಕ ಯಾತನೆಗೆ ಪರಿಹಾರವಾಗಿ 5,000 ರೂಪಾಯಿ ಪಾವತಿ ಮಾಡುವಂತೆ ಹೇಳಿದೆ. ಜೊತೆಗೆ ಮೊಕದ್ದಮೆ ವೆಚ್ಚವಾಗಿ 3,000 ರೂ.ಗಳನ್ನು ಪಾವತಿಸಲು ಹೋಟೆಲ್‌ಗೆ ಆದೇಶ ನೀಡಿದೆ.

ಕಾಸರಗೋಡು ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಕೃಷ್ಣನ್ ಕೆ ಮತ್ತು ಸದಸ್ಯೆ ಬೀನಾ ಕೆಜಿ ಅವರನ್ನೊಳಗೊಂಡ ಆಯೋಗವು ಈ ಮಹತ್ವದ ತೀರ್ಪನ್ನು ನೀಡಿದೆ. ಆದೇಶದ ಪ್ರತಿ ಸ್ವೀಕರಿಸಿದ 30 ದಿನಗಳಲ್ಲಿ ಹಣ ಪಾವತಿ ಮಾಡುವಂತೆ ಹೋಟೆಲ್‌ಗೆ ನಿರ್ದೇಶನ ನೀಡಿದೆ. ಇನ್ನು, ದೂರನ್ನು ನಿರ್ಧರಿಸುವ ಮೊದಲು ಆಯೋಗವು ಆಹಾರದ ಛಾಯಾಚಿತ್ರಗಳು, ಪಾವತಿ ರಶೀದಿ, ಬಿಲ್ ಮತ್ತು ಕಾನೂನು ಸೂಚನೆಗೆ ಹೋಟೆಲ್ ನೀಡಿದ ಉತ್ತರವನ್ನು ಪರಿಶೀಲಿಸಿತು. ಮಾನಸಿಕ ಯಾತನೆ ಮತ್ತು ಸಂಕಷ್ಟಕ್ಕೆ ಪರಿಹಾರವಾಗಿ ಗ್ರಾಹಕರು 25,000 ರೂ.ಗಳನ್ನು ಕೋರಿದ್ದರು, ಜೊತೆಗೆ ಮೊಕದ್ದಮೆ ವೆಚ್ಚಕ್ಕಾಗಿ 3,000 ರೂ.ಗಳನ್ನು ಕೋರಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ಸನ್ನಿವೇಶದಲ್ಲಿ 5,000 ರೂ.ಗಳು ಸಮಂಜಸ ಪರಿಹಾರವಾಗಿದೆ. ಪರಿಣಾಮವಾಗಿ ಹೋಟೆಲ್‌ಗೆ 5,000 ರೂ.ಗಳನ್ನು ಪರಿಹಾರವಾಗಿ ಮತ್ತು 3,000 ರೂ.ಗಳನ್ನು ಮೊಕದ್ದಮೆ ವೆಚ್ಚವಾಗಿ ಪಾವತಿಸಲು ನಿರ್ದೇಶನ ನೀಡಿದೆ. ಇದರಿಂದಾಗಿ ಒಟ್ಟು ಪಾವತಿಯು 8,000 ರೂ.ಗಳಿಗೆ ತಲುಪಿದೆ.

PREV
Read more Articles on
click me!

Recommended Stories

ದೇವಿರಮ್ಮ ದೇವಿ ದರ್ಶನ ವೇಳೆ ಅವಘಡ, ಬೆಟ್ಟ ಹತ್ತುವಾಗ ಕಂಬಿ ಮುರಿದು 25 ಭಕ್ತರಿಗೆ ಗಾಯ
Tiger ಶ್ರಾಫ್ ಕೇಸ್ ಬೆನ್ನಲ್ಲೇ ಮತ್ತೊಬ್ಬ ನಟನಿಗೆ ಲಾರೆನ್ಸ್ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್, ಬೆಂಗಳೂರಿನಲ್ಲಿ ಓರ್ವನ ಬಂಧನ