Tungabhadra Dam: ಟಿಬಿ ಡ್ಯಾಂನಲ್ಲಿ ಬರೀ 3 ಟಿಎಂಸಿ ನೀರು; ಕುಡಿಯುವ ನೀರಿಗೆ ಪರದಾಟ, ರೈತರಿಗೂ ಸಂಕಷ್ಟಸಾಧ್ಯತೆ!
ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಕೇವಲ 3 ಟಿಎಂಸಿಯಷ್ಟುನೀರು ಸಂಗ್ರಹವಿದ್ದು, ಜಲಾಶಯ ನೆಚ್ಚಿರುವ ರೈತರಲ್ಲಿ ಆತಂಕ ಮನೆ ಮಾಡಿದೆ. ಜತೆಗೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ (ಏ.21) : ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಕೇವಲ 3 ಟಿಎಂಸಿಯಷ್ಟುನೀರು ಸಂಗ್ರಹವಿದ್ದು, ಜಲಾಶಯ ನೆಚ್ಚಿರುವ ರೈತರಲ್ಲಿ ಆತಂಕ ಮನೆ ಮಾಡಿದೆ. ಜತೆಗೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ.
ತುಂಗಭದ್ರಾ ಜಲಾಶಯ(Tunga bhadra dam) ಈ ಬಾರಿ ತಳಕಂಡಿದ್ದು, ಹೈದರಾಬಾದ್ ಕರ್ನಾಟಕ ಪ್ರದೇಶ(Hyderabad Karnataka region)ದ ನಾಲ್ಕು ಜಿಲ್ಲೆಗಳು ಸೇರಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬೇಸಿಗೆಯಲ್ಲಿ ಕೃಷಿಗೆ ಹಾಗೂ ಕುಡಿಯುವ ನೀರಿಗೆ ತತ್ವಾರ ಎದುರಿಸುವಂತಾಗಿದೆ.
ಕುಡಿಯುವ ನೀರಿಗಾಗಿ ಹಾಹಾಕಾರ: ಚುನಾವಣೆ ಬಹಿಷ್ಕರಿಸಲು ಮಲಸಿಂಗನಹಳ್ಳಿ ಗ್ರಾಮಸ್ಥರು ನಿರ್ಧಾರ
ಜಿಲ್ಲೆಯಲ್ಲಿ ದಿನೇ ದಿನೇ 40 ಸೆಲ್ಸಿಯಸ್‌ಗೂ ಹೆಚ್ಚು ತಾಪಮಾನ ಹೆಚ್ಚಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ಗುರುವಾರ 3.071 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ನೀರಿನ ಒಳಹರಿವು ಪ್ರಮಾಣ ಋುಣಾತ್ಮಕವಾಗಿದೆ. ಒಂದೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೆ, ಇನ್ನೊಂದೆಡೆ ಕೃಷಿ ಭೂಮಿಗಳಲ್ಲಿ ಬೆಳೆಗಳಿಗೆ ನೀರಿಲ್ಲದೇ ರೈತರು ಪರದಾಡುವಂತಾಗಿದೆ.
ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು , ಸದ್ಯ 3.071 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯ ನೆಚ್ಚಿರುವ ಲಕ್ಷಾಂತರ ರೈತರು ಈ ಬಾರಿ ಎರಡನೇ ಬೆಳೆಯ ಫಸಲು ಕೊನೆ ಹಂತದ ಸಿದ್ಧತೆಯಲ್ಲಿದ್ದಾರೆ. ಆದರೆ ಜಲಾಶಯದಿಂದ ಕಾಲುವೆಗಳಿಗೆ ಈಗಾಗಲೇ ನೀರು ನಿಲ್ಲಿಸಲಾಗಿದೆ. ರೈತರು ಬೆಳೆದ ಬೆಳೆಗಳಿಗೆ ನೀರು ಪೂರೈಕೆ ಆಗುವ ಕನಸಾಗಿದೆ.
ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಆಂಧ್ರಪ್ರದೇಶದ ಕರ್ನೂಲು, ಕಡಪ ಮತ್ತು ಅನಂತಪುರ ಜಿಲ್ಲೆಗಳ ಕುಡಿಯುವ ನೀರಿಗೆ ತುಂಗಭದ್ರಾ ಜಲಾಶಯವೇ ಆಧಾರವಾಗಿದೆ. ಲಭ್ಯ 3.071 ಟಿಎಂಸಿ ನೀರಿನಲ್ಲಿ ಫೆಬ್ರವರಿ ಅಂತ್ಯದಿಂದ ಬಿಟಿಪಿಎಸ್‌ಗೆ ನಿತ್ಯ 60 ಕ್ಯುಸೆಕ್ ನೀರು ಬಿಡಲು ರಾಜ್ಯ ಸರ್ಕಾರ ಆದೇಶಿಸಿದೆ. ಅಲ್ಲದೇ ಕುಡಿಯುವ ನೀರಿಗೂ ಮೀಸಲಿರಿಸಬೇಕಿದೆ. ಉಳಿದ ನೀರಿನಲ್ಲಿ 2 ಟಿಎಂಸಿಯಷ್ಟುಡೆಡ್ ಸ್ಟೋರೆಜ್ ನೀರಿದ್ದು, 0.50 ರಿಂದ 0.75 ಟಿಎಂಸಿ ನೀರು ಆವಿಯಾಗುವ ಸಾಧ್ಯತೆಯಿದೆ.
ವಿಜಯನಗರ ಆಳರಸರ ಕಾಲದ ಕಾಲುವೆಗಳಿಗೆ ಒಂದು ಟಿಎಂಸಿ ನೀರು ಬೇಕಿದೆ. ಈ ಕಾಲುವೆಗಳು ಗಂಗಾವತಿ ಹಾಗೂ ಹೊಸಪೇಟೆ ಭಾಗದಲ್ಲಿವೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ದಟ್ಟವಾಗಿದೆ.
ಈ ಜಲಾಶಯದಲ್ಲಿ 2 ಟಿಎಂಸಿ ನೀರು ಉಳಿಸಲೇ ಬೇಕು. ಈ ವೇಳೆಗೆ ಸದ್ಯ ನಾಲ್ಕು ಟಿಎಂಸಿ ನೀರು ಇರಬೇಕಾಗಿತ್ತು. ಆದರೆ ಸದ್ಯ 3 ಟಿಎಂಸಿಗೆ ಬಂದು ನಿಂತಿದೆ. ಜಲಾಶಯದಿಂದ ಒಂದು ಟಿಎಂಸಿ ನೀರು ಹೆಚ್ಚುವರಿಯಾಗಿ ಬಳಕೆಯಾಗಿದೆ. ರೈತರ ಕಾಲುವೆಗಳಿಗೆ ಒಂದು ಟಿಎಂಸಿ ನೀರು ಬೇಕು. ಜಲಾಶಯಕ್ಕೆ ಒಳಹರಿವು ಬರಲು ಇನ್ನೂ ಹಲವು ದಿನಗಳೆ ಕಳೆಯುತ್ತದೆ. ತುಂಗಭದ್ರಾ ಜಲಾಶಯ ಹಾಗೂ ನದಿಪಾತ್ರದ ಜೀವ ವೈವಿಧ್ಯ ಹಾಗೂ ಜಲಚರಗಳಿಗೆ ನೀರು ಉಳಿಸಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.
ತುಂಗಭದ್ರಾ ಜಲಾಶಯದಲ್ಲಿ 105.788 ಟಿಎಂಸಿ ನೀರು ಇರಬೇಕು. ಕಳೆದ ಬಾರಿ ಈ ದಿನಕ್ಕೆ 9 ಟಿಎಂಸಿ ನೀರು ಇತ್ತು. ಆದರೆ ಈ ಬಾರಿ 3.071 ಟಿಎಂಸಿ ನೀರು ಉಳಿದಿದೆ. ಆದ್ದರಿಂದ ಈ ಬಾರಿ ಕೃಷಿಕರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Uttara Kannada: ಶಾಲೆಯಲ್ಲಿ ಕುಡಿಯುವ ನೀರು ಒದಗಿಸಲು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು
ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ರೈತರು ಬೆಳೆದಿರುವ ಎರಡನೇ ಬೆಳೆಗಳಿಗೆ ಸಮರ್ಪಕ ನೀರು ಇಲ್ಲದಂತಾಗಿದೆ. ಜತೆಗೆ ಕುಡಿಯುವ ನೀರಿಗೂ ಬೇಸಿಗೆಯಲ್ಲಿ ಪರದಾಡುವ ಸ್ಥಿತಿ ಇದೆ. ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಬಿಡುವ ಕಾರ್ಯ ಆಗಬೇಕು.
ಸಿ.ಎ. ಗಾಳೆಪ್ಪ, ವಿಜಯನಗರ ಜಿಲ್ಲಾಧ್ಯಕ್ಷರು, ರಾಜ್ಯ ರೈತಸಂಘ ಹಾಗು ಹಸಿರುಸೇನೆ