ಹಾಲಿನಿಂದ ಬಸ್‌ವರೆಗೆ ಎಲ್ಲದರ ದರ ಏರಿಕೆ ಮಾಡಿ ಸರ್ಕಾರಿ ನೌಕರರಿಗೆ DA ಹೆಚ್ಚಳ ಮಾಡಿದ ರಾಜ್ಯ ಸರ್ಕಾರ

Published : Nov 05, 2026, 04:51 PM IST
employees DA Hike

ಸಾರಾಂಶ

ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 15.75 ರಿಂದ ಶೇ. 18 ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ದರವು ಪೂರ್ವಾನ್ವಯವಾಗಿ ಜಾರಿಗೆ ಬರಲಿದ್ದು, ನೌಕರರಿಗೆ ದೀಪಾವಳಿ ಹಬ್ಬದ ಭಾರಿ ಸಿಹಿ ಸುದ್ದಿ ನೀಡಿದೆ.

ಬೆಂಗಳೂರು (ನ.5): ರಾಜ್ಯದಲ್ಲಿ ಹಾಲು, ಮೊಸರು, ತುಪ್ಪ, ಬಸ್‌ ದರ ಸೇರಿದಂತೆ ಎಲ್ಲವನ್ನೂ ಬಾಯಿಗೆ ಬಂದಂತೆ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಈಗ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಏರಿಕೆ ಮಾಡಿ ಸಮಾಧಾನ ನೀಡಿದೆ. ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ದೀಪಾವಳಿ ಹಬ್ಬದ ಭಾರಿ ದೊಡ್ಡ ಸಿಹಿ ಸುದ್ದಿ ನೀಡಿದೆ: 2024 ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು (Dearness Allowance - DA) ಮೂಲ ವೇತನದ ಶೇಕಡಾ 2.25 ರಷ್ಟು ಹೆಚ್ಚಳ ಮಾಡಿ ಆರ್ಥಿಕ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ!

ಸರ್ಕಾರದ ಈ ನೂತನ ಆದೇಶದ ಪ್ರಕಾರ, ಪ್ರಸ್ತುತ ಮೂಲ ವೇತನದ ಶೇಕಡಾ 15.75 ರಷ್ಟಿದ್ದ ತುಟ್ಟಿಭತ್ಯೆಯ ದರವನ್ನು ಶೇಕಡಾ 18 ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲಾಗಿದೆ. ಈ ಹೆಚ್ಚಳವು 2026 ರ ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ (Retroactive) ಜಾರಿಗೆ ಬರಲಿದೆ.

ಪಿಂಚಣಿದಾರರು ಹಾಗೂ ಅನುದಾನಿತ ಸಂಸ್ಥೆಗಳಿಗೂ ಅನ್ವಯ

ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು (Pensioners), ಕುಟುಂಬ ನಿವೃತ್ತಿ ವೇತನದಾರರು ಹಾಗೂ ಸಂಚಿತ ನಿಧಿಯಿಂದ ಪಿಂಚಣಿ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಪಿಂಚಣಿದಾರರಿಗೂ ದಿನಾಂಕ 1ನೇ ಜುಲೈ 2026 ರಿಂದ ಜಾರಿಗೆ ಬರುವಂತೆ ಮೂಲ ಪಿಂಚಣಿಯ ಶೇ. 15.75 ರಿಂದ ಶೇ. 18 ಕ್ಕೆ ಹೆಚ್ಚಿಸಿ ಆದೇಶಿಸಲಾಗಿದೆ. ಯುಜಿಸಿ (UGC), ಎಐಸಿಟಿಇ (AICTE) ಹಾಗೂ ಐಸಿಎಆರ್ (ICAR) ವೇತನ ಶ್ರೇಣಿಗಳಲ್ಲಿ ನಿವೃತ್ತರಾಗಿ ರಾಜ್ಯ ಪಿಂಚಣಿ ಪಡೆಯುತ್ತಿರುವವರಿಗೂ ಈ ಆದೇಶ ಅನ್ವಯಿಸುತ್ತದೆ. ಸರ್ಕಾರಿ ಹಾಗೂ ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರು, ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರು ಮತ್ತು ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ನೌಕರರಿಗೂ ಈ ಹೆಚ್ಚಳದ ಲಾಭ ಸಿಗಲಿದೆ.

ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಯಲ್ಲಿ ಪ್ರಸ್ತುತ ಸೇವೆಯಲ್ಲಿರುವ ನೌಕರರು ಮತ್ತು ಎನ್‌ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರಿ ನೌಕರರ ಮುಖದಲ್ಲಿ ಮಂದಹಾಸ

ಈ ಆದೇಶದ ಮೇರೆಗೆ ಲಭ್ಯವಾಗುವ ಹೆಚ್ಚುವರಿ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ (Cash) ಪಾವತಿಸಲಾಗುವುದು. ಆದೇಶದನ್ವಯ ಲಭ್ಯವಾಗುವ ತುಟ್ಟಿಭತ್ಯೆ ಬಾಕಿ ಮೊತ್ತವನ್ನು (Arrears) ನವೆಂಬರ್ ತಿಂಗಳ ವೇತನ/ಪಿಂಚಣಿ ನೀಡುವ ಮೊದಲು ಪಾವತಿ ಮಾಡತಕ್ಕದಲ್ಲ. ಲೆಕ್ಕಾಚಾರದ ವೇಳೆ ಬರುವ 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ಪೂರ್ಣ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಹಾಗೂ 50 ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು. ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ಪ್ರತ್ಯೇಕವಾಗಿ ತೋರಿಸಬೇಕೇ ಹೊರತು, ಯಾವುದೇ ಉದ್ದೇಶಕ್ಕಾಗಿ ಇದನ್ನು 'ಮೂಲ ವೇತನ' ಎಂದು ಪರಿಗಣಿಸಲಾಗುವುದಿಲ್ಲ. ದೀಪಾವಳಿ ಹಬ್ಬದ ಬೆನ್ನಲ್ಲೇ ಕೈ ಸೇರಿದ ಈ ಪರಿಷ್ಕೃತ ತುಟ್ಟಿಭತ್ಯೆ ಆದೇಶವು ರಾಜ್ಯ ಸರ್ಕಾರದ ಲಕ್ಷಾಂತರ ನೌಕರರ ಮೊಗದಲ್ಲಿ ಮಂದಹಾಸ ತಂದಿದೆ.

PREV
Read more Articles on
click me!

Recommended Stories

ಬೆಲೆ ಏರಿಕೆ ಬರೆ ನಡುವೆ ರೈತರಿಗೆ ಗುಡ್‌ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ, ನಿಮ್ಮ ಅಕೌಂಟ್‌ಗೆ ಬರುತ್ತೆ ₹5000
2 ತಿಂಗಳ ನಂತರ 30 ಅಡಿ ಎತ್ತರ, 120 ಟನ್‌ ಭಾರದ ಬಾಹುಬಲಿ ಕವಚ ಕರ್ನಾಟಕಕ್ಕೆ ಎಂಟ್ರಿ, ಎಲ್ಲಿಗೆ ಹೋಗ್ತಿರೋದು ಗೊತ್ತಾ?