ಮಳಿಗೆಗಳ ಮೇಲೆ ಸುಧಾಕರ್‌ ದಾಳಿ: ಪ್ಲಾಸ್ಟಿಕ್‌ ಬಳಕೆಗೆ ನೋಟಿಸ್‌

By Web DeskFirst Published Aug 29, 2019, 8:22 AM IST
Highlights

ಪ್ಲಾಸ್ಟಿಕ್‌ ನಿಷೇಧವಿದ್ದರೂ ಬಳಕೆ ಮಾಡುತ್ತಿದ್ದ ಹಲವು ಮಳಿಗೆಗಳ ಮೇಲೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್‌ ದಾಳಿ ನಡೆಸಿ, ನೋಟಿಸ್ ನೀಡಲಾಗಿದೆ.

ಬೆಂಗಳೂರು [ಆ.29]: ಪ್ಲಾಸ್ಟಿಕ್‌ ನಿಷೇಧವಿದ್ದರೂ ಬಳಕೆ ಮಾಡುತ್ತಿದ್ದ ನಗರದ ಹಲವು ಮಳಿಗೆಗಳ ಮೇಲೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್‌ ದಾಳಿ ನಡೆಸಿದ್ದು, ಮಳಿಗೆಗಳ ಮಾಲಿಕರಿಗೆ ನೋಟಿಸ್‌ ಜಾರಿ ಮಾಡಿದೆ.

ಬುಧವಾರ ಬೆಳಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ನೇತೃತ್ವದ ತಂಡ ಸದಾಶಿವನಗರದ ನೇಚರ್‌ ಬ್ಯಾಸ್ಕೆಟ್‌ ಔಟ್‌ಲೆಟ್‌ ಮೇಲೆ ದಿಢೀರ್‌ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್‌ ಬ್ಯಾಗ್‌ಗಳಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಕೊಡುತ್ತಿದ್ದ ಮತ್ತು ಹಣ್ಣುಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಇಟ್ಟಿದ್ದ ದೃಶ್ಯ ಕಂಡು ಗರಂ ಆದ ಅಧ್ಯಕ್ಷರು, ಪ್ಲಾಸ್ಟಿಕ್‌ ಬಳಕೆ ಮಾಡಿದ ನೇಚರ್‌ ಬ್ಯಾಸ್ಕೆಟ್‌ ಮತ್ತು ಅದರ ಏಳು ಶಾಖೆಗಳಿಗೂ ನೋಟಿಸ್‌ ನೋಡುವಂತೆ ಆದೇಶಿಸಿದರು.

ಅದೇ ರೀತಿ ವೈಯಾಲಿಕಾವಲ್‌ನ ನಾಮಧಾರಿ ಫ್ರೆಶ್‌ ಶಾಪ್‌ಗಳ ಮೇಲೂ ದಾಳಿ ನಡೆದಿದ್ದು, ಇಲ್ಲಿಯೂ ಪ್ಲಾಸ್ಟಿಕ್‌ ಬಳಕೆ ಯಥೇಚ್ಛವಾಗಿ ನಡೆಯುತ್ತಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷರು, ದೇಶದಲ್ಲಿ ಕ್ಯಾನ್ಸರ್‌ ಹೆಚ್ಚಲು ಪ್ಲಾಸ್ಟಿಕ್‌ ಬಳಕೆ ಕಾರಣ. ಪ್ಲಾಸ್ಟಿಕ್‌ ಬಳಕೆ ನಂತರ ಎಲ್ಲೆಂದರಲ್ಲಿ ಬಿಸಾಡುವುದರಿಂದ ಪ್ರಾಣಿಗಳು ಅದನ್ನು ತಿಂದು ಸಾವನ್ನಪ್ಪಲು ಕಾರಣವಾಗುತ್ತಿದೆ. ನಿಮಗೆ ವಹಿವಾಟು ಆಗ್ಬೇಕು, ದುಡ್ಡು ಮಾಡಬೇಕು. ಅದಕ್ಕೆ ಪ್ಲಾಸ್ಟಿಕ್‌ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದಿರಾ ಎಂದು ಕಿಡಿಕಾರಿದರು. ಅಲ್ಲದೇ ಕಾನೂನು ಉಲ್ಲಂಘಿಸಿ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿರುವ ನಾಮದಾರಿ ಫ್ರೆಶ್‌ ಶಾಪಿನ ಎಲ್ಲ 27 ಅಂಗಡಿಗಳನ್ನು ಬಂದ್‌ ಮಾಡಿಸುವಂತೆ ಸ್ಥಳದಲ್ಲಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಆದೇಶಿಸಿದರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ದೇಶದಲ್ಲಿ ಪ್ಲಾಸ್ಟಿಕ್‌ ಅನ್ನು ನಿಷೇಧ ಮಾಡುವಂತೆ ಘೋಷಣೆ ಮಾಡಿದ್ದಾರೆ. ಪ್ಲಾಸ್ಟಿಕ್‌ನಿಂದ ಏನೆಲ್ಲಾ ಅನಾಹುತ ಆಗುತ್ತದೆ ಎಂದು ಜನರಿಗೆ ಗೊತ್ತಿದ್ದರೂ ಪ್ಲಾಸ್ಟಿಕ್‌ ಬಳಕೆ ನಿಂತಿಲ್ಲ. ಪ್ರತಿಷ್ಠಿತ ಕಂಪನಿಗಳು ನಡೆಸುವ ಉದ್ದಿಮೆ, ಮಳಿಗೆಗಳಲ್ಲಿ ಹಣ್ಣುಗಳು, ತರಕಾರಿಗಳ ಮೇಲೆ ಪ್ಲಾಸ್ಟಿಕ್‌ ಬಳಸಿದ್ದಾರೆ. ಈ ಮೂಲಕ ಕಾನೂನು ಉಲ್ಲಂಘಿಸಿದ್ದಾರೆ. ಆದ್ದರಿಂದ ದಾಳಿ ನಡೆಸಿದ್ದು ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಾಗ್ಗೆ ಭೇಟಿ ಕೊಟ್ಟು ಪ್ಲಾಸ್ಟಿಕ್‌ ಬಳಕೆ ಮಾಡಿದ ಅಂಗಡಿ ಅಥವಾ ಮಳಿಗೆಗಳ ಪರವಾನಗಿ ರದ್ದು ಮಾಡಬೇಕಿತ್ತು. ಈ ವಲಯದಲ್ಲಿ ಬರುವ ಅಧಿಕಾರಿಗಳ ಮೇಲು ಮೊಕದ್ದಮೆ ಹೂಡುತ್ತೇವೆ. ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಮಳಿಗೆ ಹಾಗೂ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು. ಕಾನೂನು ಬಾಹಿರವಾಗಿರುವ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವಂತೆ ಬಿಬಿಎಂಪಿ ಆಯುಕ್ತರಿಗೂ ಸೂಚನೆ ನೀಡಲಾಗುವುದು. ನಗರದ ಬೇರೆ ಬೇರೆ ಕಡೆಗಳಲ್ಲಿ ದಾಳಿ ನಡೆಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಕೆ.ಸುಧಾಕರ್‌ ನೇತೃತ್ವದ ತಂಡ ಸದಾಶಿವನಗರದ ನೇಚರ್‌ಬ್ಯಾಸ್ಕೆಟ್‌ ಔಟ್‌ಲೆಟ್‌ ಮಳಿಗೆಗೆ ದಾಳಿ ನಡೆಸಿದ್ದು, ನಿಷೇಧವಿದ್ದರೂ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿತು.

click me!