* ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಾಶೀರಾಯ ವೀರ ಮರಣ
* ಇಂದು ಬೆಳಗಾವಿಗೆ ಪಾರ್ಥಿವ ಶರೀರ
* ಸ್ವಗ್ರಾಮದಲ್ಲಿಯೇ ಸಕಲ ಸರ್ಕಾರಿ ಗೌರವದ ಮೂಲಕ ಅಂತ್ಯಕ್ರಿಯೆ
ಬಸವನಬಾಗೇವಾಡಿ(ಜು.03): ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ವಿರುದ್ಧ ಭದ್ರತಾ ಪಡೆಗಳು ನಡೆಸಿದ ಕಾಳಗದಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಕಾಶಿರಾಯ ಶಂಕರೆಪ್ಪ ಬೊಮ್ಮನಹಳ್ಳಿ (44) ಅವರು ವೀರಮರಣ ಹೊಂದಿದ್ದಾರೆ.
ಪುಲ್ವಾಮಾದಲ್ಲಿ ಶುಕ್ರವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ಉಗ್ರರೊಂದಿಗೆ ನಡೆದ ಗುಂಡಿನ ಕಾದಾಟದಲ್ಲಿ ಯೋಧ ಕಾಶಿರಾಯ ಅವರು ಹೋರಾಡುತ್ತಲೇ ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಕಾಶಿರಾಯ ಅವರು 44 ಆರ್‌ಆರ್ (ರಜಪೂತ್- ಪೆರೆಂಟ್ ಯುನಿಟ್- 38 ಅಸಾಲ್ಟ್ ಎಂಜಿನಿಯರ್ ರೆಜಿಮೆಂಟ್)ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
undefined
ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಜಿಲ್ಲೆಯ ರಾಜಪೊರಾ ಸಮೀಪದ ಹಂಜಿನಿ ಹಳ್ಳಿಯಲ್ಲಿ ಕಾರ್ಯಾಚರಣೆಯಲ್ಲಿ ನಡೆಸಿದ್ದವು. ಉಗ್ರರ ಅಡಗು ತಾಣವನ್ನು ಸುತ್ತುವರಿದಿದ್ದ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿಗರೆದಿದ್ದಾರೆ. ಆಗ ಯೋಧರು ಕೂಡ ಪ್ರತ್ಯುತ್ತರ ನೀಡಿದ್ದಾರೆ. ಈ ಘರ್ಷಣೆಯಲ್ಲಿ ಯೋಧ ಕಾಶಿರಾಯ ಅವರು ತೀವ್ರವಾಗಿ ಗಾಯಗೊಂಡು ಯೋಧ ವೀರ ಮರಣಹೊಂದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 3 ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿವೆ.
ಪುಲ್ವಾಮಾದಲ್ಲಿ ಎನ್‌ಕೌಂಟರ್: ಯೋಧ ಹುತಾತ್ಮ, ಮುಂದುವರೆದ ಕಾರ್ಯಾಚರಣೆ!
2005ರಲ್ಲಿ ಸೇರಿದ್ದ ಕಾಶಿರಾಯ ಅವರು ಕಾಶ್ಮೀರ, ಪಂಜಾಬ್ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಮೃತ ಯೋಧನಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ-ತಾಯಿ, ಇಬ್ಬರು ಸಹೋದರರು ಇದ್ದಾರೆ. ಪಾರ್ಥಿವ ಶರೀರ ಶನಿವಾರ ಜಮ್ಮು-ಕಾಶ್ಮೀರದಿಂದ ವಾಯುಪಡೆ ವಿಮಾನದಲ್ಲಿ ಬೆಳಗಾವಿಗೆ ಆಗಮಿಸಲಿದೆ. ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಮುಂದಿನ ವಾರ ಬರಬೇಕಿತ್ತು:
ಯೋಧ ಕಾಶಿರಾಯ ಅವರು ತಮ್ಮ ಸ್ವಗ್ರಾಮವಾದ ಉಕ್ಕಲಿಗೆ ಜು.7ರಂದು ಒಂದು ತಿಂಗಳ ಕಾಲ ರಜೆ ಮೇರೆಗೆ ಬರುವ ಸಿದ್ಧತೆಯಲ್ಲಿದ್ದರು. ನಂತರದ ದಿನಗಳಲ್ಲಿ ಸೇವೆ ಮಾಡುತ್ತಿರುವ ಜಾಗಕ್ಕೆ ಪತ್ನಿ, ಮಕ್ಕಳನ್ನು ಕರೆದುಕೊಂಡು ಹೋಗುವ ಯೋಚನೆಯಲ್ಲಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ.
ಮಡುಗಟ್ಟಿದ ದುಃಖ:
ಪುಲ್ವಾಮಾದ ಉಗ್ರರ ದಾಳಿಯಲ್ಲಿ ಅಸುನೀಗಿದ ಯೋಧ ಕಾಶಿರಾಯ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಕೇವಲ ಕುಟುಂಬಸ್ಥರು ಮಾತ್ರವಲ್ಲ, ಅವರ ಗ್ರಾಮದ ಜನರು ಕೂಡ ಕಣ್ಣೀರು ಹಾಕುತ್ತಿದ್ದಾರೆ.
ಇಂದು ಅಂತ್ಯಕ್ರಿಯೆ:
ವೀರಮರಣ ಹೊಂದಿರುವ ಕಾಶಿರಾಯ ಬೊಮ್ಮನಹಳ್ಳಿ ಅವರ ಪಾರ್ಥಿವ ಶರೀರವು ಜು.3ರಂದು ಬೆಳಗ್ಗೆ ಜಮ್ಮು ಕಾಶ್ಮೀರದಿಂದ ಏರ್‌ಫೋರ್ಸ್ ವಿಮಾನದಲ್ಲಿ ಬರಲಿದ್ದು, ನೇರವಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ನಂತರ ಅವರ ಸ್ವಗ್ರಾಮವಾದ ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ರಸ್ತೆ ಮಾರ್ಗದ ಮೂಲಕ ಕರೆದೊಯ್ಯಲಾಗುತ್ತಿದೆ. ನಂತರ ಅವರ ಸ್ವಗ್ರಾಮದಲ್ಲಿಯೇ ಸಕಲ ಸರ್ಕಾರಿ ಗೌರವದ ಮೂಲಕ ನೆರವೇರಿಸಲಾಗುತ್ತಿದೆ.
ಹುತಾತ್ಮ ಯೋಧರ ಪಾರ್ಥಿವ ಶರೀರವು ಜು.3 ರಂದು ಬೆಳಗ್ಗೆ ಬೆಳಗಾವಿಗೆ ಸೇನೆಯ ವಿಮಾನದ ಮೂಲಕ ಬರಲಿದೆ. ನಂತರ ಉಕ್ಕಲಿ ಗ್ರಾಮಕ್ಕೆ ಬರುತ್ತದೆ ಎಂದು ತಹಸೀಲ್ದಾರ್ ಎಂ.ಎನ್.ಬಳಿಗಾರ ತಿಳಿಸಿದ್ದಾರೆ.
ನಮ್ಮ ಬೊಮ್ಮನಹಳ್ಳಿ ಮನೆತನದಲ್ಲಿ ಇವನೊಬ್ಬ ನೌಕರಿಗೆ ಸೇರಿದ್ದು, ನಮ್ಮೆಲ್ಲರಿಗೂ ಹೆಮ್ಮೆಯಾಗಿತ್ತು. ಜು.7 ರಂದು ಗ್ರಾಮಕ್ಕೆ ಒಂದು ತಿಂಗಳ ಕಾಲ ರಜೆ ಮೇರೆಗೆ ಬರುವವನಿದ್ದ. ಈಗ ಇಂತಹ ಘಟನೆಯಾಗಿ ಅವನು ಹುತಾತ್ಮನಾಗಿರುವುದು ನಮಗೆ ತುಂಬಾ ದುಃಖವಾಗಿದೆ. ರಜೆ ಮುಗಿದ ನಂತರ ಅವನು ಪತ್ನಿ, ಮಕ್ಕಳನ್ನು ಮುಂದೆ ಸೇವೆ ಸಲ್ಲಿಸುವ ಸ್ಥಳಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದನು ಎಂದು ಹುತಾತ್ಮ ಯೋಧ ಕಾಶೀರಾಯ ಬೊಮ್ಮನಹಳ್ಳಿ ಚಿಕ್ಕಪ್ಪ ನಿಂಗಪ್ಪ ಬೊಮ್ಮನಹಳ್ಳಿ ಹೇಳಿದ್ದಾರೆ.