ಶಾಸಕ ಪುಟ್ಟರಾಜುರಂತೆ ಲೋಕಾಯುಕ್ತ, ಸಿಬಿಐ ಪ್ರಕರಣ ಎದುಸುತ್ತಿಲ್ಲ ..

By Kannadaprabha NewsFirst Published Mar 19, 2023, 6:10 AM IST
Highlights

ಶಾಸಕ ಸಿ.ಎಸ್‌.ಪುಟ್ಟರಾಜು ರೀತಿ ಅಕ್ರಮ ಗಣಿಗಾರಿಕೆಯಲ್ಲಿ ಲೋಕಾಯುಕ್ತ, ಮುಡಾ ನಿವೇಶನ ಪಡೆದು ಸಿಬಿಐ ಪ್ರಕರಣವನ್ನು ಎದುರಿಸುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ  ಕೆಂಪೂಗೌಡ ಶಾಸಕರಿಗೆ ತಿರುಗೇಟು ನೀಡಿದರು.

ಪಾಂಡವಪುರ:  ಶಾಸಕ ಸಿ.ಎಸ್‌.ಪುಟ್ಟರಾಜು ರೀತಿ ಅಕ್ರಮ ಗಣಿಗಾರಿಕೆಯಲ್ಲಿ ಲೋಕಾಯುಕ್ತ, ಮುಡಾ ನಿವೇಶನ ಪಡೆದು ಸಿಬಿಐ ಪ್ರಕರಣವನ್ನು ಎದುರಿಸುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ  ಕೆಂಪೂಗೌಡ ಶಾಸಕರಿಗೆ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಶಾಸಕ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಕಳೆದ 40 ವರ್ಷಗಳ ಹಿಂದೆಯೇ ನಾನೊಬ್ಬ ಪದವೀಧರ. ಕೃಷಿ ಕಾಯಕ ಮಾಡುತ್ತಿದ್ದ ನಾನು ರೈತ ಚಳವಳಿಗೆ ಧುಮುಕಿ ಇಲ್ಲಿಯವರೆಗೆ ಸ್ವಚ್ಛ ಬದುಕು ನಡೆಸಿದ್ದೇನೆ. ಬದ್ಧತೆಯಿಂದ ಹೋರಾಟ ನಡೆಸುತ್ತಿದ್ದೇನೆಯೇ ಹೊರತು ಪುಟ್ಟರಾಜು ರೀತಿ ಯಾವುದೇ ಕಳಂಕ ಹೊತ್ತಿಲ್ಲ ಎಂದರು.

ರಾಜಕಾರಣದ ಶುದ್ಧೀಕರಣದ ದೃಷ್ಟಿಯಿಂದ ಹೋರಾಟದ ಜತೆಗೆ ವನ್ನು ಮಾಡಿದ್ದೇನೆ. ಮೊದಲು ನಮ್ಮ ಅರಳಕುಪ್ಪೆ ಗ್ರಾಮದ ಕೃಷಿ ವ್ಯವಸಾಯೋತ್ಪನ್ನ ಸಹಕಾರ ಸಂಘ ಅಧ್ಯಕ್ಷನಾಗಿ ನಷ್ಟದಲ್ಲಿದ್ದ ಸಂಘವನ್ನು ಅಭಿವೃದ್ಧಿಪಡಿಸಿ ಡಿವಿಡೆಂಡ್‌ ಫಂಡ್‌ ಕೊಡಿಸಿದೆ. ಆ ಬಳಿಕ ನನ್ನನ್ನು ಜನ ಜಿಪಂ ಸದಸ್ಯನಾಗಿ ಆಯ್ಕೆಮಾಡಿದರು. ಯಾವುದೇ ಭ್ರಷ್ಟಾಚಾರ ಹಾಗೂ ಕಳಂಕವಿಲ್ಲದೆ ಜನರ ಸೇವೆ ಮಾಡಿದ್ದೇನೆ ಎಂದರು.

ತಾಲೂಕಿನ ಸೀತಾಪುರ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಮಾಡಲಾಗುತ್ತಿರುವುದೇನೋ ಸರಿ. ಆದರೆ, ಸೇತುವೆಯ ಸಂಪರ್ಕದ ರಸ್ತೆಗೆ ಹಲವಾರು ರೈತರ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಜಮೀನು ಕಳೆದುಕೊಂಡು ರೈತರ ಪರಿಹಾರಕ್ಕಾಗಿ ರೈತ ಸಂಘ ಹೋರಾಟ ನಡೆಸಿದ ಫಲವಾಗಿ ಗುಂಟೆಗೆ 1.20ಲಕ್ಷ ರು. ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಆದರೆ, ಸಿ.ಎಸ್‌.ಪುಟ್ಟರಾಜು ಒಬ್ಬ ಜವಾಬ್ದಾರಿ ಶಾಸಕರಾಗಿ ಜಮೀನು ಕಳೆದುಕೊಂಡ ರೈತರ ಪರಿಹಾರಕ್ಕಾಗಿ ಏನು ಮಾಡಲಿಲ್ಲ ಎಂದು ದೂರಿದರು.

ಪುಟ್ಟರಾಜು ಶಾಸಕರಾಗಿದ್ದಾಗ ಪಟ್ಟಣದಲ್ಲಿನ ಒಳಚರಂಡಿ ಕಲುಷಿತ ನೀರಿನ ಶುದ್ಧೀಕರಣ ಘಟಕದ ನಿರ್ಮಾಣಕ್ಕೆ ರೈತರ ಜಮೀನಿಗೆ ಗುಂಟೆಗೆ ಕೇವಲ 7 ಸಾವಿರ ರು. ನಿಗಧಿಪಡಿಸಿದ್ದರು. ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯನವರ ಹೋರಾಟ ಮತ್ತು ಪ್ರಯತ್ನದಿಂದಾಗಿ ಲೋಕ ಅದಾಲತ್‌ ಹಾಗೂ ನ್ಯಾಯಾಲಯದಲ್ಲಿ ಬಳಿಕ ಗುಂಟೆಗೆ 1.20 ರು. ನಿಗಧಿಯಾಗಿದೆ. ಇದು ರೈತರ ಹಿತಕಾಯುವ ಕೆಲಸವಲ್ಲದೆ ಮತ್ತೇನು ಎಂದರು.

ರೈತರ ಬಗ್ಗೆ ಒಮ್ಮೆಯೂ ಸದನದಲ್ಲಿ ಚಕಾರವೆತ್ತದ ಪುಟ್ಟರಾಜು, ರೈತ ಸಂಘದವರು ಅಭಿವೃದ್ದಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳುವುದು ಎಷ್ಟುಸರಿ ಎಂದು ಪ್ರಶ್ನಿಸಿದರು.

ಪಿಎಸ್‌ಎಸ್‌ಕೆಗೆ ಜೆಡಿಎಸ್‌ ಆಡಳಿತ ಮಂಡಳಿ ರಾಮಾಂಜೇಗೌಡರು ಅಧ್ಯಕ್ಷರಾಗಿದ್ದಾಗ ನಷ್ಟಕ್ಕೊಳಗಾಯಿತು. ಈ ವೇಳೆ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯನವರಿಗೆ ಒಪ್ಪಿಗೆ ಇಲ್ಲದಿದ್ದರೂ ರೈತ ಸಂಘ ಆಢಳಿತಕ್ಕೆ ಬಂದಿತು. ಕಾರ್ಖಾನೆ ಪುನಶ್ವೇತನಗೊಳ್ಳಲೇ ಇಲ್ಲ. ಬಳಿಕ ಪುಟ್ಟರಾಜು ಶಾಸಕರ ಅವಧಿಯಲ್ಲಿ ಎಚ….ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕಾರ್ಖಾನೆಯನ್ನು ಖಾಸಗಿ ಕೊಠಾರಿ ಸಂಸ್ಥೆಗೆ ವಹಿಸಿತ್ತು. ಈ ಸಂಸ್ಥೆಗೆ 30 ವರ್ಷಗಳ ಗುತ್ತಿಗೆ ಒಪ್ಪಂದಕ್ಕೆ ಶಾಸಕ ಪುಟ್ಟರಾಜು ಒಪ್ಪಿ ಸಹಿ ಹಾಕಿದರು.

ಬಳಿಕ ಕೊಠಾರಿ ಸಂಸ್ಥೆ ಕಾರ್ಖಾನೆಯನ್ನು ಸಮರ್ಪಕವಾಗಿ ನಡೆಸದೆ ರಾತ್ರೋರಾತ್ರಿ ಕಾರ್ಖಾನೆಯ ಯಂತ್ರೋಪಕರಣಗಳನ್ನು ಕದ್ದೋಯ್ದು ಪಲಾಯನ ಮಾಡಿತು. ನಂತರದಲ್ಲಿ ರೈತ ನಾಯಕ ಪುಟ್ಟಣ್ಣಯ್ಯನವರ ಹೋರಾಟದಿಂದಾಗಿ ಆಗಿನ ಸಿಎಂ ಬಿ.ಎಸ್‌.ಯಡಿಯೂರಪ್ಪನವರು 50 ಕೋಟಿಗೂ ಅಧಿಕ ಅನುದಾನ ನೀಡಿ ಕಾರ್ಖಾನೆಯನ್ನು ಪುನಶ್ವೇತನಗೊಳಿಸಿದರು ಎಂದರು.

ಈಗ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್‌ ಸರ್ಕಾರದಿಂದ ಒಪ್ಪಂದ ಮಾಡಿಕೊಂಡಿಲ್ಲ. ಒಪ್ಪಂದಕ್ಕೆ ಸಹಿ ಕೂಡ ಹಾಕಿಲ್ಲ. ಆದರೆ ಶಾಸಕ ಸಿ.ಎಸ್‌.ಪುಟ್ಟರಾಜು ಮೌನವಾಗಿರುವುದೇಕೆ? ಶಾಸಕರಿಗೆ ಜವಾಬ್ದಾರಿ ಬೇಡವೇ ಎಂದು ಪ್ರಶ್ನಿಸಿದರು.

ಸ್ವ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆ ಸ್ಥಾಪನೆ:

ತಮ್ಮ ತಂದೆಯ ಪಿತ್ರಾರ್ಜಿತ 25 ಎಕರೆಯಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದೇನೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳುತ್ತಿದ್ದಾರೆ. ಆದರೆ 2018ರ ವಿಧಾನ ಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ತಮಗೆ 6.5 ಜಮೀನಿದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಹಾಗಾದರೆ ಈ 25 ಎಕರೆ ಎಲ್ಲಿಂದ ಬಂತು ಎಂಬುದನ್ನು ಪುಟ್ಟರಾಜು ಉತ್ತರಿಸುವರೇ ಎಂದು ಹರಿಹಾಯ್ದರು.

ಪಾಂಡವಪುರ ಪ್ರಥಮ ದರ್ಜೆ ಕಾಲೇಜು ಕೆ.ಎಸ್‌.ಪುಟ್ಟಣ್ಣಯ್ಯನವರು ಶಾಸಕರಾಗಿದ್ದಾಗ ನ್ಯಾಕ್‌ ಬಿ ಮಾನ್ಯತೆ ಪಡೆಯಿತು. ಹೀಗಾಗಿ ಕಾಲೇಜಿಗೆ ಪಟ್ಟಣದ ಹೇಮಾವತಿ ಬಡಾವಣೆ ಬಳಿಯ ಐಟಿಐ ಕಾಲೇಜು ಸಮೀಪದಲ್ಲಿ 8.5 ಎಕರೆ ಸರ್ಕಾರ ಜಾಗವನ್ನು ಶಾಸಕ ಪುಟ್ಟಣ್ಣಯ್ಯ ಮಂಜೂರಾತಿ ಮಾಡಿಸಿ ಕಾಲೇಜು ಕಟ್ಟಡಕ್ಕಾಗಿ ಸುಮಾರು ರೂ.2.5 ಕೋಟಿ ಮಂಜೂರು ಮಾಡಿಸಲಾಯಿತು ಎಂದರು.

ಪುಟ್ಟರಾಜು ಶಾಸಕರಾಗಿ 5 ವರ್ಷಗಳ ಕಳೆದರು ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಿಸುವ ಕಾರ್ಯ ಮಾಡಿಲ್ಲ. ಹಣ ಕೂಡ ಖರ್ಚು ಮಾಡಿಲ್ಲ. ತಮ್ಮ ಒಡೆತನದ ಶಿಕ್ಷಣ ಸಂಸ್ಥೆಯ ಅಭಿವೃದ್ದಿ ಬಿಟ್ಟರೆ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ದಿಯ ಕಡೆ ಯಾವ ಗಮನ ಹರಿಸುತ್ತಿಲ್ಲ. ಪುಟ್ಟರಾಜು ತಮ್ಮ ಎಸ್ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ಮತ್ತು ಲಕ್ಷಾಂತರ ಶುಲ್ಕ ಪಡೆಯುತ್ತಿದ್ದಾರೆ. ಇದು ಶಿಕ್ಷಣದ ಸೇವೆಯೋ ಇಲ್ಲ ಶಿಕ್ಷಣದ ಹೆಸರಿನಲ್ಲಿ ಹಣ ಮಾಡುವ ಸೇವೆಯೋ ಎಂದು ಪ್ರಶ್ನಿಸಿದರು.

ಸರ್ವೋದಯ ಕರ್ನಾಟಕದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯನವರ ಜನಮನ ದರ್ಶನ ಪಾದಯಾತ್ರೆಗೆ ಬಾರಿ ಜನ ಬೆಂಬಲ ವ್ಯಕ್ತವಾಗುತ್ತಿರುವುದಕ್ಕೆ ಹತಾಶೆಗೊಂಡು ಸೋಲಿನ ಭೀತಿಯಿಂದ ಶಾಸಕರು ಈ ರೀತಿ ನನ್ನ ಮೇಲೆ ಹಾಗೂ ರೈತ ಸಂಘದ ಮೇಲೆ ಇಲ್ಲಸಲ್ಲದ ಟೀಕೆಯಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.

ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಕಾರ್ಯದರ್ಶಿ ವಿಜಯಕುಮಾರ್‌, ಮುಖಂಡರಾದ ಉಮಾಶಂಕರ್‌ , ವೈ.ಎಚ್‌.ಕೊಪ್ಪಲು ಮಂಜುನಾಥ್‌, ರಘು , ಅರಳಕುಪ್ಪೆ ರಾಮೇಗೌಡ, ಸೋಮಶೇಖರ್‌, ಕೃಷ್ಣಪ್ಪ, ಶ್ರೀನಿವಾಸ್‌, ಮಹದೇವು, ಎ.ಎಂ.ರಾಮೇಗೌಡ, ಬಂಡಿರಾಮೇಗೌಡ ಇತರರು ಇದ್ದರು

click me!