ಈ ಮೀನು ಅದೆಷ್ಟು ಕೆಟ್ಟ ವಾಸನೆ! ಇದರ ಗ್ಯಾಸ್‌ನಿಂದ 4 ದಿನದಲ್ಲಿ ಐವರು ಮೀನುಗಾರರು ಸಾವು!

Kannadaprabha News   | Kannada Prabha
Published : Nov 01, 2026, 05:58 AM IST
Chaman fish waste poisonous gas

ಸಾರಾಂಶ

Chaman fish waste poisonous gas: ಕಾರವಾರದ ಮುದಗಾ ಬಂದರಿನಲ್ಲಿ ಚಮನ್ ಮೀನಿನ ತ್ಯಾಜ್ಯದಿಂದ ಉತ್ಪತ್ತಿಯಾಗಿದ್ದ ವಿಷಾನಿಲ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಬೋಟ್‌ನ ಸ್ಟೋರೇಜ್ ವಿಭಾಗ ಸ್ವಚ್ಛಗೊಳಿಸಲು ಇಳಿದಾಗ ಈ ದುರಂತ ಸಂಭವಿಸಿದ್ದು, ಎನ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ ನಡೆಸಿದೆ.

ಕಾರವಾರ (ನ.1): ಚಮನ್‌ ತಳಿಯ ಮೀನಿನ ತ್ಯಾಜ್ಯ ಸಂಗ್ರಹಿಸುವ ವೇಳೆ ಅದರ ವಿಷಾನಿಲ (ಹೈಡ್ರೋಜನ್‌ ಸಲ್ಫೈಡ್‌) ಸೇವಿಸಿ ಮತ್ತಿಬ್ಬರು ಕಾರ್ಮಿಕರು ಮೃತಪಟ್ಟಿರುವ ಆಘಾತಕಾರಿ ಘಟನೆಯು ಕಾರವಾರ ಸಮೀಪ ಮುದಗಾ ಬಂದರಿನಲ್ಲಿ ಶನಿವಾರ ನಡೆದಿದೆ. ಅ.27ರ ಮಂಗಳವಾರ ಗೋಕರ್ಣದ ತದಗಾ ಬಂದರಿನಲ್ಲಿಯೂ ಮೂವರು ಕಾರ್ಮಿಕರು ಇದೇ ಮೀನಿನ ವಿಷಾನಿಲದಿಂದಾಗಿ ಮೃತಪಟ್ಟು, ಓರ್ವ ತೀವ್ರವಾಗಿ ಅಸ್ವಸ್ಥರಾಗಿದ್ದರು.

ಅ.29ರಂದು ಉಡುಪಿ ಜಿಲ್ಲೆಯ ಮಲ್ಪೆಯಿಂದ ಮೂಕಾಂಬಿಕಾ ಹೆಸರಿನ ಬೋಟ್‌ 35 ಕಾರ್ಮಿಕರೊಂದಿಗೆ ಮೀನುಗಾರಿಕೆಗೆ ತೆರಳಿತ್ತು. ಬೋಟ್‌ನಲ್ಲಿ ತಾರ್ಲೆ ಹಾಗೂ ಚಮನ್ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆತಿದ್ದವು. ಮೀನುಗಳು ಹಾಳಾಗುವ ಸಾಧ್ಯತೆಯಿದ್ದಿದ್ದರಿಂದ ಮಲ್ಪೆಗೆ ಮರಳುವ ಬದಲು ಕಾರವಾರದ ಮುದಗಾ ಬಂದರಿಗೆ ತಂದು ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮೀನುಗಳನ್ನು ಬಂದರಿನಲ್ಲಿ ಇಳಿಸಲಾಗಿತ್ತು.

ಬಳಿಕ ಬೋಟ್‌ನ ಸ್ಟೋರೇಜ್ ವಿಭಾಗದಲ್ಲಿದ್ದ ಚಮನ್ ಮೀನಿನ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಐವರು ಕಾರ್ಮಿಕರು ಒಳಗೆ ಇಳಿದಿದ್ದಾರೆ. ಈ ವೇಳೆ ಕೊಳೆತ ಮೀನಿನ ತ್ಯಾಜ್ಯದಿಂದ ಉತ್ಪತ್ತಿಯಾಗಿದ್ದ ಹೈಡ್ರೋಜನ್ ಸಲ್ಫೈಡ್ ಅನಿಲ ಸೇವಿಸಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಘಟನೆಯಲ್ಲಿ ಒಡಿಶಾ ಮೂಲದ ಪುರಂದರ್‌ ಬಿಸರ(21) ಹಾಗೂ ಆಕಾಶ್ ನಾಯ್ಕ(24) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಡಿಶಾ ಮೂಲದ ಲಾಲಿಂದರ್‌ ಧ್ರುವ (41) ಸ್ಥಿತಿ ಗಂಭೀರವಾಗಿದ್ದು, ರಾಬುಲ್ ಸೇರಿದಂತೆ ಮತ್ತಿಬ್ಬರು ಕಾರ್ಮಿಕರೂ ಅಸ್ವಸ್ಥರಾಗಿದ್ದಾರೆ. ಮೂವರನ್ನು ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

30 ಜನರ ಎನ್‌ಡಿಆರ್‌ಎಫ್‌ ತಂಡ:

ಘಟನೆ ಬೆಳಕಿಗೆ ಬಂದ ತಕ್ಷಣ ಪೊಲೀಸರು ಮತ್ತು 30 ಜನರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ಸ್ಥಳಕ್ಕೆ ದೌಡಾಯಿಸಿ, ಮಲ್ಟಿ ಡಿಟೆಕ್ಟರ್‌ ಯಂತ್ರದ ಮೂಲಕ ಬೋಟ್‌ನ ಸ್ಟೋರೇಜ್‌ ವಿಭಾಗದ ಅನಿಲ ಸಾಂದ್ರತೆಯನ್ನು ಪರಿಶೀಲಿಸಿದೆ.

ಈ ವೇಳೆ ಹೈಡ್ರೋಜನ್ ಸಲ್ಫೈಡ್ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಅಕ್ಕಪಕ್ಕದ ಬೋಟ್‌ಗಳ ಸ್ಟೋರೇಜ್ ವಿಭಾಗಗಳನ್ನೂ ಪರಿಶೀಲಿಸಿದಾಗ 3 ಬೋಟ್‌ಗಳಲ್ಲಿ ಶೇ.50ರಷ್ಟುಸಾಂದ್ರತೆ ಇರುವುದು ಪತ್ತೆಯಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೋಟ್‌ಗಳನ್ನು ಪ್ರತ್ಯೇಕಿಸಿ, ಅನಿಲವನ್ನು ಸುರಕ್ಷಿತವಾಗಿ ಹೊರಹಾಕುವ ಕಾರ್ಯಾಚರಣೆ ನಡೆಸಲಾಯಿತು.

ಮೀನುಗಳ ಸ್ಟೋರೇಜ್‌ ಘಟಕದ ಬಾಗಿಲು ತೆರೆದಿಟ್ಟು ಅನಿಲದ ಸಾಂದ್ರತೆ ಕಡಿಮೆಯಾದ ಮೇಲೇ ಇಳಿಯಬೇಕೆಂಬ ನಿಯಮಾವಳಿ ಇದ್ದರೂ ಸಹ ನಿಯಮವನ್ನು ಬದಿಗೊತ್ತಿ ಇಳಿದಿದ್ದೇ ಸಾವಿಗೆ ಕಾರಣ ಎನ್ನಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಕುಮಟಾ ತಾಲೂಕಿನ ತದಡಿ ಬಂದರಿನಲ್ಲಿಯೂ ಇದೇ ರೀತಿಯ ವಿಷಗಾಳಿ ದುರಂತ ಸಂಭವಿಸಿ ಮೂವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ಮುದಗಾ ಬಂದರಿನಲ್ಲಿನ ಇಬ್ಬರ ಸಾವು ಸೇರಿ ಮೂರು ದಿನಗಳ ಅಂತರದಲ್ಲಿ ಒಟ್ಟು ಐವರು ಮೀನುಗಾರರು ವಿಷಗಾಳಿಗೆ ಬಲಿಯಾದಂತಾಗಿದೆ.

ವಿಷಾನಿಲದ ಮೀನು

ಚಮನ್‌ ತಳಿಯ ಮೀನುಗಳು ಪಶ್ಚಿಮ ಪೆಸಿಫಿಕ್‌ ಸಾಗರ, ಹಿಂದೂಮಹಾ ಸಾಗರ ಮತ್ತು ಅರಬ್ಬೀ ಸಮುದ್ರದಲ್ಲಿ ಕಾಣಸಿಗುತ್ತವೆ. ವಿಶೇಷವಾಗಿ ಹೊನ್ನಾವರ, ಕಾರವಾರದ ಬಂದರುಗಳಲ್ಲಿ ಇವುಗಳನ್ನು ಹಿಡಿಯಲಾಗುತ್ತದೆ. ಇವುಗಳು ಸತ್ತ ಬಳಿಕ ಹೈಡ್ರೋಜನ್ ಸಲ್ಫೈಡ್ ಸೇರಿ ಕೆಲ ವಿಷಾನಿಲಗಳನ್ನು ಬಿಡುಗಡೆ ಮಾಡಲಿವೆ.

PREV
Read more Articles on
click me!

Recommended Stories

HMT ಇತಿಹಾಸಕ್ಕೆ ಹೊಸ ಕಳೆ; ವಾಚ್‌ಗೆ ನಾಡಿನ ಅಸ್ಮಿತೆ 'ಗಂಡಭೇರುಂಡ'ದ ಸ್ಪರ್ಶ, ಎಚ್‌ಡಿಕೆ ಸಾಥ್!
'ಯಾರೀ ಅದು ಕಮಿಷನರ್?' ಈ ಕುಮಾರಸ್ವಾಮಿಯನ್ನ ಟಚ್ ಮಾಡೋಕೆ ಆಗಲ್ಲ-HDK ವಾಗ್ದಾಳಿ