Bengaluru: ಅಕ್ರಮ ಗಣಿಗಾರಿಕೆ ಕೇಸ್, ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್, ಮಾಜಿ ಸಿಎಂ ನಿರಾಳ

Published : Oct 28, 2026, 10:12 AM IST
Siddaramaiah

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಕ್ರಮ ಗಣಿಗಾರಿಕೆ ಪರವಾನಗಿ ಆರೋಪದಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದ ಪಿಐಎಲ್ ವಜಾ ಆದೇಶವನ್ನು ಹೈಕೋರ್ಟ್ ಕಾಯಂಗೊಳಿಸಿದೆ. ಅರ್ಜಿದಾರರು ಸೂಕ್ತವಾಗಿ ಸ್ಪಂದಿಸದ ಕಾರಣ ವಕೀಲರು ಹಿಂದೆ ಸರಿದಿದ್ದು, ನ್ಯಾಯಾಲಯವು ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದೆ.

ಬೆಂಗಳೂರು: ಗಣಿಗಾರಿಕೆಗೆ ಅಕ್ರಮವಾಗಿ ಪರವಾನಗಿ ಮಂಜೂರು, ನವೀಕರಣ ಮಾಡಿದ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಲು ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ನಿರ್ದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಜಾ ಆದೇಶವನ್ನು ಹೈಕೋರ್ಟ್ ಮಂಗಳವಾರ ಕಾಯಂಗೊಳಿಸಿದೆ.

ಗಣಿಗಾರಿಕೆಗೆ ಮಾಜಿ ಸಿಎಂ ಸಿದ್ದು ಅಕ್ರಮ ಪರವಾನಗಿ: ಆರೋಪ

ಈ ಕುರಿತು ಬೆಂಗಳೂರಿನ ಉದ್ಯಮಿಯಾದ ಹೆಸರುಘಟ್ಟ ರಸ್ತೆಯ ಎಬಿಜಿ ಬಡಾವಣೆ ನಿವಾಸಿ ಎಂ.ಪಿ.ವೇಣುಗೋಪಾಲ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿ, ನ್ಯಾಯಮೂರ್ತಿಗಳಾದ ಅನು ಶಿವಾರಾಮನ್ ಮತ್ತು ಕೆ.ಎಸ್.ಭರತ್ ಕುಮಾರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಪ್ರಾಸಿಕ್ಯೂಷನ್‌ಗೆ ಗವರ್ನರ್‌, ರಾಜ್ಯಕ್ಕೆ ಸೂಚಿಸುವಂತೆ ಅರ್ಜಿ

ವಿಚಾರಣೆ ವೇಳೆ ಸರ್ಕಾರದ ಪರ ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ಇದೇ ವಿಚಾರವಾಗಿ ಈ ಹಿಂದೆ ಅರ್ಜಿದಾರರು ದಾಖಲಿಸಿದ್ದ ಖಾಸಗಿ ದೂರನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಲೋಕಾಯುಕ್ತರು ಸಹ ದೂರು ಪರಿಗಣಿಸಿರಲಿಲ್ಲ. ಹೀಗಿದ್ದರೂ ಆ ಅಂಶಗಳನ್ನೇ ಆಧರಿಸಿ 2025ರ ಏಪ್ರಿಲ್‌ನಲ್ಲಿ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅವರು ವಿಚಾರಣೆಗೆ ಸತತವಾಗಿ ಗೈರಾಗಿದ್ದಕ್ಕೆ 2025ರ ಸೆ.19ರಂದು ಹೈಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿತ್ತು. ಅದನ್ನು ಹಿಂಪಡೆಯುವಂತೆ ಕೋರಿ ಅರ್ಜಿದಾರರು ಈ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅದನ್ನು ವಜಾಗೊಳಿಸಬೇಕು ಎಂದು ಕೋರಿದರು.

ವಕೀಲ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್ ನಕಾರ

ಮತ್ತೊಂದೆಡೆ ಅರ್ಜಿದಾರರ ಪರ ವಕೀಲರು, ಪ್ರಕರಣ ಸಂಬಂಧ ತಮಗೆ ಅರ್ಜಿದಾರರು ಸೂಕ್ತ ಸ್ಪಂದಿಸುತ್ತಿಲ್ಲ. ಹಾಗಾಗಿ, ಅರ್ಜಿಯಿಂದ ತಾವು ಹಿಂದೆ ಸರಿಯುತ್ತೇವೆ ಎಂದು ತಿಳಿಸಿ ಮೆಮೊ ಸಲ್ಲಿಸಿದರು. ಅದನ್ನು ಪರಿಗಣಿಸಿದ ಪೀಠ, ಮಧ್ಯಂತರ ಅರ್ಜಿ ವಜಾಗೊಳಿಸಿತು. ಆ ಮೂಲಕ ಪಿಐಎಲ್‌ ವಜಾ ಆದೇಶವನ್ನು ಕಾಯಂಗೊಳಿಸಿತು.

ಪ್ರಕರಣವೇನು?

2015ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಅನೇಕ ಕಂಪನಿಗಳಿಗೆ ಅಕ್ರಮವಾಗಿ ಗಣಿಗಾರಿಕೆ ಪರವಾನಗಿ ನೀಡಿದ್ದಾರೆ ಹಾಗೂ ಕೆಲ ಕಂಪನಿಗಳ ಪರವಾನಗಿ ನವೀಕರಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶಿಸಿ, ತನಿಖಾ ವರದಿ ಪಡೆದುಕೊಳ್ಳಬೇಕು. ಅಕ್ರಮವಾಗಿ ಪರವಾನಗಿ ನೀಡಿದರ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟ ವಸೂಲಿ ಮಾಡಬೇಕು. ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಸರ್ಕಾರ ಮತ್ತು ರಾಜ್ಯಪಾಲರಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದರು. ಆ ಅರ್ಜಿಯನ್ನು 2025ರ ಸೆ.19ರಂದು ಹೈಕೋರ್ಟ್‌ ವಜಾಗೊಳಿಸಿತ್ತು.

PREV
Read more Articles on
click me!

Recommended Stories

One Ward One Drive campaign: ಉತ್ತರ ಪಾಲಿಕೆಯ ಈ 18 ಜಂಕ್ಷನ್‌ ಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ!
KMF ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಸಾರಿಗೆ ಇಲಾಖೆಯಿಂದ ಮತ್ತೊಂದು ಬಿಗ್ ಶಾಕ್!