‘ನೂಲಿನಲ್ಲಿ ನಮ್ಮ ಇತಿಹಾಸ... ಜವಳಿಯಲ್ಲಿ ನಮ್ಮ ಭವಿಷ್ಯ’: ಕೈಮಗ್ಗಕ್ಕೆ ಸರ್ಕಾರದ ಬಿಗ್ ಪ್ಲ್ಯಾನ್

Published : Aug 07, 2026, 08:33 PM IST
Rohini Sindhuri

ಸಾರಾಂಶ

Karnataka Handloom: ರಾಜ್ಯದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಜೀವನೋಪಾಯವನ್ನು ಬಲಪಡಿಸುವ ಜೊತೆಗೆ ಕರ್ನಾಟಕದ ಕೈಮಗ್ಗ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ..

ಬೆಂಗಳೂರು (ಆ.07): ರಾಜ್ಯದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಜೀವನೋಪಾಯವನ್ನು ಬಲಪಡಿಸುವ ಜೊತೆಗೆ ಕರ್ನಾಟಕದ ಕೈಮಗ್ಗ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಗುರುತನ್ನು ಸೃಷ್ಟಿಸುವ ಉದ್ದೇಶದಿಂದ, ರಾಜ್ಯ ಸರ್ಕಾರದ ಮುಂಬರುವ ಕರ್ನಾಟಕ ಜವಳಿ ಮತ್ತು ಉಡುಪು ನೀತಿಯಲ್ಲಿ ಕೈಮಗ್ಗ ಕ್ಷೇತ್ರದ ಪ್ರಚಾರಕ್ಕೆ ವಿಶೇಷ ಅನುದಾನ ಮೀಸಲಿಡಲಾಗಿದೆ ಎಂದು ಎಂ ಎಸ್ ಎಂ ಇ, ಗಣಿ ಮತ್ತು ಜವಳಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದರು.

ಇಂದು 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ರಾಜ್ಯದ ಕೈಮಗ್ಗ ಪರಂಪರೆ ಕೇವಲ ಸಾಂಸ್ಕೃತಿಕ ಪರಂಪರೆಯಲ್ಲ; ಸಾವಿರಾರು ನೇಕಾರರ ಜೀವನಾಧಾರವೂ ಹೌದು. ಈ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಆಧುನಿಕ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳಿಸಿ, ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು.

ವಿಶೇಷ ಅನುದಾನದ ಮೂಲಕ ಕೈಮಗ್ಗ ಕ್ಷೇತ್ರದಲ್ಲಿ ವಿನ್ಯಾಸ ಅಭಿವೃದ್ಧಿ, ಉತ್ಪನ್ನ ಮೌಲ್ಯವರ್ಧನೆ, ಬ್ರ್ಯಾಂಡಿಂಗ್, ಡಿಜಿಟಲ್ ಮಾರುಕಟ್ಟೆ, ಇ-ಕಾಮರ್ಸ್, ಮಾರುಕಟ್ಟೆ ವಿಸ್ತರಣೆ ಹಾಗೂ ನೇಕಾರರ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ರೋಹಿಣಿ ಸಿಂಧೂರಿ ಉದ್ಘಾಟಿಸಿದರು.

ಜವಳಿ ಅಭಿವೃದ್ಧಿ ಆಯುಕ್ತರಾದ ಎ.ಬಿ. ಬಸವರಾಜು ಮಾತನಾಡಿ, ಕರ್ನಾಟಕದ ಕೈಮಗ್ಗ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಿ ಪರಿಚಯಿಸುವ ಗುರಿಯೊಂದಿಗೆ ಹೊಸ ಜವಳಿ ನೀತಿ ರೂಪಿಸಲಾಗುತ್ತಿದೆ ಎಂದರು. "ಕರ್ನಾಟಕದ ಕೈಮಗ್ಗ ಕ್ಷೇತ್ರವು ನಮ್ಮ ಸಂಸ್ಕೃತಿ ಮತ್ತು ಆರ್ಥಿಕತೆಯ ಅಮೂಲ್ಯ ಆಸ್ತಿ. ಹೊಸ ಜವಳಿ ನೀತಿ ಹಾಗೂ ಸಾಮಾಜಿಕ ಜಾಲತಾಣ ಅಭಿಯಾನದ ಮೂಲಕ ರಾಜ್ಯದ ಕೈಮಗ್ಗ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ," ಎಂದು ಹೇಳಿದರು.

ಅಲ್ಲದೆ, "ನಮ್ಮ ನೇಕಾರರ ಕೌಶಲ್ಯಕ್ಕೆ ಜಾಗತಿಕ ಮನ್ನಣೆ ದೊರಕುವಂತೆ ವಿನ್ಯಾಸ, ತಂತ್ರಜ್ಞಾನ, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಸಂಪರ್ಕಕ್ಕೆ ಇಲಾಖೆ ವಿಶೇಷ ಆದ್ಯತೆ ನೀಡುತ್ತಿದೆ," ಎಂದು ತಿಳಿಸಿದರು. ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, "ಕೈಮಗ್ಗವು ಕೇವಲ ಒಂದು ವೃತ್ತಿಯಲ್ಲ; ಅದು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ನೇಕಾರರ ಕೈಚಳಕವನ್ನು ಗೌರವಿಸುವುದು ನಮ್ಮ ಪರಂಪರೆಯನ್ನು ಉಳಿಸುವುದಕ್ಕೆ ಸಮಾನ," ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳದ ಅಧ್ಯಕ್ಷ ಬಿ.ಜೆ. ಗಣೇಶ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ಸಾರ್, ಕಾವೇರಿ ಹ್ಯಾಂಡ್‌ಲೂಮ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ, ಜವಳಿ ಇಲಾಖೆಯ ಅಪರ ನಿರ್ದೇಶಕರಾದ ಸಿಎಸ್‌ ಯೋಗೀಶ್‌, ಶ್ರೀಧರ್‌ ನಾಯರ್‌ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು, ನೇಕಾರರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ಉಪಸ್ಥಿತರಿದ್ದರು.

ವಿಶೇಷ ಕೈಮಗ್ಗ ಪ್ಯಾಕೇಜ್‌ನ ಪ್ರಮುಖ ಅಂಶಗಳು

- ಕೈಮಗ್ಗ ಕ್ಷೇತ್ರಕ್ಕೆ ವಿಶೇಷ ಅನುದಾನ

- ನೇಕಾರರ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಒತ್ತು

- ವಿನ್ಯಾಸ ಅಭಿವೃದ್ಧಿ ಮತ್ತು ಉತ್ಪನ್ನ ಮೌಲ್ಯವರ್ಧನೆ

- ಡಿಜಿಟಲ್ ಪ್ರಚಾರ ಮತ್ತು ಇ-ಕಾಮರ್ಸ್ ಉತ್ತೇಜನ

- ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕರ್ನಾಟಕ ಕೈಮಗ್ಗಕ್ಕೆ ಹೊಸ ಗುರುತು

- "ನೂಲಿನಲ್ಲಿ ನಮ್ಮ ಇತಿಹಾಸ... ಜವಳಿಯಲ್ಲಿ ನಮ್ಮ ಭವಿಷ್ಯ" ರಾಜ್ಯವ್ಯಾಪಿ ಸಾಮಾಜಿಕ ಜಾಲತಾಣ ಅಭಿಯಾನ ಆರಂಭ

PREV
Read more Articles on
click me!

Recommended Stories

ಬೆಂಗಳೂರು: ಭಾನುವಾರ ಬೈಯಪ್ಪನಹಳ್ಳಿ - ಎಂ.ಜಿ. ರಸ್ತೆ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ!
7 ದಿನಗಳಲ್ಲಿ ಮಳಿಗೆ ಖಾಲಿ ಮಾಡಿ! ಗಂಗಾವತಿಯಲ್ಲಿ 11 ಮಾಲೀಕರಿಗೆ ನಗರಸಭೆ ನೋಟಿಸ್