
ಬೆಂಗಳೂರು (ಅ.18): ಆರೆಸ್ಸೆಸ್ ವಿರುದ್ಧದ ಸೈದ್ಧಾಂತಿಕ ಹೋರಾಟದಲ್ಲಿ ಸರ್ಕಾರ ಮತ್ತೊಂದು ಹೆಜ್ಜೆ ಇಡಲು ಮುಂದಾಗಿದೆ. ಆರೆಸ್ಸೆಸ್ ಚಟುವಟಿಕೆಗಳಿಗೆ ಅಂಕುಶ ಹಾಕಿದ ಬಳಿಕ, ಮತ್ತೊಂದು ವಿಚಾರಕ್ಕೆ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರು ಸಲಹೆ ನೀಡಿದ್ದಾರೆ. ಇದರಿಂದಾಗಿ ಆರೆಸ್ಸೆಸ್ ಸಂಸ್ಥೆಗಳ ಜಮೀನಿಗೂ ಸರ್ಕಾರ ಕಣ್ಣು ಹಾಕುತ್ತಾ? ಎನ್ನುವ ಪ್ರಶ್ನೆ ಎದ್ದಿದೆ. ಸಚಿವ ಪ್ರಿಯಾಂಕ್ ಖರ್ಗೆಗೆ ಕೆಲ ಕಾಂಗ್ರೆಸ್ ನಾಯಕರಿಂದ ಸಲಹೆ ಬಂದಿದ್ದು, ಅರ್ಧಕ್ಕೆ ನಿಂತಿದ್ದ ಆರ್‌ಎಸ್‌ಎಸ್ ಲ್ಯಾಂಡ್ ಆಡಿಟ್ ಮಾಡುವಂತೆ ಸಲಹೆ ನೀಡಲಾಗಿದೆ.
ಆರ್‌ಎಸ್‌ಎಸ್ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ಪರಿಶೀಲಿಸಲು ಚಿಂತನೆ ಮಾಡಲಾಗಿದೆ. 2023ರಲ್ಲಿ ಸರ್ಕಾರ ರಚನೆಯಾದಾಗ ಸರ್ಕಾರ ಪರಿಶೀಲನೆ ಮಾಡಿತ್ತು. ಬಳಿಕ ಆರೆಸ್ಸೆಸ್ ಲ್ಯಾಂಡ್ ಆಡಿಟ್ ಸರ್ವೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಆರ್‌ಎಸ್‌ಎಸ್ ಹಾಗೂ ಸಹೋದರ ಸಂಸ್ಥೆಗಳಿಗೆ ಸರ್ಕಾರದಿಂದ ಹಂಚಿಕೆಯಾದ ವಿವಾದಿತ ಭೂಮಿಗಳ ಶಾರ್ಟ್‌ಲಿಸ್ಟ್ ಮಾಡಲು ಚಿಂತನೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೆಸ್ಸೆಸ್ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ಜಮೀನುಗಳನ್ನು ಕಾಂಗ್ರೆಸ್ ಸರ್ಕಾರ ಪರಿಶೀಲನೆ ಮಾಡಲಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗಸಂಸ್ಥೆಗಳಿಗೆ ಮಂಜೂರು ಮಾಡಿದ ಭೂಮಿಯ ಪರಿಶೀಲನೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಹರಳೂರಿನಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಕ್ಕೆ (ಸೆಸ್) 116 ಎಕರೆ ಹಂಚಿಕೆ ಮಾಡಲಾಗಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಸರ್ಕಾರೇತರ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ತಿಗೆ ಶೈಕ್ಷಣಿಕ ಉದ್ದೇಶಗಳಿಗಾಗಿ 8.32 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿ ಇದೇ ಸಂಸ್ಥೆಗೆ 5 ಎಕರೆ ಮಂಜೂರಾಗಿದೆ. ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಆನೇಕಲ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿಗೆ ಸುಮಾರಿ 25-30 ಎಕರೆ ಭೂಮಿ ಮಂಜೂರಾಗಿದೆ. ದಕ್ಷಿಣ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಜನ ಸೇವಾ ಟ್ರಸ್ಟ್ ಹೆಸರಿನ ಸಂಸ್ಥೆಗೆ 40.07 ಎಕರೆ ಜಮೀನು ಮಂಜೂರಾಗಿದೆ. ತಾವರೆಕೆರೆಯಲ್ಲಿ ಜನಸೇವಾ ಟ್ರಸ್ಟ್‌ಗೆ ಮಂಜೂರಾತಿಯಾಗಿದೆ ಎಂದು ಹೇಳಲಾಗಿರುವ 25 ಎಕರೆ ಜಮೀನು ಬಗ್ಗೆ ಪರಿಶೀಲನೆ ನಡೆಯಲಿದೆ.
ಅದರೊಂದಿಗೆ ಶಿವಮೊಗ್ಗದಲ್ಲಿ ನೀರಾವರಿ ಇಲಾಖೆಗೆ ಸೇರಿದ ಎರಡು ಎಕರೆ ಜಾಗವನ್ನು ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರದ ಹೆಸರಿನಲ್ಲಿ ಸಂಸ್ಥೆಯೊಂದಕ್ಕೆ ಮಂಜೂರು ಮಾಡಲಾಗಿದೆ. ಮುಧೋಳದಲ್ಲಿ ಬಿಜೆಪಿ ಕಚೇರಿ ನಿರ್ಮಾಣಕ್ಕೆ 134 ಚ.ಮೀ.ನಷ್ಟು ಜಾಗ ನೀಡಲಾಗಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ ಹಲವಾರು ಜಮೀನುಗಳ ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಆರ್ ಎಸ್ ಎಸ್ ಜೊತೆಗೆ ಗುರುತಿಸಿಕೊಂಡ ಸಂಘಟನೆಗಳು, ಎನ್.ಜಿ.ಓಗಳಿಗೆ ಹಂಚಿಕೆಯಾದ ಸರ್ಕಾರಿ ಜಮೀನುಗಳ ಲ್ಯಾಂಡ್ ಆಡಿಟ್ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಕಾನೂನು ಪ್ರಕಾರ ಜಮೀನು ಹಂಚಿಕೆ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.