
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಹಿರಿಯ ನಾಗರಿಕ ಹಾಗೂ ಹಿರಿಯ ಆರ್‌ಎಸ್‌ಎಸ್ ಮುಖಂಡರ ಮನೆಯ ಮೇಲೆ ನಡೆದ ಮಧ್ಯರಾತ್ರಿ ಪೊಲೀಸ್ ದಾಳಿ ಪ್ರಕರಣ ಇದೀಗ ರಾಜ್ಯ ಮಟ್ಟದ ಪ್ರಚಲಿತ ವಿಷಯವಾಗಿದ್ದು, ಈ ಸಂಬಂಧ ಜಿಲ್ಲಾ ಎಸ್ಪಿ ಅರುಣ್ ಅವರಿಗೆ ಕಾರಣ ಕೇಳಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಜೂನ್ 1ರಂದು ಉಪ್ಪಿನಂಗಡಿಯ ಯು.ಜಿ. ರಾಧಾ ಎಂಬವರು ತಮ್ಮ ನಿವಾಸದಲ್ಲಿ ಇದ್ದ ವೇಳೆ, ಯಾವುದೇ ಪೂರ್ವ ಮಾಹಿತಿ ಇಲ್ಲದೇ ಪೊಲೀಸರು ರಾತ್ರಿ ಆಗಮಿಸಿ, ಮನೆಯ ಫೋಟೋ ತೆಗೆದು, ಜಿಪಿಎಸ್ ಮೂಲಕ ಆನ್‌ಲೈನ್ ಅಪ್‌ಲೋಡ್ ಮಾಡಿದ ಘಟನೆ ನಡೆದಿತ್ತು. ಇದನ್ನು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ದಾಳಿ ಎಂದು ಪರಿಗಣಿಸಿದ ಯು.ಜಿ. ರಾಧಾ, ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠ, ಜಿಲ್ಲಾ ಎಸ್ಪಿ ಅರುಣ್ ಅವರಿಗೆ ನೋಟಿಸ್ ಜಾರಿ ಮಾಡಿ, ಮಿಡ್‌ನೈಟ್ ರೈಡ್ ಕುರಿತು ಕಾರಣ ತಿಳಿಸಲು ಸೂಚಿಸಿದೆ. ಹೆಚ್ಚುವರಿಯಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಬಾಹಿರ ಕ್ರಮಗಳು ಮುಂದೆ ನಡೆಯಬಾರದು ಎಂಬಂತೆ ನ್ಯಾಯಾಲಯ ಸೂಕ್ತ ಸೂಚನೆಗಳನ್ನು ನೀಡಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಆದೇಶ ನೀಡಿದೆ.
ದೂರುದಾರ ಯು.ಜಿ. ರಾಧಾ ಹೈಕೋರ್ಟ್ ಮೊರೆ ಹೋಗಿರುವುದರ ಜೊತೆಗೆ, ಅವರು ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಕೂಡ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ. "ಪೊಲೀಸರು ನನ್ನನ್ನು ಆರೋಪಿಯಂತೆ ವರ್ತಿಸಿಕೊಂಡಿದ್ದು, ನನ್ನ ಖಾಸಗಿತನ ಹಾಗೂ ಚರಿತ್ರೆಗೆ ಭಾರಿ ಧಕ್ಕೆಯಾಗಿದೆ. ಇದರಿಂದ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಉಂಟಾಗಿದೆ. ಹೀಗಾಗಿ ಸರ್ಕಾರದಿಂದ ₹20 ಲಕ್ಷ ಪರಿಹಾರ ನೀಡಬೇಕು" ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದರು.
ಈ ನಡುವೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮತ್ತು ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಕೂಡ ದಕ್ಷಿಣ ಕನ್ನಡ ಎಸ್ಪಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿವೆ. ಈ ಮೂಲಕ ಮಿಡ್ ನೈಟ್ ರೈಡ್ ಪ್ರಕರಣವು ಪೊಲೀಸ್ ವ್ಯವಸ್ಥೆಯ ಮಾನವೀಯತೆಯ ವಿರುದ್ಧದ ವರ್ತನೆಯ ಉದಾಹರಣೆಯಾಗಿ ದೇಶದ ಗಮನ ಸೆಳೆದಿದೆ.
ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ನಾಯಕರ ಮನೆಗಳಿಗೆ ಮಧ್ಯರಾತ್ರಿ ಪೊಲೀಸರು ಭೇಟಿ ನೀಡಿದ ಪ್ರಕರಣ ಇದೀಗ ರಾಷ್ಟ್ರೀಯ ಮಟ್ಟದ ತನಿಖೆಗೆ ಗುರಿಯಾಗಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗ (NHRC) ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿ, ಡಿಎಸ್ಪಿ ರ್ಯಾಂಕ್ ಅಧಿಕಾರಿಯಾದ ಮಣಿಂದರ್ ಗಿಲ್ ನೇತೃತ್ವದ ತಂಡವನ್ನು ಮಂಗಳೂರಿಗೆ ನಿಯೋಜಿಸಿದೆ.
ಈ ತನಿಖೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ದೂರು ಆಧಾರಿತವಾಗಿದೆ. ಅವರು ಹಿಂದೂ ಮುಖಂಡರ ಮನೆಗಳಿಗೆ ನಡೆದ ಪೊಲೀಸ್ ದಾಳಿಯನ್ನು ಪ್ರಶ್ನಿಸಿ ಮಾನವ ಹಕ್ಕು ಉಲ್ಲಂಘನೆ ನಡೆದಿದೆ ಎಂದು ಎನ್‌ಎಚ್‌ಆರ್‌ಸಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಎಚ್‌ಆರ್‌ಸಿ ತನಿಖಾ ವಿಭಾಗದ ಅಧಿಕಾರಿ ಮಣಿಂದರ್ ಗಿಲ್ ಅವರು ಸ್ಥಳಕ್ಕೆ ಭೇಟಿ ನೀಡಿ, ಈಗಾಗಲೇ ಶಾಸಕ ಭರತ್ ಶೆಟ್ಟಿ ಅವರಿಂದ ಮಾಹಿತಿ ಪಡೆದು, ಪುತ್ತೂರು, ಸುಳ್ಯ ಹಾಗೂ ಕಡಬ ಭಾಗಗಳಲ್ಲಿ ಹಲವರ ವಿಚಾರಣೆ ನಡೆಸಿದ್ದಾರೆ.
ತನಿಖಾಧಿಕಾರಿಗಳ ತಂಡ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಪ್ರಮುಖ ನಾಯಕರನ್ನು ಭೇಟಿ ಮಾಡಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಇದರ ಜೊತೆಗೆ, ಮಧ್ಯರಾತ್ರಿ ಮನೆಗೆ ಭೇಟಿ ನೀಡಿದ ಪೊಲೀಸರ ಸಿಸಿಟಿವಿ ದೃಶ್ಯಗಳು, ಅಪರಾಧ ಪೂರ್ವ ದಾಖಲೆಗಳು, ಮತ್ತು ಸಂಘಟನೆಗಳ ಚಟುವಟಿಕೆಗಳ ವಿವರಗಳು ಕೂಡ ಸಂಗ್ರಹಿಸಲಾಗುತ್ತಿದೆ. ಪೊಲೀಸರ ದಾಖಲೆಗಳ ಪರಿಶೀಲನೆ ಮಾಡಿ, ಸ್ಥಳ ಪರಿಶೀಲನೆ ನಡೆಸಿ ಎರಡು ವಾರಗಳಲ್ಲಿ 'Action Taken Report' ಸಲ್ಲಿಸಲು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸ್ಪಷ್ಟ ಸೂಚನೆ ನೀಡಿದೆ.
ಈ ಘಟನೆ ರಾಜ್ಯದ ರಾಜಕೀಯ ವಲಯದಲ್ಲಿ ಕೂಡ ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ನಡವಳಿಕೆಯನ್ನು ಪ್ರಶ್ನಿಸುವ ಧ್ವನಿಗಳು ಎದ್ದಿವೆ. ಜಿಲ್ಲಾ ಎಸ್‌ಪಿ ವಿರುದ್ಧವೂ ದೂರುಗಳು ನೊಂದಾಯವಾಗಿರುವುದರಿಂದ, ಎನ್‌ಎಚ್‌ಆರ್‌ಸಿ ತನಿಖೆ ಪ್ರಾಮಾಣಿಕ ಹಾಗೂ ದಕ್ಷವಾಗಿ ನಡೆಯುತ್ತಿದೆ ಎನ್ನುವುದು ಸಾರ್ವಜನಿಕ ನಿರೀಕ್ಷೆ.